
ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಅಧ್ಯಕ್ಷ ಮತ್ತು ಬಿಸಿಸಿಐ (BCCI) ಕಾರ್ಯದರ್ಶಿ ಜಯ್ ಶಾ (Jay Shah) ತಂತ್ರಕ್ಕೆ ಪಲ್ಟಿ ಹೊಡೆದಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಕೈಲಾಗದವರು ಮೈ ಪರಚಿಕೊಂಡಂತೆ ವರ್ತಿಸುತ್ತಿದೆ. ಏಷ್ಯಾಕಪ್ ಆತಿಥ್ಯದ ಹಕ್ಕು ಕೈಜಾರುವ ಭೀತಿಯಲ್ಲಿರುವ ಪಾಕ್ ಮಂಡಳಿ ತನ್ನ ಎದುರಿಗೆ ಏಷ್ಯಾಕಪ್ ಆಯೋಜನೆಗೆ ಉತ್ಸಾಹ ತೋರುತ್ತಿರುವ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧ ಕೆಂಡಕಾರಲಾರಂಭಿಸಿದೆ. ಈ ಮೊದಲು ಲಂಕಾ ಮಣ್ಣಲ್ಲಿ ಟೆಸ್ಟ್ ಸರಣಿ ಬಳಿಕ ಏಕದಿನ ಸರಣಿ ಆಡುವುದಕ್ಕೂ ಅನುಮತಿ ನೀಡಿದ್ದ ಪಾಕ್ ಕ್ರಿಕೆಟ್ ಮಂಡಳಿ ಇದೀಗ ಏಕದಿನ ಸರಣಿ ಆಡಲು ಒಲ್ಲೆ ಎಂದಿದೆ. ಇದಕ್ಕೆ ಕಾರಣವೂ ಇದ್ದು, ಐಪಿಎಲ್ ಫೈನಲ್ (IPL 2023) ವೇಳೆ ನಡೆದ ಸಭೆಯ ಬಳಿಕ ಏಷ್ಯಾಕಪ್ (Asia Cup) ಪಂದ್ಯಾವಳಿಯ ಆತಿಥ್ಯವನ್ನು ವಹಿಸಿಕೊಳ್ಳಲು ತಾನು ಸಿದ್ಧ ಎಂದು ಲಂಕಾ ಕ್ರಿಕೆಟ್ ಮಂಡಳಿ ಹೇಳಿಕೊಂಡಿತ್ತು. ಇದರಿಂದ ಕೋಪಗೊಂಡಿರುವ ಪಾಕ್ ಮಂಡಳಿ ಲಂಕಾ ವಿರುದ್ಧ ಈ ರಿತಿಯ ನಿಲುವಿಗೆ ಮುಂದಾಗಿದೆ.
ಈ ಮೊದಲು ಏಷ್ಯಾಕಪ್ ಆತಿಥ್ಯದ ಹಕ್ಕನ್ನು ಪಾಕಿಸ್ತಾನ ಪಡೆದುಕೊಂಡಿತ್ತು. ಆದರೆ ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧ ಹದಗೆಟ್ಟಿರುವುದರಿಂದ ಟೀಂ ಇಂಡಿಯಾವನ್ನು ಪಾಕ್ ನೆಲಕ್ಕೆ ಕಳುಹಿಸಲು ಭಾರತ ಸರ್ಕಾರ ಒಲ್ಲೆ ಎಂದಿತ್ತು. ಹೀಗಾಗಿ ಏಷ್ಯಾಕಪ್ ಅನ್ನು ಬೇರೆಡೆಗೆ ಸ್ಥಳಾಂತರಿಸಲು ಬಿಸಿಸಿಐ ಮನವಿ ಮಾಡಿತ್ತು. ಆದರೆ ಬಿಸಿಸಿಐ ಮನವಿಗೆ ತಿರುಗೇಟು ನೀಡಿದ್ದ ಪಾಕ್ ಹೈಬ್ರಿಡ್ ಮಾದರಿಯ (ಟೀಂ ಇಂಡಿಯಾದ ಪಂದ್ಯಗಳು ಸೇರಿದಂತೆ ಕೆಲವು ಪಂದ್ಯಗಳನ್ನು ಯುಎಇಯಂತಹ ತಟಸ್ಥ ಸ್ಥಳದಲ್ಲಿ ನಡೆಸಬೇಕು ಮತ್ತು ಉಳಿದ ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಯಬೇಕು) ಪ್ರಸ್ತಾವನೆಯನ್ನು ಬಿಸಿಸಿಐ ಮುಂದಿಟ್ಟಿತ್ತು. ಬಿಸಿಸಿಐ ಇದಕ್ಕೂ ಸೊಪ್ಪು ಹಾಕದೆ, ತನ್ನ ನಿಲುವನ್ನು ಭಿಗಿಗೊಳಿಸಿತ್ತು.
IND vs PAK, Asia Cup: ಫೈನಲ್ನಲ್ಲಿ ಪಾಕ್ ತಂಡವನ್ನು ಮಣಿಸಿ ದಾಖಲೆಯ 4ನೇ ಬಾರಿಗೆ ಏಷ್ಯಾಕಪ್ ಗೆದ್ದ ಭಾರತ..!
ಆ ನಂತರ ಪಾಕ್ ಮಂಡಳಿಯನ್ನು ಹೊರಗಿಟ್ಟು ಐಪಿಎಲ್ ಪಂದ್ಯದ ವೇಳೆ ಬಾಂಗ್ಲಾ, ಲಂಕಾ, ಅಫ್ಘಾನ್ ಮಂಡಳಿಗಳ ಜೊತೆ ಸಭೆ ನಡೆಸಿದ್ದ ಜಯ್ ಶಾ, ಶ್ರೀಲಂಕಾದಲ್ಲಿ ಏಷ್ಯಾಕಪ್ ನಡೆಸಲು ಈ ಮೂರು ಮಂಡಳಿಗಳ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು. ಈ ಸಭೆಯ ಬಳಿಕ ನಾವು ಏಷ್ಯಾಕಪ್ಗೆ ಆತಿಥ್ಯವಹಿಸಲು ಸಿದ್ಧ ಎಂದು ಲಂಕಾ ಮಂಡಳಿ ಹೇಳಿಕೊಂಡಿತ್ತು. ಲಂಕಾದ ಈ ತೀರ್ಮಾನದಿಂದ ಕೆರಳಿರುವ ಪಾಕ್ ಮಂಡಳಿ ಇದೀಗ ಈ ಉಭಯ ದೇಶಗಳ ನಡುವೆ ಇರುವ ಉತ್ತಮ ಕ್ರಿಕೆಟ್ ಸಂಬಂಧಕ್ಕೆ ಬ್ರೇಕ್ ಹಾಕಲು ಮುಂದಾಗಿದೆ ಎಂದು ವರದಿಯಾಗಿದೆ.
ವಾಸ್ತವವಾಗಿ 3ನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸಲುವಾಗಿ ಮುಂದಿನ ತಿಂಗಳು ಅಂದರೆ, ಜುಲೈ ತಿಂಗಳಲ್ಲಿ 2 ಟೆಸ್ಟ್ ಪಂದ್ಯಗಳನ್ನು ಆಡಲು ಪಾಕ್ ತಂಡ ಶ್ರೀಲಂಕಾಗೆ ಪ್ರಯಾಣ ಬೆಳೆಸಲಿದೆ. ಆ ಸಮಯದಲ್ಲಿ ಟೆಸ್ಟ್ ಸರಣಿಯ ಬಳಿಕ ಏಕದಿನ ಸರಣಿಯನ್ನು ಲಂಕಾ ವಿರುದ್ಧ ಆಡುವಂತೆ ಲಂಕಾ ಮಂಡಳಿ ಪಾಕ್ ಮಂಡಳಿ ಎದುರು ಪ್ರಸ್ತಾವನೆ ಇಟ್ಟಿತ್ತು. ಈ ಪ್ರಸ್ತಾವನೆಗೆ ಈ ಮೊದಲು ಪಾಕ್ ಮಂಡಳಿ ಕೂಡ ಒಪ್ಪಿಗೆ ಸೂಚಿಸಿತ್ತು. ಆದರೆ ಈಗ ಏಷ್ಯಾಕಪ್ ಆತಿಥ್ಯವಹಿಸಲು ಲಂಕಾ ಮುಂದಾಗಿರುವುದಕ್ಕೆ ಕೋಪಗೊಂಡಿರುವ ಪಾಕ್ ಮಂಡಳಿ ಈ ಮೊದಲು ಗ್ರೀನ್ ಸಿಗ್ನಲ್ ನೀಡಿದ್ದ ಏಕದಿನ ಸರಣಿಗೆ ಈಗ ರೆಡ್ ಸಿಗ್ನಲ್ ನೀಡಿದೆ ಎಂದು ವರದಿಯಾಗಿದೆ.
ಇನ್ನು ಎಸಿಸಿಯ ಸದಸ್ಯತ್ವ ಪಡೆದಿರುವ ಪ್ರಮುಖ ದೇಶಗಳು ಬಿಸಿಸಿಐ ಪರ ವಾಲಿರುವುದರಿಂದ ಪಾಕ್ ತಂಡಕ್ಕೆ ಎಸಿಸಿ ತೀರ್ಮಾನವನ್ನು ಪುರಸ್ಕರಿಸುವುದು ಅಥವಾ ಅದರ ಆತಿಥ್ಯದಿಂದ ಸಂಪೂರ್ಣವಾಗಿ ಹಿಂದೆ ಸರಿಯುವುದನ್ನು ಬಿಟ್ಟು ಬೇರೆ ಆಯ್ಕೆಯಿಲ್ಲ. ಒಂದು ವೇಳೆ, ಪಾಕಿಸ್ತಾನ ಕ್ರಿಕೆಟ್ ತಂಡವು ಈ ಈವೆಂಟ್‌ನಲ್ಲಿ ಭಾಗವಹಿಸದಿದ್ದರೆ, ಭಾರತ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನವು ಏಷ್ಯಾಕಪ್ನಲ್ಲಿ ಆಡಲಿವೆ. ಆದರೆ ಈಗ ಭಾರತ, ಪಾಕಿಸ್ತಾನದ ಹೈಬ್ರಿಡ್ ಮಾದರಿಯನ್ನು ತಿರಸ್ಕರಿಸಿದರೆ, ಅಕ್ಟೋಬರ್ ಹಾಗೂ ನವೆಂಬರ್ನಲ್ಲಿ ಭಾರತದಲ್ಲಿ ನಡೆಯಲ್ಲಿರುವ ಏಕದಿನ ವಿಶ್ವಕಪ್ನಿಂದ ಪಾಕಿಸ್ತಾನ ಹಿಂದೆ ಸರಿಯುವ ಸಾಧ್ಯತೆಗಳಿವೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ