ಭಾರತ-ಪಾಕಿಸ್ತಾನ್ ಪಂದ್ಯ ನಡೆಯದಿರಲಿ… ಪಾಕ್ ಕ್ರಿಕೆಟಿಗನ ಪ್ರಾರ್ಥನೆ..!
Asia Cup 2025: ಯುಎಇನಲ್ಲಿ ನಡೆಯಲಿರುವ ಈ ಬಾರಿಯ ಏಷ್ಯಾಕಪ್‌ನಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿವೆ. ಈ ತಂಡಗಳಲ್ಲಿ ಭಾರತ, ಪಾಕಿಸ್ತಾನ್, ಒಮಾನ್ ಮತ್ತು ಯುಎಇ ಗ್ರೂಪ್ ಎ ನಲ್ಲಿದ್ದರೆ, ಬಾಂಗ್ಲಾದೇಶ್, ಅಫ್ಘಾನಿಸ್ತಾನ್, ಹಾಂಗ್ ಕಾಂಗ್ ಹಾಗೂ ಶ್ರೀಲಂಕಾ ಬಿ ಗ್ರೂಪ್ನಲ್ಲಿದೆ. ಹೀಗಾಗಿ ಮೊದಲ ಸುತ್ತಿನಲ್ಲೇ ಭಾರತ ಮತ್ತು ಪಾಕಿಸ್ತಾನ್ ತಂಡಗಳ ಮುಖಾಮುಖಿಯನ್ನು ಎದುರು ನೋಡಬಹುದು.

ಭಾರತ ಮತ್ತು ಪಾಕಿಸ್ತಾನ್ ನಡುವಣ ಏಷ್ಯಾಕಪ್ ಪಂದ್ಯ ನಡೆಯದಿರಲಿ… ಪಾಕ್ ವಿರುದ್ಧ ಆಡಲು ಟೀಮ್ ಇಂಡಿಯಾ ನಿರಾಕರಿಸಲಿ… ಹೀಗೊಂದು ಪ್ರಾರ್ಥನೆ ಕೇಳಿ ಬಂದಿರುವುದು ಪಕ್ಕದ ಪಾಕಿಸ್ತಾನದಿಂದ. ಅದು ಕೂಡ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಬಾಸಿತ್ ಅಲಿ ಅವರಿಂದ..! ಅಷ್ಟಕ್ಕೂ ಇಂತಹದೊಂದು ಪ್ರಾರ್ಥನೆ ಸಲ್ಲಿಸಲು ಮುಖ್ಯ ಕಾರಣ ಭಯ..!
ಹೌದು, ಏಷ್ಯಾಕಪ್‌ನಲ್ಲಿ ಪಾಕಿಸ್ತಾನ್ ತಂಡವನ್ನು ಟೀಮ್ ಇಂಡಿಯಾ ಮಕಾಡೆ ಮಲಗಿಸುವುದು ಖಚಿತ ಎಂದಿದ್ದಾರೆ ಬಾಸಿತ್ ಅಲಿ. ಹೀಗಾಗಿ ಭಾರತ-ಪಾಕಿಸ್ತಾನ್ ನಡುವಣ ಪಂದ್ಯ ನಡೆಯದಿರಲಿ ಎಂದು ನಾನು ಆಶಿಸುತ್ತೇನೆ. ಈ ಮೂಲಕ ಪಾಕಿಸ್ತಾನ್ ತಂಡವು ಅವಮಾನಕರ ಸೋಲಿಂದ ಪಾರಾಗುವುದನ್ನು ಎದುರು ನೋಡುತ್ತಿರುವುದಾಗಿ ಪಾಕ್ ಕ್ರಿಕೆಟಿಗ ಹೇಳಿದ್ದಾರೆ.
ಪಾಕಿಸ್ತಾನ್ ತಂಡವು ಇತ್ತೀಚೆಗೆ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಿಂದ ಸೋತಿದೆ. ಅಂತಿಮ ಏಕದಿನ ಪಂದ್ಯದಲ್ಲಿ ಗೆಲ್ಲಲು 295 ರನ್‌ಗಳ ಅಗತ್ಯವಿದ್ದ ಪಾಕಿಸ್ತಾನ್ ಕೇವಲ 92 ರನ್‌ಗಳಿಗೆ ಆಲೌಟ್ ಆಗಿತ್ತು. ಈ ಹೀನಾಯ ಸೋಲಿನ ನಂತರ, ದಿ ಗೇಮ್ ಪ್ಲಾನ್ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಬಾಸಿತ್ ಅಲಿ, ಪಾಕಿಸ್ತಾನ ತಂಡದ ಪ್ರದರ್ಶನದ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಏಷ್ಯಾಕಪ್‌ನಲ್ಲಿ ಪಾಕಿಸ್ತಾನ್ ವಿರುದ್ಧ ಆಡಲು ಭಾರತ ನಿರಾಕರಿಸಬೇಕೆಂದು ನಾನು ಬಯಸುತ್ತೇನೆ. ಅದು ಸಂಭವಿಸದಿದ್ದರೆ, ಭಾರತ ನಮ್ಮನ್ನು ಕೆಟ್ಟದಾಗಿ ಸೋಲಿಸುತ್ತದೆ. ಆ ಸೋಲು ಹೇಗಿರುತ್ತದೆ ಎಂಬುದನ್ನು ನಾವು ಊಹಿಸಲು ಸಾಧ್ಯವಿಲ್ಲ. ಹೀಗಾಗಿ ಟೀಮ್ ಇಂಡಿಯಾ ಈ ಪಂದ್ಯವನ್ನು ಆಡಲು ನಿರಾಕರಿಸಿದರೆ ಉತ್ತಮ ಎಂದು ಬಾಸಿತ್ ಅಲಿ ಪ್ರತಿಕ್ರಿಯಿಸಿದ್ದಾರೆ.
ಒಂದು ವೇಳೆ ಭಾರತ ತಂಡವು ಪಾಕಿಸ್ತಾನ್ ವಿರುದ್ಧ ಕಣಕ್ಕಿಳಿದರೆ, ಆ ಪಂದ್ಯದಿಂದ ಪಾಕ್ ಪಡೆಗೆ ಅವಮಾನವಾಗುವುದು ಖಚಿತ. ಅದು ಅಂತಿಂಥ ಅವಮಾನವಲ್ಲ. ಪಾಕಿಸ್ತಾನ್ ತಂಡವನ್ನು ಅತ್ಯಂತ ಹೀನಾಯವಾಗಿ ಸೋಲಿಸಿ ಟೀಮ್ ಇಂಡಿಯಾ ವಿಜೃಂಭಿಸಲಿದೆ. ಹೀಗಾಗಿ ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯ ಕ್ಯಾನ್ಸಲ್ ಆಗಲಿ ಎಂದು ಬಯಸುತ್ತೇನೆ ಎಂದು ಬಾಸಿತ್ ಅಲಿ ಹೇಳಿದ್ದಾರೆ.
ಇದನ್ನೂ ಓದಿ: IPL 2026: ಐಪಿಎಲ್ ಟ್ರೇಡ್ ವಿಂಡೋ ಎಂದರೇನು?
ಭಾರತ – ಪಾಕಿಸ್ತಾನ್ ಪಂದ್ಯ ಯಾವಾಗ?
2025 ರ ಏಷ್ಯಾಕಪ್ ಸೆಪ್ಟೆಂಬರ್ 9 ರಿಂದ ಆರಂಭವಾಗಲಿದೆ. ಈ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ್ ಒಂದೇ ಗುಂಪಿನಲ್ಲಿದ್ದು, ಸೆಪ್ಟೆಂಬರ್ 14 ರಂದು ಮುಖಾಮುಖಿಯಾಗಲಿದೆ. ಇನ್ನು ಉಭಯ ತಂಡಗಳು ಸೂಪರ್-4 ಹಂತಕ್ಕೇರಿದರೆ ದ್ವಿತೀಯ ಸುತ್ತಿನಲ್ಲೂ ಸೆಣಸಲಿದೆ. ಇದಾದ ಬಳಿಕ ಫೈನಲ್ಗೆ ಪ್ರವೇಶಿಸಿದರೆ ಮೂರನೇ ಬಾರಿ ಮುಖಾಮುಖಿಯಾಗಬಹುದು.
