ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಇಷ್ಟು ಹೊತ್ತಿಗಾಗಲೇ ಏಷ್ಯಾಕಪ್ (Asia Cup 2023) ವೇಳಾಪಟ್ಟಿಯನ್ನು ಪ್ರಕಟಿಸಬೇಕಾಗಿತ್ತು. ಆದರೆ ಏಷ್ಯಾಕಪ್ ಆಯೋಜನೆಯ ಬಗ್ಗೆ ಭಾರತ ಮತ್ತು ಪಾಕಿಸ್ತಾನ (India and Pakistan) ನಡುವಿನ ಹಗ್ಗಜಗ್ಗಾಟದಿಂದಾಗಿ ಏಷ್ಯಾಕಪ್ ವೇಳಾಪಟ್ಟಿ ಪ್ರಕಟಣೆ ವಿಳಂಬವಾಗುತ್ತಿದೆ. ಏಷ್ಯಾಕಪ್ ಆಯೋಜನೆಯ ಬಗ್ಗೆ ದಿನಕ್ಕೊಂದು ವರಸೆ ಬದಲಿಸುತ್ತಿರುವ ಪಾಕ್ ಇದೀಗ ಬೇಡಿಕೆಯೊಂದನ್ನು ಎಸಿಸಿ (ACC) ಮುಂದಿಟ್ಟಿದೆ ಎಂದು ವರದಿಯಾಗಿದೆ. ತಿಂಗಳ ಹೋರಾಟದ ನಂತರ, ಅಂತಿಮವಾಗಿ ಕಳೆದ ತಿಂಗಳು ಪಂದ್ಯಾವಳಿಯನ್ನು ಆಯೋಜಿಸಲು ಒಪ್ಪಂದಕ್ಕೆ ಬರಲಾಗಿತ್ತು. ಆದರೆ ಈಗ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಮತ್ತೆ ಅದನ್ನು ಮಧ್ಯದಲ್ಲಿ ನಿಲ್ಲಿಸಲು ಪ್ರಯತ್ನಿಸುತ್ತಿದೆ. ವರದಿಗಳ ಪ್ರಕಾರ, ಹೊಸ ಪಿಸಿಬಿ ಮುಖ್ಯಸ್ಥರಾದ ಝಕಾ ಅಶ್ರಫ್ (Zaka Ashraf) ಈಗ ಪಾಕಿಸ್ತಾನದಲ್ಲಿ ನಾಲ್ಕಕ್ಕೂ ಹೆಚ್ಚಿನ ಏಷ್ಯಾಕಪ್ ಪಂದ್ಯಗಳನ್ನು ನಡೆಸಬೇಕೆಂದು ಒತ್ತಾಯಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಆಗಸ್ಟ್-ಸೆಪ್ಟೆಂಬರ್ನಲ್ಲಿ ನಡೆಯಲಿರುವ ಏಷ್ಯಾಕಪ್ ಈ ಬಾರಿ ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲಾಗುತ್ತಿದೆ. ಪಾಕಿಸ್ತಾನ ಮಂಡಳಿಯ ಮಾಜಿ ಅಧ್ಯಕ್ಷ ನಜಮ್ ಸೇಥಿ ಅವರ ಪ್ರಸ್ತಾಪದ ನಂತರವೇ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಇದನ್ನು ಅಂಗೀಕರಿಸಿತು. ಇದರ ಅಡಿಯಲ್ಲಿ 6 ತಂಡಗಳ ಟೂರ್ನಿಯ ಮೊದಲ 4 ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಯಲಿದ್ದು, ಫೈನಲ್ ಸೇರಿದಂತೆ ಉಳಿದ 9 ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿವೆ. ಪಂದ್ಯಾವಳಿಯು ಆಗಸ್ಟ್ 31 ರಿಂದ ಸೆಪ್ಟೆಂಬರ್ 13 ರವರೆಗೆ ನಡೆಯಲಿದೆ.
ACC Emerging Asia Cup 2023: ಸಿಡಿಲಬ್ಬರದ ಶತಕ ಸಿಡಿಸಿದ ಯಶ್! ಏಷ್ಯಾಕಪ್ನಲ್ಲಿ ಭಾರತಕ್ಕೆ ಶುಭಾರಂಭ
ಏಷ್ಯಾಕಪ್ ವೇಳಾಪಟ್ಟಿ ಇನ್ನೂ ಪ್ರಕಟವಾಗಿಲ್ಲ. ಜುಲೈ 16ರ ಭಾನುವಾರದಂದು ನಡೆಯಲಿರುವ ಎಸಿಸಿ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ಸಿಗುವ ಸಾಧ್ಯತೆಯಿದ್ದು, ಪಾಕಿಸ್ತಾನದ ಆಡಳಿತ ಮಂಡಳಿ ಸಭೆಯನ್ನು ತಡೆಯುವ ಉತ್ಸಾಹದಲ್ಲಿದೆ. ಸುದ್ದಿ ಸಂಸ್ಥೆ ಪಿಟಿಐ ವರದಿಯ ಪ್ರಕಾರ, ಪಾಕಿಸ್ತಾನ ಮಂಡಳಿಯ ಹೊಸ ಮುಖ್ಯಸ್ಥ ಝಕಾ ಅಶ್ರಫ್ ಅವರು ಸಭೆಯಲ್ಲಿ ಹೊಸ ವಿಷಯವನ್ನು ಪ್ರಸ್ತಾಪಿಸಲಿದ್ದಾರೆ. ಈ ವಾರ ಡರ್ಬನ್‌ನಲ್ಲಿ ನಡೆಯುವ ಐಸಿಸಿ ಸಮ್ಮೇಳನದಲ್ಲಿ ಎಸಿಸಿ ಸದಸ್ಯ ರಾಷ್ಟ್ರಗಳಿಗೆ ಹೊಸ ಬೇಡಿಕೆಗಳನ್ನು ಸಲ್ಲಿಸುವುದಾಗಿ ಅಶ್ರಫ್ ಸೂಚಿಸಿದ್ದಾರೆ ಎಂದು ವರದಿ ತಿಳಿಸಿದೆ.
ವರದಿಯಲ್ಲಿ, ಪಿಸಿಬಿ ಪಾಕಿಸ್ತಾನದಲ್ಲಿ 4 ಕ್ಕೂ ಹೆಚ್ಚು ಪಂದ್ಯಗಳನ್ನು ಆಯೋಜಿಸಲು ಬಯಸಿದೆ ಎಂದು ಪಾಕಿಸ್ತಾನಿ ಮಂಡಳಿಯ ಮೂಲಗಳು ತಿಳಿಸಿವೆ. ಶ್ರೀಲಂಕಾದಲ್ಲಿ ಮಾನ್ಸೂನ್ ಪರಿಸ್ಥಿತಿಯಿಂದಾಗಿ ಈ ವಾದವನ್ನು ಪಾಕ್ ಮಂಡಳಿ ಮುಂದಿಟ್ಟಿದೆ ಎಂದು ವರದಿಯಾಗಿದೆ. ಶ್ರೀಲಂಕಾದಲ್ಲಿನ ಮಳೆಯ ಪರಿಸ್ಥಿತಿಯನ್ನು ಮುನ್ನೆಲೆಗೆ ತಂದಿರುವ ಪಿಸಿಬಿ ಅಧ್ಯಕ್ಷ, ಶ್ರೀಲಂಕಾದಲ್ಲಿ ಏಷ್ಯಾಕಪ್ ಆಯೋಜನೆ ವೇಳೆ ಮಾನ್ಸೂನ್ ಆರಂಭವಾಗಿರುತ್ತದೆ. ಇದು ಪಂದ್ಯಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಹೀಗಾಗಿ ಪಾಕಿಸ್ತಾನದಲ್ಲಿ ಇನ್ನೂ ಕೆಲವು ಪಂದ್ಯಗಳನ್ನು ಆಯೋಜನೆ ಮಾಡಲು ಅವಕಾಶ ನೀಡುವಂತೆ ಒತ್ತಾಯಿಸಲಿದ್ದಾರೆ ಎಂದು ವರದಿಯಾಗಿದೆ.
ಈಗ ಪಿಸಿಬಿ ಎಷ್ಟೇ ಪ್ರಯತ್ನಿಸಿದರೂ ಬೇಡಿಕೆ ಈಡೇರುವ ಸಾಧ್ಯತೆ ಕಡಿಮೆ. ಏಕೆಂದರೆ ಎರಡು ಸ್ಥಳಗಳಲ್ಲಿ ಏಕಕಾಲದಲ್ಲಿ ಪಂದ್ಯಾವಳಿಗಳನ್ನು ನಡೆಸುವ ತೊಂದರೆಗಳು ಮತ್ತು ತಂಡಗಳು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಪ್ರಯಾಣ ಬೆಳೆಸಲು ಎದುರಾಗುವ ಸಮಸ್ಯೆಗಳನ್ನು ಗಮನಿಸಿ ಎಸಿಸಿ, ಪಿಸಿಬಿ ಬೇಡಿಕೆಯನ್ನು ತಿರಸ್ಕರಿಸುವ ಸಾಧ್ಯತೆಗಳು ಹೆಚ್ಚಿವೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:42 am, Sun, 16 July 23