ಏಷ್ಯಾಕಪ್ನ 5ನೇ ಪಂದ್ಯದಲ್ಲಿ ಟೀಮ್ ಇಂಡಿಯಾ 10 ವಿಕೆಟ್ಗಳ ಅಮೋಘ ಗೆಲುವು ದಾಖಲಿಸಿದೆ. ನೇಪಾಳ ವಿರುದ್ಧದ ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಭಾರತ ತಂಡವು ಸೂಪರ್-4 ಸುತ್ತಿಗೆ ಪ್ರವೇಶಿಸಿದೆ. ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ನೇಪಾಳ ತಂಡವು ಉತ್ತಮ ಆರಂಭ ಪಡೆಯಿತು.
ಆರಂಭದಲ್ಲೇ ಟೀಮ್ ಇಂಡಿಯಾ ಆಟಗಾರರು ಕೈಚೆಲ್ಲಿದ ಮೂರು ಕ್ಯಾಚ್ಗಳ ಸಂಪೂರ್ಣ ಲಾಭ ಪಡೆದ ಕುಶಾಲ್ ಭುರ್ಟೆಲ್ ಹಾಗೂ ಆಸಿಫ್ ಶೇಖ್ ಮೊದಲ ವಿಕೆಟ್ಗೆ 65 ರನ್ಗಳ ಜೊತೆಯಾಟವಾಡಿದರು. ಈ ಹಂತದಲ್ಲಿ ದಾಳಿಗಿಳಿದ ಶಾರ್ದೂಲ್ ಠಾಕೂರ್ ಕುಶಾಲ್ (38) ವಿಕೆಟ್ ಪಡೆದು ಟೀಮ್ ಇಂಡಿಯಾಗೆ ಮೊದಲ ಯಶಸ್ಸು ತಂದುಕೊಟ್ಟರು.
ಮತ್ತೊಂದೆಡೆ ಆಸಿಫ್ ಶೇಖ್ 97 ಎಸೆತಗಳಲ್ಲಿ 8 ಫೋರ್ಗಳೊಂದಿಗೆ 58 ರನ್ ಬಾರಿಸಿದರು. ಈ ಹಂತದಲ್ಲಿ ಸ್ಪಿನ್ ಮೋಡಿ ಮಾಡಿದ ರವೀಂದ್ರ ಜಡೇಜಾ ಮೂರು ವಿಕೆಟ್ಗಳನ್ನು ಪಡೆದು ನೇಪಾಳ ತಂಡಕ್ಕೆ ಶಾಕ್ ನೀಡಿದರು.
ಆದರೆ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸೋಂಪಾಲ್ ಕಮಿ 56 ಎಸೆತಗಳಲ್ಲಿ 48 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 200 ರ ಗಡಿದಾಟಿಸಿದರು. ಈ ವೇಳೆ ದಾಳಿಗಿಳಿದ ಮೊಹಮ್ಮದ್ ಶಮಿ ಸೋಂಪಾಲ್ ವಿಕೆಟ್ ಪಡೆದರು. ಅಲ್ಲದೆ 48.2 ಓವರ್ಗಳಲ್ಲಿ ನೇಪಾಳ ತಂಡವನ್ನು 230 ರನ್ಗಳಿಗೆ ಆಲೌಟ್ ಮಾಡಿದರು.
ಟೀಮ್ ಇಂಡಿಯಾ ಪರ ರವೀಂದ್ರ ಜಡೇಜಾ ಹಾಗೂ ಮೊಹಮ್ಮದ್ ಸಿರಾಜ್ ತಲಾ 3 ವಿಕೆಟ್ ಪಡೆದರೆ, ಶಮಿ, ಹಾರ್ದಿಕ್ ಪಾಂಡ್ಯ ಹಾಗೂ ಶಾರ್ದೂಲ್ ಠಾಕೂರ್ ಒಂದೊಂದು ವಿಕೆಟ್ ಕಬಳಿಸಿದರು.
231 ರನ್ಗಳ ಗುರಿ ಪಡೆದ ಟೀಮ್ ಇಂಡಿಯಾ ಬ್ಯಾಟಿಂಗ್ ವೇಳೆ ಮಳೆ ಬಂದಿದ್ದರಿಂದ ಕೆಲ ಕಾಲ ಪಂದ್ಯವು ಸ್ಥಗಿತಗೊಂಡಿತು. ಮಳೆ ನಿಂತ ಬಳಿಕ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ 23 ಓವರ್ಗಳಲ್ಲಿ ಟೀಮ್ ಇಂಡಿಯಾ 145 ರನ್ಗಳ ಗುರಿ ನೀಡಲಾಯಿತು.
ಈ ಸುಲಭ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾಗೆ ಶುಭ್ಮನ್ ಗಿಲ್ ಹಾಗೂ ರೋಹಿತ್ ಶರ್ಮಾ ಉತ್ತಮ ಆರಂಭ ಒದಗಿಸಿದ್ದರು. ಕೇವಲ 39 ಎಸೆತಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ ಹಿಟ್ಮ್ಯಾನ್ ನೇಪಾಳ ಬೌಲರ್ಗಳ ಬೆಂಡೆತ್ತಿದರು. ಮತ್ತೊಂದೆಡೆ ಶುಭ್ಮನ್ ಗಿಲ್ 47 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
ಅಂತಿಮ ಹಂತದವರೆಗೆ ಅಜೇಯರಾಗಿ ಉಳಿದ ರೋಹಿತ್ ಶರ್ಮಾ (74) ಹಾಗೂ ಶುಭ್ಮನ್ ಗಿಲ್ (67) 20.1 ಓವರ್ಗಳಲ್ಲಿ ತಂಡವನ್ನು ಗುರಿ ಮುಟ್ಟಿಸುವ ಮೂಲಕ ಟೀಮ್ ಇಂಡಿಯಾಗೆ 10 ವಿಕೆಟ್ಗಳ ಭರ್ಜರಿ ಜಯ ತಂದುಕೊಟ್ಟರು. ಈ ಗೆಲುವಿನೊಂದಿಗೆ ಭಾರತ ತಂಡವು ಸೂಪರ್-4 ಹಂತಕ್ಕೇರಿದೆ.
ಭಾರತ (ಪ್ಲೇಯಿಂಗ್ XI): ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.
ಇದನ್ನೂ ಓದಿ: ಏಷ್ಯಾಕಪ್ನಲ್ಲಿ ನಿರ್ಧಾರವಾಗಲಿದೆ ಯಾರು ನಂಬರ್ 1
ನೇಪಾಳ (ಪ್ಲೇಯಿಂಗ್ XI): ಕುಶಾಲ್ ಭುರ್ಟೆಲ್, ಆಸಿಫ್ ಶೇಖ್ (ವಿಕೆಟ್ ಕೀಪರ್), ರೋಹಿತ್ ಪೌಡೆಲ್ (ನಾಯಕ), ಭೀಮ್ ಶರ್ಕಿ, ಸೋಂಪಾಲ್ ಕಾಮಿ, ಗುಲ್ಸನ್ ಝಾ, ದೀಪೇಂದ್ರ ಸಿಂಗ್ ಐರಿ, ಕುಶಾಲ್ ಮಲ್ಲಾ, ಸಂದೀಪ್ ಲಮಿಚಾನೆ, ಕರಣ್ ಕೆಸಿ, ಲಲಿತ್ ರಾಜಬನ್ಶಿ.