IND vs PAK: ಫೈನಲ್ ಗೆದ್ದರೂ ಭಾರತ ಏಷ್ಯಾಕಪ್ ಟ್ರೋಫಿ ಸ್ವೀಕರಿಸಲ್ವಾ?

Asia Cup 2025 Final India vs Pakistan: ಏಷ್ಯಾಕಪ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಫೈನಲ್​ನಲ್ಲಿ ಮುಖಾಮುಖಿಯಾಗುತ್ತಿದೆ. ಈ ಪಂದ್ಯದಲ್ಲಿ ಗೆಲ್ಲುವ ಫೇವರೇಟ್ ತಂಡವಾಗಿ ಭಾರತ ಗುರುತಿಸಿಕೊಂಡಿದೆ. ಈ ಗೆಲುವಿನ ಬಳಿಕ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಏಷ್ಯಾಕಪ್ ಟ್ರೋಫಿ ಸ್ವೀಕರಿಸಲಿದ್ದಾರಾ ಎಂಬುದೇ ಈಗ ದೊಡ್ಡ ಪ್ರಶ್ನೆ.

IND vs PAK: ಫೈನಲ್ ಗೆದ್ದರೂ ಭಾರತ ಏಷ್ಯಾಕಪ್ ಟ್ರೋಫಿ ಸ್ವೀಕರಿಸಲ್ವಾ?
Suryakumar Yadav

Updated on: Sep 28, 2025 | 2:09 PM

ಭಾರತ ಮತ್ತು ಪಾಕಿಸ್ತಾನ್ ನಡುವಣ ಏಷ್ಯಾಕಪ್ ಫೈನಲ್​ ಪಂದ್ಯಕ್ಕಾಗಿ ಕ್ಷಣಗಣನೆ ಶುರುವಾಗಿದೆ. ಇಂದು (ಸೆ.28) ರಾತ್ರಿ ನಡೆಯಲಿರುವ ಬಿಗ್ ಫೈನಲ್​ನಲ್ಲಿ ಏಷ್ಯಾದ ಬದ್ಧ ವೈರಿಗಳು ಸೆಣಸಲಿವೆ. ಈ ತಂಡಗಳಲ್ಲಿ ಗೆಲ್ಲುವ ಫೇವರೇಟ್ ಆಗಿ ಗುರುತಿಸಿಕೊಂಡಿರುವುದು ಭಾರತ. ಏಕೆಂದರೆ ಮೊದಲ ಸುತ್ತಿನಲ್ಲಿ ಪಾಕ್ ಪಡೆಯನ್ನು ಟೀಮ್ ಇಂಡಿಯಾ 7 ವಿಕೆಟ್​ಗಳಿಂದ ಸೋಲಿಸಿತ್ತು. ಇನ್ನು ದ್ವಿತೀಯ ಸುತ್ತಿನಲ್ಲಿ ಭಾರತೀಯ ಪಡೆ 6 ವಿಕೆಟ್​ಗಳ ಜಯ ಸಾಧಿಸಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲೂ ಭಾರತದ ಗೆಲುವನ್ನು ನಿರೀಕ್ಷಿಸಬಹುದು. ಆದರೆ ಈ ಗೆಲುವಿನ ಬಳಿಕ ಟೀಮ್ ಇಂಡಿಯಾ ಏಷ್ಯಾಕಪ್ ಟ್ರೋಫಿ ಸ್ವೀಕರಿಸಲ್ವಾ? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ಇಂತಹದೊಂದು ಪ್ರಶ್ನೆ ಹುಟ್ಟಿಕೊಳ್ಳಲು ಮುಖ್ಯ ಕಾರಣ ಏಷ್ಯನ್ ಕ್ರಿಕೆಟ್ ಕೌನ್ಸಿಲ್​ನ ಮುಖ್ಯಸ್ಥ ಮೊಹ್ಸಿನ್ ನಖ್ವಿ ಆಗಿರುವುದು. ಅಂದರೆ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್​ನ ಅಧ್ಯಕ್ಷರೇ ಈಗ ಏಷ್ಯನ್ ಕ್ರಿಕೆಟ್ ಕೌನ್ಸಿಲ್​ನ ಮುಖ್ಯಸ್ಥ ಹುದ್ದೆಯಲ್ಲಿದ್ದಾರೆ. ಹೀಗಾಗಿ ಮೊಹ್ಸಿನ್ ನಖ್ವಿ ಏಷ್ಯಾಕಪ್ ಟ್ರೋಫಿಯನ್ನು ಗೆದ್ದ ತಂಡಕ್ಕೆ ಹಸ್ತಾಂತರಿಸಲಿದ್ದಾರೆ.

ಇತ್ತ ಪಾಕಿಸ್ತಾನ್ ಆಟಗಾರರೊಂದಿಗೆ ಹ್ಯಾಂಡ್ ಶೇಕ್ ನೀಡಲು ಹಿಂದೇಟು ಹಾಕಿರುವ  ಭಾರತೀಯರು ಇದೀಗ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್​ ಅಧ್ಯಕ್ಷರಿಂದ ಟ್ರೋಫಿ ಸ್ವೀಕರಿಸಲಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಏಕೆಂದರೆ ನಖ್ವಿ ಕೇವಲ ಪಿಸಿಬಿ ಹಾಗೂ ಎಸಿಸಿ ಮುಖ್ಯಸ್ಥನ ಸ್ಥಾನದಲ್ಲಿ ಮಾತ್ರವಿಲ್ಲ. ಬದಲಾಗಿ ಪಾಕಿಸ್ತಾನ ಸರ್ಕಾರದ ಆಂತರಿಕ ವ್ಯವಹಾರಗಳ ಸಚಿವರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

ಈ ಹಿನ್ನಲೆ ಟೀಮ್ ಇಂಡಿಯಾ ನಾಯಕ ಸೂರ್ತಕುಮಾರ್ ಯಾದವ್ ಏಷ್ಯನ್ ಕ್ರಿಕೆಟ್ ಕೌನ್ಸಿಲ್​ನ ಮುಖ್ಯಸ್ಥ ನಖ್ವಿಯಿಂದ ಏಷ್ಯಾಕಪ್ ಟ್ರೋಫಿ ಸ್ವೀಕರಿಸುತ್ತಾರಾ ಎಂಬುದೇ ಸದ್ಯದ ಕುತೂಹಲ.

ಏಷ್ಯಾಕಪ್ ಫೈನಲ್ ಎಷ್ಟು ಗಂಟೆ ಶುರು?

ಭಾರತ-ಪಾಕಿಸ್ತಾನ್ ನಡುವಣ ಫೈನಲ್ ಪಂದ್ಯವು ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಶುರುವಾಗಲಿದೆ. ದುಬೈ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದ ಟಾಸ್ ಪ್ರಕ್ರಿಯೆ ರಾತ್ರಿ 7.30 ಕ್ಕೆ ನಡೆಯಲಿದೆ.

ಉಭಯ ತಂಡಗಳು:

ಭಾರತ ತಂಡ: ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಶುಭ್​ಮನ್ ಗಿಲ್ (ಉಪನಾಯಕ),  ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ರಿಂಕು ಸಿಂಗ್.

ಇದನ್ನೂ ಓದಿ: ಭಾರತ vs ಪಾಕಿಸ್ತಾನ್ ನಡುವೆ 5 ಬಾರಿ ಫೈನಲ್​: 3 ಬಾರಿ ಪಾಕ್ ಚಾಂಪಿಯನ್

ಪಾಕಿಸ್ತಾನ್ ತಂಡ: ಸಲ್ಮಾನ್ ಅಲಿ ಅಘಾ (ನಾಯಕ), ಅಬ್ರಾರ್ ಅಹ್ಮದ್, ಫಹೀಮ್ ಅಶ್ರಫ್, ಫಖರ್ ಝಮಾನ್, ಹ್ಯಾರಿಸ್ ರೌಫ್, ಹಸನ್ ಅಲಿ, ಹಸನ್ ನವಾಝ್, ಹುಸೇನ್ ತಲತ್, ಖುಷ್ದಿಲ್ ಶಾ, ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಂ ಜೂನಿಯರ್, ಸಾಹಿಬ್​ಝಾದ್ ಫರ್ಹಾನ್, ಶಾಹೀನ್ ಅಫ್ರಿದಿ, ಸಲ್ಮಾನ್ ಮಿರ್ಝಾ, ಸೈಮ್ ಅಯ್ಯೂಬ್ ಮತ್ತು ಸುಫಿಯಾನ್ ಮುಖಿಮ್.