
ಇಡೀ ವಿಶ್ವವೇ ಬೆಕ್ಕಸ ಬೆರಗುಗಣ್ಣಿನಿಂದ ಕಾಯುತ್ತಿರುವ ರೋಚಕ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ.
ಕ್ರಿಕೆಟ್ ಪ್ರೇಮಿಗಳ ಉಸಿರು ಬಿಗಿ ಹಿಡಿಯುವಂತೆ ಮಾಡುವ ಜಗತ್ತಿನ ಏಕೈಕ ಕದನ ಅಂದ್ರೆ ಅದು ಇಂಡೋ-ಪಾಕ್ (India vs Pakistan) ಕ್ರಿಕೆಟ್ ಪಂದ್ಯ. 4 ವರ್ಷಗಳ ಬಳಿಕ ಏಕದಿನ ಕ್ರಿಕೆಟ್ನಲ್ಲಿ ಭಾರತ-ಪಾಕ್ ತಂಡಗಳು ಮೊದಲ ಬಾರಿಗೆ ಮುಖಾಮುಖಿಯಗುತ್ತಿರುವುದು ಸ್ಪರ್ಧೆಯ ರೋಚಕತೆಯನ್ನು ಇನ್ನಷ್ಟು ಇಮ್ಮಡಿಗೊಳಿಸಿದೆ. ಸಾಂಪ್ರದಾಯಿಕ ಎದುರಾಳಿಯನ್ನು ರೋಹಿತ್ (Rohit Sharma) ಪಡೆ ಮಣಿಸೋದನ್ನು ಸಂಭ್ರಮಿಸೋಕೆ ಟೀಂ ಇಂಡಿಯಾ (Team India) ಅಭಿಮಾನಿಗಳು ಕಾತರರಾಗಿದ್ದಾರೆ. ಆದರೆ ಅದಕ್ಕೂ ಮುನ್ನ ಈ ಉಭಯ ತಂಡಗಳ ನಡುವೆ ನಡೆದ ಈ ಐದು ಪ್ರಮುಖ ಹೈವೋಲ್ಟೇಜ್ ಕದನಗಳ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನಾವು ನಿಮಗೆ ಹೇಳಲಿದ್ದೇವೆ.
ಅದು 2010ರ ಏಷ್ಯಾ ಕಪ್ ಟೂರ್ನಿ.. ಶ್ರೀಲಂಕಾದ ಡಂಬುಲ್ಲಾ ಮೈದಾನದಲ್ಲಿ ನಡೆದಿದ್ದ ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ. ಆ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಪಾಕಿಸ್ತಾನ 49.3 ಓವರ್ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 267 ರನ್ಗಳ ಗುರಿ ನೀಡಿತ್ತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಪರ ಆರಂಭಿಕ ಗೌತಮ್ ಗಂಭೀರ್, 97 ಬಾಲ್ಗಳಲ್ಲಿ ಭರ್ತಿ 83 ರನ್ ಸಿಡಿಸಿದ್ರು. ಆ ನಂತರ ಬಂದ ನಾಯಕ ಎಂ.ಎಸ್.ಧೋನಿ 71 ಬಾಲ್ಗಳಲ್ಲಿ 56 ರನ್ ಬಾರಿಸಿ ಪೆವಿಯನ್ ಸೇರಿದ್ರು. ಆದರೆ ಬಳಿಕ ಬಂದ ಯಾವುದೇ ಆಟಗಾರರು ಉತ್ತಮ ಪ್ರದರ್ಶನ ನೀಡದ ಕಾರಣ, ಧೋನಿ ಪಡೆ ಸೋಲಿನ ಸನಿಹ ತಲುಪಿತ್ತು. ಆದರೆ ಡೆತ್ ಓವರ್ನಲ್ಲಿ ಪಾಕ್ ಬೌಲರ್ಗಳ ಬೆವರಿಳಿಸಿದ್ದು ಸುರೇಶ್ ರೈನಾ ಮತ್ತು ಹರ್ಬಜನ್ ಸಿಂಗ್ ಜೋಡಿ, 50ನೇ ಓವರ್ನ 4ನೇ ಬಾಲ್ನಲ್ಲಿ ರೋಚಕ ಜಯ ತಂದುಕೊಟ್ಟಿದ್ದರಯ. ಗೆದ್ದೇ ಬಿಟ್ಟೆವು ಅನ್ನೋ ಹುಮ್ಮಸ್ಸಿನಲ್ಲಿದ್ದ ಪಾಕಿಸ್ತಾನಕ್ಕೆ ಟೀಂ ಇಂಡಿಯಾ ಪಡೆ, ಕಡೇ ಓವರ್ನ ಶಾಕ್ ನೀಡಿತ್ತು.
2014ರ ಟಿ20 ವಿಶ್ವಕಪ್ಗೂ ಕೆಲವೇ ತಿಂಗಳ ಮುನ್ನ ವೈರಿ ಪಡೆ ಪಾಕಿಸ್ತಾನ ತಂಡದ ಜೊತೆ ಬಾಂಗ್ಲಾದೇಶದ ಢಾಕಾದಲ್ಲಿ ನಡೆದ ಏಷ್ಯಾಕಪ್‌ನಲ್ಲಿ, ಟೀಂ ಇಂಡಿಯಾ ಸೆಣೆಸಾಡಿತ್ತು. ಮೊದಲಿಗೆ ಬ್ಯಾಟ್ ಹಿಡಿದಿದ್ದ ಭಾರತದ ಬಾಹುಬಲಿಗಳು 50 ಓವರ್ನಲ್ಲಿ ಪಾಕಿಸ್ತಾನಕ್ಕೆ 245 ರನ್ಗಳ ಗುರಿ ನೀಡಿದ್ರು. ಆಡಲು ಕಠಿಣವಾದ ಮೈದಾನ ಎನ್ನಲಾದ ಢಾಕಾದ ಸ್ಲಗ್ಗಿಶ್ ಫೀಲ್ಡ್ನಲ್ಲಿ ಪಾಕ್ ಬೆಂಕಿ ಚಂಡುಗಳಿಗೆ ರವೀಂದ್ರ ಜಡೇಜಾ ಮತ್ತು ಅಂಬತಿ ರಾಯುಡು ತಲಾ ಒಂದೊಂದು ಅರ್ಧ ಶತಕ ಸಿಡಿಸಿ ಖಡಕ್ ಉತ್ತರ ನೀಡಿದ್ದರು.
ಭಾರತ ನೀಡಿದ್ದ 245 ಗುರಿ ಬೆನ್ನತ್ತಿದ್ದ ಪಾಕಿಸ್ತಾನ ತಂಡಕ್ಕೆ 50ನೇ ಓವರ್ನ 4ನೇ ಬಾಲ್ನಲ್ಲಿ ರೋಚಕ ಜಯ ಸಿಕ್ಕಿತ್ತು. ಅಂದು ಪಾಕಿಸ್ತಾನ ಪಡೆಗೆ ಗೆಲುವು ತಂದುಕೊಟ್ಟಿದ್ದು, 7ನೇ ಸ್ಲಾಟ್ನಲ್ಲಿ ಬ್ಯಾಟ್ ಹಿಡಿದು 18 ಬಾಲ್ಗಳಲ್ಲಿ 34 ರನ್ ಸಿಡಿಸಿದ್ದ ಶಾಹಿದ್ ಅಫ್ರಿದಿ ಆಟ.
1984ರಲ್ಲಿ ಏಷ್ಯಾಕಪ್ ಟೂರ್ನಿ ಆರಂಭವಾದ ಪ್ರಪ್ರಥಮ ಟೂರ್ನಿಯಲ್ಲಿ ಪಾಕಿಸ್ತಾನ ತಂಡವನ್ನ ಭಾರತದ ತಂಡ ಬಗ್ಗು ಬಡಿದಿತ್ತು. ದುಬೈನ ಶಾರ್ಜಾನಲ್ಲಿ ನಡೆದ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್ ಮಾಡಿದ್ದ ಭಾರತ ತಂಡ, 188 ರನ್ ಕಲೆ ಹಾಕಿತ್ತು. ಅಲ್ಪ ಗುರಿಯ ಬೆನ್ನಟ್ಟಿದ್ದ ಪಾಕಿಸ್ತಾನ ತಂಡವನ್ನ ಕೇವಲ 134 ರನ್ಗಳಿಗೆ ಸರ್ವಪತನವಾಗುವಂತೆ ಬೆಂಕಿ ಚೆಂಡಿನ ದಾಳಿ ನಡೆಸಿತ್ತು ಭಾರತ. ಹೀಗಾಗಿ ಏಷ್ಯಾಕಪ್ನ ಮೊದಲ ಭಾರತ-ಪಾಕಿಸ್ತಾನದ ಪಂದ್ಯವನ್ನ ಭಾರತ ಭರ್ತಿ 51 ರನ್ಗಳ ಅಂತರದಿಂದ ಗೆದ್ದು ಬೀಗಿತ್ತು.
2004 ರ ಏಷ್ಯಾಕಪ್ ಪಂದ್ಯ ಶ್ರೀಲಂಕಾದ ಕೊಲಂಬೊದಲ್ಲಿ ನಡೆದಿತ್ತು. ಭಾರತದ ವಿರುದ್ಧ ಟೂರ್ನಿಯ ಮೊದಲ ಪಂದ್ಯವಾಡಿದ್ದ ಪಾಕಿಸ್ತಾನ ಭರ್ತಿ 50 ಓವರ್ನಲ್ಲಿ 300 ರನ್ ಸಿಡಿಸಿತ್ತು. ವಿಶೇಷ ಅಂದರೆ ಪಾಕ್ ಆಟಗಾರ ಶೋಯೆಬ್ ಮಲಿಕ್ 127 ಬಾಲ್ಗಳಲ್ಲಿ 143 ರನ್ ಸಿಡಿಸಿ ದಾಖಲೆ ಬರೆದಿದ್ದರು. ಆ ಪಂದ್ಯದಲ್ಲಿ ಭಾರತ 241 ರನ್ಗಳಿಸಲಷ್ಟೇ ಸಾಧ್ಯವಾಗಿತ್ತು.
2012ರಲ್ಲಿ ಬಾಂಗ್ಲಾದ ಮಿರ್ಪುರದಲ್ಲಿ ನಡೆದ ಏಷ್ಯಾಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಏಕಾಂಗಿ ದಂಡಯಾತ್ರೆ ನಡೆಸಿದ್ದು ಚೇಸ್ ಮಾಸ್ಟರ್ ಕೊಹ್ಲಿ. ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟ್ ಮಾಡಿದ್ದ ಪಾಕ್ ಪಡೆ 50 ಓವರ್ನಲ್ಲಿ 329 ರನ್ಗಳ ಬೃಹತ್ ಟಾರ್ಗೆಟ್ ನೀಡಿತ್ತು. ಮೊಹಮ್ಮದ್ ಹಫೀಜ್ ಹಾಗೂ ನಾಸಿರ್ ಜಮ್ಶೆದ್ ತಲಾ ಒಂದು ಶತಕ ಬಾರಿಸಿ ಅಬ್ಬರಿಸಿದ್ದರು. ಅಂದು ಪಾಕಿಸ್ತಾನದ ತಂಡದ ಬೃಹತ್ ರನ್ ಕೋಟೆಯನ್ನ ಏಕಾಂಗಿಯಾಗಿ ಕೆಡವಿದ್ದು ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಅಬ್ಬರದ ಆಟ. 148 ಬಾಲ್ ಎದುರಿಸಿದ ಕೊಹ್ಲಿ ಬರೋಬ್ಬರಿ 183 ರನ್ ಬಾರಿಸಿ ಪಾಕಿಸ್ತಾನ ಬೌಲರ್ಗಳನ್ನ ದಂಗಾಗಿಸಿದ್ದರು. ಈ ಮೂಲಕ ಏಷ್ಯಾಕಪ್ನ ಪಂದ್ಯವೊಂದರಲ್ಲಿ ಅತಿಹೆಚ್ಚು ರನ್ ಸಿಡಿಸಿದ ನಾಯಕ ಅನ್ನೋ ಮೈಲಿಗಲ್ಲನ್ನು ಕೊಹ್ಲಿ ಸ್ಥಾಪಿಸಿದ್ದರು. ಅಂತಿಮವಾಗಿ ಕೊಹ್ಲಿ ವಿಶ್ವಶ್ರೇಷ್ಠ ಆಟಕ್ಕೆ ಪತರಗುಟ್ಟಿದ ಪಾಕ್ ವಿರುದ್ಧ ಭಾರತ 47.5 ಓವರ್ಗಳಲ್ಲೇ 330 ರನ್ ಸಿಡಿಸಿ ಜಯ ದಾಖಲಿಸಿತ್ತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:31 am, Sat, 2 September 23