Asia Cup 2025: ಏಷ್ಯಾಕಪ್ಗೆ ಯುವ ಎಡಗೈ ದಾಂಡಿಗ ಡೌಟ್..!
ASIA CUP 2025: ಏಷ್ಯಾಕಪ್ ಟಿ20 ಟೂರ್ನಿಗೆ ದಿನಗಣನೆ ಶುರುವಾಗಿದೆ. ಸೆಪ್ಟೆಂಬರ್ 9 ರಿಂದ ಶುರುವಾಗಲಿರುವ ಈ ಟೂರ್ನಿಗಾಗಿ ಆಗಸ್ಟ್ ಮೂರನೇ ವಾರದಲ್ಲಿ ತಂಡವನ್ನು ಪ್ರಕಟಿಸಲು ಬಿಸಿಸಿಐ ನಿರ್ಧರಿಸಿದೆ. ಏಷ್ಯನ್ ರಾಷ್ಟ್ರಗಳ ನಡುವಣ ಈ ಕ್ರಿಕೆಟ್ ಕದನಕ್ಕಾಗಿ ಯುವ ಪಡೆಯನ್ನು ಆಯ್ಕೆ ಮಾಡಲು ನಿರ್ಧರಿಸಲಾಗಿದ್ದು, ಹೀಗಾಗಿ ಈ ಬಾರಿಯ ಟೀಮ್ ಇಂಡಿಯಾದಲ್ಲಿ ಹಿರಿಯ ಆಟಗಾರರಿಗೆ ಅವಕಾಶ ಸಿಗುವುದಿಲ್ಲ.

ಏಷ್ಯನ್ ರಾಷ್ಟ್ರಗಳ ಕ್ರಿಕೆಟ್ ಕದನ ಏಷ್ಯಾಕಪ್ಗಾಗಿ ಶೀಘ್ರದಲ್ಲೇ ಭಾರತ ತಂಡವನ್ನು ಘೋಷಿಸಲಾಗುತ್ತದೆ. ಈ ತಂಡದಲ್ಲಿ ಟೀಮ್ ಇಂಡಿಯಾದ ಯುವ ಎಡಗೈ ದಾಂಡಿಗ ರಿಂಕು ಸಿಂಗ್ ಕಾಣಿಸಿಕೊಳ್ಳುವುದು ಅನುಮಾನ. ಪಿಟಿಐ ವರದಿ ಪ್ರಕಾರ, ಈ ಬಾರಿ ರಿಂಕು ಸಿಂಗ್ ಅವರನ್ನು ತಂಡಕ್ಕೆ ಆಯ್ಕೆ ಮಾಡುವ ಸಾಧ್ಯತೆಯಿಲ್ಲ.
ಕಳೆದ ಐಪಿಎಲ್ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ರಿಂಕು ಸಿಂಗ್ ಅವರನ್ನು ಭಾರತ ತಂಡದಿಂದ ಕೈ ಬಿಡಲು ನಿರ್ಧರಿಸಲಾಗಿದ್ದು, ಅವರ ಬದಲಿಗೆ ಫಿನಿಶರ್ ಆಗಿ ಶಿವಂ ದುಬೆ ಅವರನ್ನು ಆಯ್ಕೆ ಮಾಡಲಿದ್ದಾರೆ ಎಂದು ವರದಿಯಾಗಿದೆ.
ಐಪಿಎಲ್ 2025 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಕಣಕ್ಕಿಳಿದಿದ್ದ ರಿಂಕು ಸಿಂಗ್ 13 ಪಂದ್ಯಗಳಿಂದ ಕೇವಲ 206 ರನ್ ಮಾತ್ರ ಕಲೆಹಾಕಿದ್ದರು. ಇದರ ನಡುವೆ ಬಾರಿಸಿದ್ದು 10 ಸಿಕ್ಸ್ ಹಾಗೂ 20 ಫೋರ್ಗಳು ಮಾತ್ರ.
ಇತ್ತ ಚೆನ್ನೈ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿದಿದ್ದ ಶಿವಂ ದುಬೆ 14 ಪಂದ್ಯಗಳಲ್ಲಿ 21 ಸಿಕ್ಸ್ ಹಾಗೂ 22 ಫೋರ್ಗಳೊಂದಿಗೆ ಒಟ್ಟು 357 ರನ್ಗಳಿಸಿದ್ದರು. ಹೀಗಾಗಿ ರಿಂಕು ಸಿಂಗ್ ಅವರ ಬದಲಿಗೆ ದುಬೆ ಅವರಿಗೆ ಸ್ಥಾನ ನೀಡಲು ಬಿಸಿಸಿಐ ಆಯ್ಕೆ ಸಮಿತಿ ಆಸಕ್ತಿ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.
ಹಾಗೆಯೇ ಏಷ್ಯಾಕಪ್ನಲ್ಲಿ ಟೀಮ್ ಇಂಡಿಯಾದ ಆರಂಭಿಕರಾಗಿ ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ಸ್ಥಾನ ಪಡೆಯಲಿದ್ದಾರೆ ಎಂದು ಇದೇ ವರದಿಯಲ್ಲಿ ತಿಳಿಸಲಾಗಿದೆ.
ಇನ್ನು ಮೂರನೇ ಕ್ರಮಾಂಕದಲ್ಲಿ ಯುವ ಎಡಗೈ ಬ್ಯಾಟರ್ ತಿಲಕ್ ವರ್ಮಾ ಕಾಣಿಸಿಕೊಳ್ಳಲಿದ್ದಾರೆ. ಇಂಗ್ಲೆಂಡ್ ಹಾಗೂ ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಮೂರನೇ ಕ್ರಮಾಂಕದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ತಿಲಕ್ ವರ್ಮಾ ಅವರನ್ನು ಏಷ್ಯಾಕಪ್ನಲ್ಲೂ ಒನ್ ಡೌನ್ನಲ್ಲಿ ಕಣಕ್ಕಿಳಿಸುವ ಸಾಧ್ಯತೆಯಿದೆ.
