ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ನಲ್ಲಿ ಟೀಮ್ ಇಂಡಿಯಾ ಮಹಿಳಾ ತಂಡ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಪಿಂಗ್‌ಫೆಂಗ್ ಕ್ಯಾಂಪಸ್ ಕ್ರಿಕೆಟ್ ಫೀಲ್ಡ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 19 ರನ್ಗಳಿಂದ ಸೋಲುಣಿಸುವ ಮೂಲಕ ಭಾರತೀಯ ವನಿತೆಯರು ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕಿ ಹರ್ಮನ್‌ಪ್ರೀತ್ ಕೌರ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಭಾರತ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಯುವ ಸ್ಪೋಟಕ ಆಟಗಾರ್ತಿ ಶಫಾಲಿ ವರ್ಮಾ ಕೇವಲ 9 ರನ್ಗಳಿಸಿ ನಿರ್ಗಮಿಸಿದ್ದರು. ಈ ಹಂತದಲ್ಲಿ ಜೊತೆಗೂಡಿದ ಸ್ಮೃತಿ ಮಂಧಾನ ಹಾಗೂ ಜೆಮಿಮಾ ರೋಡ್ರಿಗಸ್ ಉತ್ತಮ ಜೊತೆಯಾಟ ಪ್ರದರ್ಶಿಸಿದರು.
ಮೂರನೇ ವಿಕೆಟ್ಗೆ 73 ರನ್ಗಳ ಜೊತೆಯಾಟವಾಡಿದ ಬಳಿಕ ಸ್ಮೃತಿ ಮಂಧಾನ (46) ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ವಿಕೆಟ್ ಕೀಪರ್ ರಿಚಾ ಘೋಷ್ (9) ಕೂಡ ಔಟಾದರು. ಇನ್ನು ನಾಯಕಿ ಹರ್ಮನ್‌ಪ್ರೀತ್ ಕೌರ್ ಕೇವಲ 2 ರನ್ಗಳಿಸಿ ನಿರ್ಗಮಿಸಿದರು.
ದಿಢೀರ್ ಕುಸಿತಕ್ಕೊಳಾದ ತಂಡಕ್ಕೆ ಎಚ್ಚರಿಕೆಯ ಬ್ಯಾಟಿಂಗ್ ಮೂಲಕ ಜೆಮಿಮಾ ಆಸರೆಯಾದರು. ಅಲ್ಲದೆ ತಂಡದ ಮೊತ್ತವನ್ನು 100 ರ ಗಡಿದಾಟಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. 42 ರನ್ಗಳಿಸಿದ್ದ ಜೆಮಿಮಾ ರೋಡ್ರಿಗಸ್ 19ನೇ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಟೀಮ್ ಇಂಡಿಯಾ 7 ವಿಕೆಟ್ ನಷ್ಟಕ್ಕೆ 20 ಓವರ್ಗಳಲ್ಲಿ 116 ರನ್ ಕಲೆಹಾಕಿತು.
117 ರನ್ಗಳ ಸುಲಭ ಗುರಿ ಬೆನ್ನತ್ತದ ಶ್ರೀಲಂಕಾ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಟಿಟಾಸ್ ಸಾಧು ಯಶಸ್ವಿಯಾದರು. 2ನೇ ಓವರ್ನಲ್ಲಿ 2 ವಿಕೆಟ್ ಕಬಳಿಸಿ ಸಾಧು ಆ ಬಳಿಕ ಅಪಾಯಕಾರಿ ಬ್ಯಾಟರ್ ಚಾಮರಿ ಅಟ್ಟಾಪಟ್ಟು (12) ವಿಕೆಟ್ ಉರುಳಿಸಿದರು.
ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದ ಹಾಸಿನಿ ಪೆರೇರಾ (25) ಹಾಗೂ ನೀಲಾಕ್ಷಿ ಡಿಸಿಲ್ವಾ (23) ತಂಡಕ್ಕೆ ಗೆಲುವು ತಂದುಕೊಡುವ ಭರವಸೆ ಮೂಡಿಸಿದ್ದರು. ಈ ಹಂತದಲ್ಲಿ ರಾಜೇಶ್ವರ ಗಾಯಕ್ವಾಡ್ ಹಾಸಿನಿ ವಿಕೆಟ್ ಪಡೆದರೆ, ಪೂಜಾ ವಸ್ತ್ರಾಕರ್ ನೀಲಾಕ್ಷಿಗೆ ಪೆವಿಲಿಯನ್ ಹಾದಿ ತೊರಿಸಿದರು.
ಈ ಎರಡು ವಿಕೆಟ್ ಸಿಗುತ್ತಿದ್ದಂತೆ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಟೀಮ್ ಇಂಡಿಯಾ ಬೌಲರ್ಗಳು ಶ್ರೀಲಂಕಾ ತಂಡದ ರನ್ ಗತಿಯನ್ನು ನಿಯಂತ್ರಿಸಿದರು. ಅಲ್ಲದೆ 20 ಓವರ್ಗಳಲ್ಲಿ 8 ವಿಕೆಟ್ ಕಬಳಿಸಿ 97 ರನ್ಗಳಿಗೆ ಶ್ರೀಲಂಕಾ ತಂಡವನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಟೀಮ್ ಇಂಡಿಯಾ ಫೈನಲ್ ಪಂದ್ಯದಲ್ಲಿ 16 ರನ್ಗಳ ರೋಚಕ ಜಯ ಸಾಧಿಸಿತು.
ಈ ಗೆಲುವಿನೊಂದಿಗೆ ಭಾರತೀಯ ವನಿತೆಯರು ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕಕ್ಕೆ ಕೊರೊಳೊಡ್ಡಿದ್ದಾರೆ. ಅತ್ತ ರನ್ನರ್ ಅಪ್ ಆಗಿ ಶ್ರೀಲಂಕಾ ತಂಡ ಬೆಳ್ಳಿ ಪದಕ ಗೆದ್ದರೆ, 3ನೇ ಸ್ಥಾನ ಪಡೆದಿರುವ ಬಾಂಗ್ಲಾದೇಶ್ ಮಹಿಳಾ ತಂಡ ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದೆ.
📸📸 We’ve done it! 👏 👏
Congratulations to #TeamIndia as they clinch a Gold 🥇 Medal at the Asian Games! 🙌 🙌
Well done! 🇮🇳
Scorecard ▶️ https://t.co/dY0wBiW3qA#IndiaAtAG22 | #AsianGames pic.twitter.com/Wfnonwlxgh
— BCCI Women (@BCCIWomen) September 25, 2023
ಟೀಮ್ ಇಂಡಿಯಾ ಪ್ಲೇಯಿಂಗ್ 11: ಸ್ಮೃತಿ ಮಂಧಾನ , ಶಫಾಲಿ ವರ್ಮಾ , ಜೆಮಿಮಾ ರೋಡ್ರಿಗಸ್ , ಹರ್ಮನ್‌ಪ್ರೀತ್ ಕೌರ್ (ನಾಯಕಿ) , ರಿಚಾ ಘೋಷ್ (ವಿಕೆಟ್ ಕೀಪರ್) , ದೀಪ್ತಿ ಶರ್ಮಾ , ದೇವಿಕಾ ವೈದ್ಯ , ಅಮಂಜೋತ್ ಕೌರ್ , ಪೂಜಾ ವಸ್ತ್ರಾಕರ್ , ಟೈಟಾಸ್ ಸಾಧು , ರಾಜೇಶ್ವರಿ ಗಾಯಕ್ವಾಡ್.
ಇದನ್ನೂ ಓದಿ: ಏಷ್ಯನ್ ಗೇಮ್ಸ್: ಬರೋಬ್ಬರಿ 16 ಗೋಲು ಬಾರಿಸಿ ಅಮೋಘ ಗೆಲುವು ದಾಖಲಿಸಿದ ಭಾರತ
ಶ್ರೀಲಂಕಾ ಪ್ಲೇಯಿಂಗ್ 11: ಚಾಮರಿ ಅಟ್ಟಾಪಟ್ಟು (ನಾಯಕಿ) , ಅನುಷ್ಕಾ ಸಂಜೀವನಿ (ವಿಕೆಟ್ ಕೀಪರ್) , ವಿಶ್ಮಿ ಗುಣರತ್ನೆ , ನೀಲಾಕ್ಷಿ ಡಿ ಸಿಲ್ವಾ , ಹಾಸಿನಿ ಪೆರೇರಾ , ಓಷದಿ ರಣಸಿಂಗ್ , ಇನೋಕಾ ರಣವೀರ , ಕವಿಶಾ ದಿಲ್ಹಾರಿ , ಉದೇಶಿಕಾ ಪ್ರಬೋಧನಿ , ಸುಗಂಧಿಕಾ ಪ್ರಿಯಾಶಿ ಕುಮಾರಿ.
Published On - 2:42 pm, Mon, 25 September 23