ಟೀಮ್ ಇಂಡಿಯಾಗೆ ಬಿಗ್ ಶಾಕ್: ಮೊದಲೆರಡು ಪಂದ್ಯಗಳಿಗೆ ಸ್ಟಾರ್ ಆಟಗಾರ ಅಲಭ್ಯ..!

| Updated By: ಝಾಹಿರ್ ಯೂಸುಫ್

Updated on: Aug 29, 2023 | 2:39 PM

Asia Cup 2023: ಐಪಿಎಲ್​ ವೇಳೆ ಗಾಯಗೊಂಡಿದ್ದ ಕೆಎಲ್ ರಾಹುಲ್ ಆ ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದಾದ ಬಳಿಕ  ಅಭ್ಯಾಸವನ್ನು ಸಹ ಆರಂಭಿಸಿದ್ದರು. ಹೀಗಾಗಿಯೇ ರಾಹುಲ್ ಅವರನ್ನು ಏಷ್ಯಾಕಪ್ ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಆದರೆ ಈ ತಂಡದ ಆಯ್ಕೆಯ ಬೆನ್ನಲ್ಲೇ ರಾಹುಲ್ ಪಾಕಿಸ್ತಾನ್ ವಿರುದ್ಧ ಪಂದ್ಯವಾಡುವುದು ಡೌಟ್ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ತಿಳಿಸಿದ್ದರು.

ಟೀಮ್ ಇಂಡಿಯಾಗೆ ಬಿಗ್ ಶಾಕ್: ಮೊದಲೆರಡು ಪಂದ್ಯಗಳಿಗೆ ಸ್ಟಾರ್ ಆಟಗಾರ ಅಲಭ್ಯ..!
Team India
Follow us on

ಏಷ್ಯಾಕಪ್​ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾಗೆ ಸಂಕಷ್ಟ ಎದುರಾಗಿದೆ. ತಂಡದ ಪ್ರಮುಖ ಆಟಗಾರ ಕೆಎಲ್ ರಾಹುಲ್ ಮೊದಲೆರಡು ಪಂದ್ಯಗಳಲ್ಲಿ ಕಣಕ್ಕಿಳಿಯುವುದಿಲ್ಲ. ಸಂಪೂರ್ಣ ಫಿಟ್​ನೆಸ್ ಹೊಂದಿಲ್ಲದ ಕಾರಣ ಕನ್ನಡಿಗ ಮೊದಲ ಎರಡು ಪಂದ್ಯಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಖಚಿತಪಡಿಸಿದ್ದಾರೆ.

ಇತ್ತ ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಪಾಕಿಸ್ತಾನ್ ವಿರುದ್ಧ ಆಡಲಿದೆ. ಸೆಪ್ಟೆಂಬರ್ 2 ರಂದು ನಡೆಯಲಿರುವ ಈ ಹೈವೋಲ್ಟೇಜ್ ಪಂದ್ಯಕ್ಕೆ ಕೆಎಲ್ ರಾಹುಲ್ ಅಲಭ್ಯರಾಗಲಿದ್ದಾರೆ. ಹಾಗೆಯೇ ಸೆಪ್ಟೆಂಬರ್ 4 ರಂದು ನೇಪಾಳ ವಿರುದ್ಧದ ಪಂದ್ಯದಲ್ಲೂ ಅವರು ಕಣಕ್ಕಿಳಿಯುವುದಿಲ್ಲ. ಅಂದರೆ ಟೀಮ್ ಇಂಡಿಯಾ ಸೂಪರ್-4 ಹಂತಕ್ಕೇರಿದರೆ ಮಾತ್ರ ಕೆಎಲ್ ರಾಹುಲ್ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕೆಎಲ್ ರಾಹುಲ್ ಬದಲಿ ಯಾರು?

ಈ ಬಾರಿಯ ಏಷ್ಯಾಕಪ್​ ತಂಡದಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಆಗಿ ಸ್ಥಾನ ಪಡೆದಿದ್ದಾರೆ. ಇದೀಗ ಕೆಎಲ್​ಆರ್​ ಪ್ಲೇಯಿಂಗ್ ಇಲೆವೆನ್​ನಿಂದ ಹೊರಗುಳಿದರೆ ಇಶಾನ್ ಕಿಶನ್​ಗೆ ಚಾನ್ಸ್ ಸಿಗಲಿದೆ. ಏಕೆಂದರೆ ಕಿಶನ್ ಅವರನ್ನು ಹೊರತುಪಡಿಸಿ ಟೀಮ್ ಇಂಡಿಯಾದಲ್ಲಿ ಬದಲಿ ವಿಕೆಟ್ ಕೀಪರ್ ಬ್ಯಾಟರ್​ ಇಲ್ಲ. ಹೀಗಾಗಿ ಪಾಕಿಸ್ತಾನ್ ಹಾಗೂ ನೇಪಾಳ ವಿರುದ್ಧದ ಪಂದ್ಯಗಳಲ್ಲಿ ಇಶಾನ್ ಕಿಶನ್ ಕೀಪರ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

ಕೆಎಲ್​ಆರ್​ ಅನ್​ಫಿಟ್​?

ಐಪಿಎಲ್​ ವೇಳೆ ಗಾಯಗೊಂಡಿದ್ದ ಕೆಎಲ್ ರಾಹುಲ್ ಆ ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದಾದ ಬಳಿಕ  ಅಭ್ಯಾಸವನ್ನು ಸಹ ಆರಂಭಿಸಿದ್ದರು. ಹೀಗಾಗಿಯೇ ರಾಹುಲ್ ಅವರನ್ನು ಏಷ್ಯಾಕಪ್ ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಆದರೆ ಈ ತಂಡದ ಆಯ್ಕೆಯ ಬೆನ್ನಲ್ಲೇ ರಾಹುಲ್ ಪಾಕಿಸ್ತಾನ್ ವಿರುದ್ಧ ಪಂದ್ಯವಾಡುವುದು ಡೌಟ್ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ತಿಳಿಸಿದ್ದರು. ಅಂದರೆ ಅವರು ಪಂದ್ಯವಾಡಲು ಸಾಮರ್ಥ್ಯವನ್ನು ಹೊಂದಿದ್ದರೂ ಸಂಪೂರ್ಣ ಫಿಟ್​ನೆಸ್ ಹೊಂದಿಲ್ಲ. ಹೀಗಾಗಿ ಸೆಪ್ಟೆಂಬರ್ 2 ರ ಬಳಿಕ ಅವರು ಆಡುವ ನಿರೀಕ್ಷೆಯಿದೆ ಎಂದು ತಿಳಿಸಲಾಗಿತ್ತು.

ಆದರೆ ಆಲೂರಿನಲ್ಲಿ ನಡೆದ ಟೀಮ್ ಇಂಡಿಯಾ ಶಿಬಿರದಲ್ಲಿ ಕಾಣಿಸಿಕೊಂಡ ಕೆಎಲ್ ರಾಹುಲ್ ಅವರು ಯೋ ಯೋ ಟೆಸ್ಟ್​ನಲ್ಲಿ ಭಾಗವಹಿಸಿಲ್ಲ. ಇದಕ್ಕೆ ಮುಖ್ಯ ಕಾರಣ ಅವರ ಫಿಟ್​ನೆಸ್ ಸಮಸ್ಯೆ ಎನ್ನಲಾಗಿದೆ. ಇದೇ ಕಾರಣದಿಂದಾಗಿ ಇದೀಗ ಏಷ್ಯಾಕಪ್​ನ ಮೊದಲೆರಡು ಪಂದ್ಯಗಳಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.

ಸೂಪರ್​ ಫೋರ್​ನಲ್ಲಿ ಕಣಕ್ಕೆ:

ಏಷ್ಯಾಕಪ್​ನ ಮೊದಲ ಸುತ್ತಿನಲ್ಲಿ ಟೀಮ್ ಇಂಡಿಯಾ ಕೇವಲ 2 ಪಂದ್ಯಗಳನ್ನಾಡಲಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ತಂಡವನ್ನು ಎದುರಿಸಿದರೆ, ಎರಡನೇ ಪಂದ್ಯದಲ್ಲಿ ನೇಪಾಳ ವಿರುದ್ಧ ಕಣಕ್ಕಿಳಿಯಲಿದೆ. ಈ ಎರಡು ಪಂದ್ಯಗಳನ್ನು ಗೆದ್ದು ಅಥವಾ ಒಂದು ಪಂದ್ಯದಲ್ಲಿ ಜಯ ಸಾಧಿಸಿ ಉತ್ತಮ ನೆಟ್​ ರನ್​​ ರೇಟ್​ನೊಂದಿಗೆ ಗ್ರೂಪ್-ಎ ಪಾಯಿಂಟ್ ಟೇಬಲ್​​ನಲ್ಲಿ ಮೊದಲೆರಡು ಸ್ಥಾನಗಳಲ್ಲಿ ಕಾಣಿಸಿಕೊಂಡರೆ ಟೀಮ್ ಇಂಡಿಯಾ ಸೂಪರ್-4 ಹಂತಕ್ಕೇರಲಿದೆ.

ಸೂಪರ್-4 ನಲ್ಲಿ ಒಟ್ಟು ನಾಲ್ಕು ತಂಡಗಳು ಕಣ್ಕಕಿಳಿಯಲಿದ್ದು, ಈ ಹಂತದಲ್ಲಿ ಪ್ರತಿ ತಂಡಗಳು ತಲಾ 3 ಪಂದ್ಯಗಳನ್ನಾಡಲಿದೆ. ಅಂದರೆ ಟೀಮ್ ಇಂಡಿಯಾ ಸೂಪರ್-ಫೋರ್ ಹಂತಕ್ಕೇರಿದರೆ ಕೆಎಲ್ ರಾಹುಲ್ ಕಣಕ್ಕಿಳಿಯಬಹುದು. ಇಲ್ಲಿ ಭಾರತ ತಂಡಕ್ಕೆ ಮೂರು ಪಂದ್ಯಗಳಿರಲಿದ್ದು, ಇಲ್ಲಿನ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳಲ್ಲಿ ಕಾಣಿಸಿಕೊಂಡರೆ ಮಾತ್ರ ಟೀಮ್ ಇಂಡಿಯಾ  ಫೈನಲ್​ಗೆ ಪ್ರವೇಶಿಸಲಿದೆ.

ಇದನ್ನೂ ಓದಿ: ಏಷ್ಯಾಕಪ್​ನಲ್ಲಿ ನಿರ್ಧಾರವಾಗಲಿದೆ ಯಾರು ನಂಬರ್ 1

ಏಷ್ಯಾಕಪ್​ಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಪ್ರಸಿದ್ಧ್ ಕೃಷ್ಣ, ಸಂಜು ಸ್ಯಾಮ್ಸನ್ (ಮೀಸಲು ಆಟಗಾರ).

 

Published On - 2:22 pm, Tue, 29 August 23