ಏಷ್ಯಾಡ್ ಕ್ರಿಕೆಟ್ ಟೂರ್ನಿ ವೇಳಾಪಟ್ಟಿ ಪ್ರಕಟ

ಜಾಗತಿಕ ಕ್ರೀಡಾ ಲೋಕದ ಎರಡನೇ ಅತಿ ದೊಡ್ಡ ಕ್ರೀಡಾಕೂಟ ಎಂದೇ ಪ್ರಸಿದ್ಧಿಯಾಗಿರುವ 'ಏಷ್ಯನ್ ಗೇಮ್ಸ್'ನ 20ನೇ ಆವೃತ್ತಿಗೆ ಜಪಾನ್‌ನ ಐಚಿ-ನಗೋಯಾ ನಗರಗಳು ಜಂಟಿಯಾಗಿ ಆತಿಥ್ಯ ವಹಿಸಲು ಸಜ್ಜಾಗಿವೆ. ಏಷ್ಯಾದ 45ಕ್ಕೂ ಹೆಚ್ಚು ದೇಶಗಳ ಸಾವಿರಾರು ಕ್ರೀಡಾಪಟುಗಳು ಭಾಗವಹಿಸುವ ಈ ಮಹಾ ಕ್ರೀಡಾಕೂಟದಲ್ಲಿ ಈ ಬಾರಿ ಕ್ರಿಕೆಟ್ ಕಾದಾಟವನ್ನು ಎದುರು ನೋಡಬಹುದು.

ಏಷ್ಯಾಡ್ ಕ್ರಿಕೆಟ್ ಟೂರ್ನಿ ವೇಳಾಪಟ್ಟಿ ಪ್ರಕಟ
Team India
Image Credit source: CG

Updated on: Jun 08, 2026 | 7:58 AM

ಜಪಾನ್​ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನ (ಏಷ್ಯಾಡ್) ಕ್ರಿಕೆಟ್ ಪಂದ್ಯಾವಳಿಗಳ ಅಧಿಕೃತ ವೇಳಾಪಟ್ಟಿ ಪ್ರಕಟವಾಗಿದೆ. ಐಚಿ ಪ್ರಿಫೆಕ್ಚರ್‌ನಲ್ಲಿರುವ ಕೊರೋಗಿ ಅಥ್ಲೆಟಿಕ್ ಪಾರ್ಕ್‌ನಲ್ಲಿ ನಡೆಯಲಿರುವ ಈ ಟಿ20 ಟೂರ್ನಿಯು 2026ರ ಸೆಪ್ಟೆಂಬರ್ 17 ರಿಂದ ಶುರುವಾಗಲಿದ್ದು, ಫೈನಲ್ ಪಂದ್ಯವು ಅಕ್ಟೋಬರ್ 3 ರಂದು ನಡೆಯಲಿದೆ. ಕಳೆದ ಬಾರಿ ಚೀನಾದಲ್ಲಿ ನಡೆದ ಪಂದ್ಯಾವಳಿಯಲ್ಲಿ ಐತಿಹಾಸಿಕ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದ ಭಾರತದ ಪುರುಷರ ಮತ್ತು ಮಹಿಳಾ ಕ್ರಿಕೆಟ್ ತಂಡಗಳು, ಈ ಬಾರಿಯೂ ಪ್ರಶಸ್ತಿ ಉಳಿಸಿಕೊಳ್ಳುವ ನೆಚ್ಚಿನ ತಂಡಗಳಾಗಿ ಕಣಕ್ಕಿಳಿಯಲಿವೆ.

ಮಹಿಳಾ ಮತ್ತು ಪುರುಷರ ಪಂದ್ಯಗಳ ವೇಳಾಪಟ್ಟಿ:

ಈ ಬಾರಿಯ ಪಂದ್ಯಾವಳಿಯಲ್ಲಿ ಒಟ್ಟು ಎರಡು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದ್ದು, ವೇಳಾಪಟ್ಟಿಯನ್ನು ಈ ಕೆಳಗಿನಂತೆ ನಿಗದಿಪಡಿಸಲಾಗಿದೆ:

  • ಮಹಿಳಾ ಕ್ರಿಕೆಟ್ ಪಂದ್ಯಾವಳಿ: ಸೆಪ್ಟೆಂಬರ್ 17 ರಿಂದ ಸೆಪ್ಟೆಂಬರ್ 22, 2026.
  •  ಪುರುಷರ ಕ್ರಿಕೆಟ್ ಪಂದ್ಯಾವಳಿ: ಸೆಪ್ಟೆಂಬರ್ 24 ರಿಂದ ಅಕ್ಟೋಬರ್ 3, 2026.

ಪಂದ್ಯದ ಸಮಯ:

ಭಾರತ ಮತ್ತು ಜಪಾನ್ ನಡುವಿನ ಸಮಯದ ವ್ಯತ್ಯಾಸದಿಂದಾಗಿ, ಭಾರತೀಯ ಕ್ರಿಕೆಟ್ ಅಭಿಮಾನಿಗಳು ಬೆಳ್ಳಂಬೆಳಿಗ್ಗೆಯೇ ಪಂದ್ಯಗಳನ್ನು ಆನಂದಿಸಬಹುದಾಗಿದೆ.

  •  ಮೊದಲ ಪಂದ್ಯ: ಭಾರತೀಯ ಕಾಲಮಾನ ಮುಂಜಾನೆ 5:30 ಕ್ಕೆ ಆರಂಭವಾಗಲಿದೆ..
  •  ಎರಡನೇ ಪಂದ್ಯ: ಭಾರತೀಯ ಕಾಲಮಾನ ಬೆಳಿಗ್ಗೆ 10:30 ಕ್ಕೆ ಆರಂಭವಾಗಲಿದೆ.

ಕಣಕ್ಕಿಳಿಯುವ ತಂಡಗಳಾವುವು?

ಈ ಬಾರಿಯ ಏಷ್ಯನ್ ಗೇಮ್ಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪುರುಷರ ವಿಭಾಗದಲ್ಲಿ 10 ತಂಡಗಳು ಮತ್ತು ಮಹಿಳಾ ವಿಭಾಗದಲ್ಲಿ 8 ತಂಡಗಳು ಚಿನ್ನದ ಪದಕಕ್ಕಾಗಿ ಕಣಕ್ಕಿಳಿಯಲಿವೆ.

  • ಪುರುಷರ ತಂಡಗಳು:
  • ಭಾರತ
  • ಪಾಕಿಸ್ತಾನ್
  • ಬಾಂಗ್ಲಾದೇಶ್
  • ಶ್ರೀಲಂಕಾ
  • ಅಫ್ಘಾನಿಸ್ತಾನ್
  • ಜಪಾನ್
  • ನೇಪಾಳ
  • ಜಮಾನ್
  • ಹಾಂಗ್​ಕಾಂಗ್
  • ಮಲೇಷ್ಯಾ.

ಇದನ್ನೂ ಓದಿ: ವೈಭವ್ ಸೂರ್ಯವಂಶಿ ಎಂಟ್ರಿ: ಟೀಮ್ ಇಂಡಿಯಾದ 3 ತಂಡಗಳು ಪ್ರಕಟ

  • ಮಹಿಳಾ ತಂಡಗಳು:
  • ಭಾರತ
  • ಪಾಕಿಸ್ತಾನ್
  • ಬಾಂಗ್ಲಾದೇಶ್
  • ಶ್ರೀಲಂಕಾ
  • ಜಪಾನ್
  • ಥಾಯ್ಲೆಂಡ್
  • ಮಲೇಷ್ಯಾ
  • ಚೀನಾ

ಟೂರ್ನಿಯ ಸ್ವರೂಪ:

ಟಿ20 ಸ್ವರೂಪದಲ್ಲಿ ನಡೆಯಲಿರುವ ಈ ಟೂರ್ನಿಯನ್ನು  ಪ್ರಾಥಮಿಕ ಹಂತ ಮತ್ತು ನಾಕೌಟ್ ಹಂತಗಳಾಗಿ ವಿಂಗಡಿಸಲಾಗಿದೆ. ಅದರಂತೆ ಮೊದಲ ಸುತ್ತಿನಲ್ಲಿ ದುರ್ಬಲ ತಂಡಗಳು ಮಾತ್ರ ಕಣಕ್ಕಿಳಿಯಲಿವೆ. ಅಂದರೆ ಅಗ್ರ ಶ್ರೇಯಾಂಕದ 4 ಬಲಿಷ್ಠ ತಂಡಗಳಾದ ಭಾರತ, ಪಾಕಿಸ್ತಾನ್, ಶ್ರೀಲಂಕಾ ಮತ್ತು ಬಾಂಗ್ಲಾದೇಶ್​ ನೇರವಾಗಿ ಕ್ವಾರ್ಟರ್ ಫೈನಲ್​ನಲ್ಲಿ ಕಣಕ್ಕಿಳಿಯಲಿವೆ.

ಅದಕ್ಕೂ ಮುನ್ನ ನಡೆಯುವ ಪ್ರಾಥಮಿಕ ಹಂತದಲ್ಲಿ ಉಳಿದ 6 ತಂಡಗಳನ್ನು ತಲಾ 3 ತಂಡಗಳಂತೆ ಎರಡು ಗ್ರೂಪ್‌ಗಳಾಗಿ ವಿಂಗಡಿಸಲಾಗುತ್ತದೆ. ಈ ತಂಡಗಳು ಸಿಂಗಲ್ ರೌಂಡ್-ರಾಬಿನ್ ಮಾದರಿಯಲ್ಲಿ ತಲಾ ಎರಡು ಪಂದ್ಯಗಳನ್ನು ಆಡಲಿವೆ.

ಎರಡೂ ಗ್ರೂಪ್‌ಗಳಿಂದ ಅಗ್ರಸ್ಥಾನ ಪಡೆಯುವ ಒಟ್ಟು 4 ತಂಡಗಳು (ಪ್ರತಿ ಗ್ರೂಪ್‌ನಿಂದ ಟಾಪ್ 2 ತಂಡಗಳು) ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಡಲಿವೆ. ಆ ಬಳಿಕ 8 ತಂಡಗಳ ನಡುವೆ ನಾಕೌಟ್ ಪಂದ್ಯಗಳು ನಡೆಯಲಿವೆ. ನಾಕೌಟ್ ಹಂತದಲ್ಲಿ ಗೆಲ್ಲುವ 4 ತಂಡಗಳು ಸೆಮಿಫೈನಲ್​ಗೇರಲಿದ್ದು, ಅಲ್ಲಿ ಗೆಲ್ಲುವ ತಂಡಗಳು ಚಿನ್ನದ ಪದಕಕ್ಕಾಗಿ ಪೈನಲ್ ಆಡಲಿವೆ.

ಏಷ್ಯನ್ ಗೇಮ್ಸ್​ಗೆ ಭಾರತ ಟಿ20 ತಂಡ:

ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ (ಉಪಾನಯಕ), ರವಿ ಬಿಷ್ಣೋಯ್, ಅಭಿಷೇಕ್ ಶರ್ಮಾ, ನಿತೀಶ್ ಕುಮಾರ್ ರೆಡ್ಡಿ, ಜಸ್​ಪ್ರೀತ್ ಬುಮ್ರಾ ಬುಮ್ರಾ, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಶಿವಂ ದುಬೆ, ವರುಣ್ ಚಕ್ರವರ್ತಿ, ವೈಭವ್ ಸೂರ್ಯವಂಶಿ.

 

Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us