ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಮಹಿಳಾ ಕ್ರಿಕೆಟ್ ಪಂದ್ಯದಲ್ಲಿ ಇಂಡೋನೇಷ್ಯಾ ಅಮೋಘ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ. ಹ್ಯಾಂಗ್‌ಝೌನ ಪಿಂಗ್‌ಫೆಂಗ್ ಕ್ಯಾಂಪಸ್ ಕ್ರಿಕೆಟ್ ಫೀಲ್ಡ್ನಲ್ಲಿ ನಡೆದ ಈ ಪಂದ್ಯದಲ್ಲಿ ಇಂಡೋನೇಷ್ಯಾ ಹಾಗೂ ಮಂಗೋಲಿಯಾ ಮಹಿಳಾ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಮಂಗೋಲಿಯಾ ತಂಡವು ಮೊದಲು ಬೌಲಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿತು.
ಅದರಂತೆ ಇನಿಂಗ್ಸ್ ಆರಂಭಿಸಿದ ಇಂಡೋನೇಷ್ಯಾ ತಂಡವು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ಆರಂಭಿಕರಾದ ಲುಹ್ ದೇವಿ (62) ಅರ್ಧಶತಕ ಬಾರಿಸಿದರೆ, ಸಕಾರಿಣಿ 35 ರನ್‌ಗಳ ಕಾಣಿಕೆ ನೀಡಿದರು. ಇನ್ನು ಮಾರಿಯಾ ಕೊರಾಜನ್ 22 ರನ್ ಬಾರಿಸಿದರು. ಇದಾಗ್ಯೂ ತಂಡದ ಮೊತ್ತ 150 ರ ಗಡಿದಾಟುತ್ತಿರಲಿಲ್ಲ.
ಆದರೆ ಮಂಗೋಲಿಯಾ ಬೌಲರ್ಗಳು 38 ವೈಡ್ಗಳನ್ನು ಎಸೆದರು. ಅಲ್ಲದೆ ಒಟ್ಟು 49 ಎಕ್ಸ್ಟ್ರಾ ರನ್ಗಳನ್ನು ನೀಡಿದರು. ಪರಿಣಾಮ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಇಂಡೋನೇಷ್ಯಾ ತಂಡವು 187 ರನ್ ಕಲೆಹಾಕಿತು.
188 ರನ್‌ಗಳ ಕಠಿಣ ಗುರಿಯನ್ನು ಪಡೆದ ಮಂಗೋಲಿಯಾ ಪರ 7 ಬ್ಯಾಟರ್ಗಳು ಶೂನ್ಯಕ್ಕೆ ಔಟಾದರು. ಇನ್ನು ಆರಂಭಿಕ ಆಟಗಾರ್ತಿ ಬಟ್ಜರ್ಗಲ್ ಇಚಿಂಖೋರ್ಲೂ 19 ಎಸೆತಗಳಲ್ಲಿ 5 ರನ್ಗಳಿಸಿದ್ದು ಗರಿಷ್ಠ ಸ್ಕೋರ್.
ಇತ್ತ ಕರಾರುವಾಕ್ ದಾಳಿ ಸಂಘಟಿಸಿದ ಇಂಡೋನೇಷ್ಯಾದ ಆಂಡ್ರಿಯಾನಿ 3 ಓವರ್ಗಳಲ್ಲಿ 8 ರನ್ ನೀಡಿ 4 ವಿಕೆಟ್ ಕಬಳಿಸಿದರು. ಇನ್ನು ರಹಮಾವತಿ ಮತ್ತು ಲುಹ್ ದೇವಿ ತಲಾ 2 ವಿಕೆಟ್ ಪಡೆದರು. ಇನ್ನಿಬ್ಬರು ರನೌಟ್ ಆಗಿ ನಿರ್ಗಮಿಸಿದ್ದರು.
ಇಲ್ಲಿ ಅಚ್ಚರಿಯ ವಿಷಯ ಎಂದರೆ ಮಂಗೋಲಿಯಾ ಬ್ಯಾಟರ್ಗಳು ಕಲೆಹಾಕಿರುವುದು ಕೇವಲ 10 ರನ್ಗಳು ಮಾತ್ರ. ಬಟ್ಜರ್ಗಲ್ ಇಚಿಂಖೋರ್ಲೂ 5 ರನ್ ಬಾರಿಸಿದರೆ, ಜಾರ್ಗಲ್ಸೈಖಾನ್ ಎರ್ಡೆನೆಸುವ್ಡ್ 1 ರನ್ ಗಳಿಸಿ ಔಟಾಗಿದ್ದರು. ಇನ್ನು ನರಂಗರೇಲ್ 3 ರನ್ ಕಲೆಹಾಕಿದರೆ, ನಮುನ್ಝುಲ್ 1 ರನ್ ಬಾರಿಸಿದರು.
Indonesia Women win comprehensively over Mongolia Women in this Asian Games fixture. The Indonesians put up a huge total on the board first, then bowled out their opposition for just 15 runs!#AsianGames pic.twitter.com/FgxMI1mIub
— AsianCricketCouncil (@ACCMedia1) September 19, 2023
ಇದರೊಂದಿಗೆ ತಂಡದ ಮೊತ್ತ 10 ಕ್ಕೇರಿತು. ಇನ್ನುಳಿದ 5 ರನ್ಗಳನ್ನು ಇಂಡೋನೇಷ್ಯಾಕ್ ಬೌಲರ್ಗಳು ವೈಡ್ಗಳ ರೂಪದಲ್ಲಿ ನೀಡಿದ್ದರು. ಇದರೊಂದಿಗೆ 10 ಓವರ್ಗಳಲ್ಲಿ 15 ರನ್ಗಳಿಸಿ ಮಂಗೋಲಿಯಾ ಸರ್ವಪತನ ಕಂಡಿತು. ಇತ್ತ ಏಷ್ಯನ್ ಗೇಮ್ಸ್ನ ಮೊದಲ ಪಂದ್ಯದಲ್ಲೇ 172 ರನ್‌ಗಳ ಅಮೋಘ ಗೆಲುವು ದಾಖಲಿಸಿ ಇಂಡೋನೇಷ್ಯಾ ಮಹಿಳೆಯರು ಶುಭಾರಂಭ ಮಾಡಿದ್ದಾರೆ.