Asia Cup 2023: ಭಾರತ-ಪಾಕಿಸ್ತಾನ್ ಮುಖಾಮುಖಿಗೆ ಡೇಟ್ ಫಿಕ್ಸ್

| Updated By: ಝಾಹಿರ್ ಯೂಸುಫ್

Updated on: Jul 19, 2023 | 2:22 PM

Asia Cup 2023: ಆಗಸ್ಟ್ 30 ರಿಂದ ಶುರುವಾಗಲಿರುವ ಈ ಬಾರಿಯ ಏಷ್ಯಾಕಪ್​ ಟೂರ್ನಿಯಲ್ಲಿ ಒಟ್ಟು 13 ಪಂದ್ಯಗಳು ನಡೆಯಲಿದ್ದು, ಇದರ ಫೈನಲ್ ಪಂದ್ಯವು ಸೆಪ್ಟೆಂಬರ್ 17 ರಂದು ಕೊಲಂಬೊದಲ್ಲಿ ನಡೆಯಲಿದೆ.

Asia Cup 2023: ಭಾರತ-ಪಾಕಿಸ್ತಾನ್ ಮುಖಾಮುಖಿಗೆ ಡೇಟ್ ಫಿಕ್ಸ್
Pakistan vs India
Follow us on

Asia Cup 2023: ಬಹುನಿರೀಕ್ಷಿತ ಏಷ್ಯಾಕಪ್ 2023 ಕ್ರಿಕೆಟ್ ಟೂರ್ನಿ ಆಗಸ್ಟ್ 30 ರಿಂದ ಶುರುವಾಗಲಿದೆ. ಹೈಬ್ರಿಡ್ ಮಾದರಿಯಲ್ಲಿ ನಡೆಯಲಿರುವ ಈ ಬಾರಿಯ ಏಷ್ಯಾಕಪ್​ನ ಮೊದಲ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ್ ತಂಡವು ನೇಪಾಳ ತಂಡವನ್ನು ಎದುರಿಸಲಿದೆ. ಈ ಪಂದ್ಯವು ಮುಲ್ತಾನ್​ನಲ್ಲಿ ನಡೆಯಲಿದೆ. ಇನ್ನು ಭಾರತ-ಪಾಕಿಸ್ತಾನ್ ನಡುವಣ ಹೈವೋಲ್ಟೇಜ್ ಪಂದ್ಯವು ಸೆಪ್ಟೆಂಬರ್ 2 ರಂದು ಜರುಗಲಿದ್ದು, ಈ ಪಂದ್ಯಕ್ಕೆ ಶೀಲಂಕಾದ ಕ್ಯಾಂಡಿ ಮೈದಾನವು ಆತಿಥ್ಯವಹಿಸಲಿದೆ.

ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಆಯೋಜಿಸುತ್ತಿರುವ ಈ ಬಾರಿಯ ಏಷ್ಯಾಕಪ್ ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ನಿರ್ಧರಿಸಿದೆ. ಈ ಹಿಂದೆ ಪಾಕ್​ನಲ್ಲಿ ಟೂರ್ನಿ ಆಯೋಜಿಸಿದರೆ ಟೀಮ್ ಇಂಡಿಯಾ ಹೊರಗುಳಿಯುವುದಾಗಿ ಬಿಸಿಸಿಐ ತಿಳಿಸಿತ್ತು. ಅಲ್ಲದೆ ತಟಸ್ಥ ಸ್ಥಳದಲ್ಲಿ ಪಂದ್ಯಾವಳಿಯನ್ನು ಆಯೋಜಿಸುವಂತೆ ಕೇಳಿಕೊಳ್ಳಲಾಗಿತ್ತು.

ಅದರಂತೆ ಇದೀಗ ಹೈಬ್ರಿಡ್ ಮಾದರಿಯಲ್ಲಿ, ಅಂದರೆ 4 ಪಂದ್ಯಗಳು ಪಾಕಿಸ್ತಾನದಲ್ಲಿ, ಇನ್ನುಳಿದ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಇಲ್ಲಿ ಭಾರತದ ಪಂದ್ಯಗಳಿಗೆ ಶ್ರೀಲಂಕಾ ಆತಿಥ್ಯವಹಿಸಲಿದೆ.

ಆಗಸ್ಟ್ 30 ರಿಂದ ಶುರುವಾಗಲಿರುವ ಈ ಬಾರಿಯ ಏಷ್ಯಾಕಪ್​ ಟೂರ್ನಿಯಲ್ಲಿ ಒಟ್ಟು 13 ಪಂದ್ಯಗಳು ನಡೆಯಲಿದ್ದು, ಇದರ ಫೈನಲ್ ಪಂದ್ಯವು ಸೆಪ್ಟೆಂಬರ್ 17 ರಂದು ಕೊಲಂಬೊದಲ್ಲಿ ನಡೆಯಲಿದೆ.

6 ತಂಡಗಳ ನಡುವಣ ಏಕದಿನ ಕಾದಾಟ:

ಈ ಬಾರಿ ಏಷ್ಯನ್ ಕ್ರಿಕೆಟ್ ಕದನದಲ್ಲಿ ಒಟ್ಟು 6 ತಂಡಗಳು ಕಣಕ್ಕಿಳಿಯಲಿವೆ. ಇಲ್ಲಿ ಪಾಕಿಸ್ತಾನ್, ಭಾರತ ಮತ್ತು ನೇಪಾಳ ತಂಡಗಳು ಎ ಗುಂಪಿನಲ್ಲಿದ್ದರೆ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ್ ತಂಡವು ಬಿ ಗುಂಪಿನಲ್ಲಿದೆ.

ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೂಪರ್ ಫೋರ್ ಹಂತಕ್ಕೆ ಅರ್ಹತೆ ಪಡೆಯಲಿದೆ. ಸೂಪರ್​-4 ಪಾಯಿಂಟ್ಸ್​ ಟೇಬಲ್​ನಲ್ಲಿ ಅಗ್ರ ಎರಡು ಸ್ಥಾನಗಳನ್ನು ಅಲಂಕರಿಸುವ ತಂಡಗಳು ಫೈನಲ್‌ಗೆ ಎಂಟ್ರಿ ಕೊಡಲಿದೆ.

ಇನ್ನು ಈ ಬಾರಿ ಏಷ್ಯಾಕಪ್​ ಏಕದಿನ ಮಾದರಿಯಲ್ಲಿ ನಡೆಯಲಿದೆ. ಏಕದಿನ ವಿಶ್ವಕಪ್​ನ ಪೂರ್ವಸಿದ್ಧತೆಗಾಗಿ ಈ ಬಾರಿ ಟೂರ್ನಿಯನ್ನು 50 ಓವರ್​ಗಳಲ್ಲಿ ಆಯೋಜಿಸಲಾಗುತ್ತಿದೆ. ಅಂದರೆ ಏಷ್ಯಾಕಪ್ ಬಳಿಕ ಯಾವ ಐಸಿಸಿ ಟೂರ್ನಿ ನಡೆಯಲಿದೆಯೋ ಅದೇ ಮಾದರಿಯಲ್ಲಿ ಏಷ್ಯಾಕಪ್​ ಅನ್ನು ಆಯೋಜಿಸಲಾಗುತ್ತದೆ.

ಇದನ್ನೂ ಓದಿ: Yuvraj Singh: ಟೀಮ್ ಇಂಡಿಯಾ ಏಕದಿನ ವಿಶ್ವಕಪ್ ಗೆಲ್ಲೋದು ಡೌಟ್: ಯುವರಾಜ್ ಸಿಂಗ್

ಕಳೆದ ವರ್ಷ ಟಿ20 ವಿಶ್ವಕಪ್ ಇದ್ದ ಕಾರಣ ಏಷ್ಯಾಕಪ್ ಅನ್ನು ಟಿ20 ಮಾದರಿಯಲ್ಲಿ ಆಯೋಜಿಸಲಾಗಿತ್ತು. ಇದೀಗ ಏಕದಿನ ವಿಶ್ವಕಪ್​ ಹಿನ್ನಲೆಯಲ್ಲಿ 50 ಓವರ್​ಗಳ ಪಂದ್ಯಾಟವನ್ನು ಆಯೋಜಿಸಲಾಗುತ್ತಿದೆ.