ಆಸ್ಟ್ರೇಲಿಯಾ ಅಭಿಮಾನಿಗಳಿಂದ ಮೂದಲಿಕೆ: ಇನ್ನೂ ಜೋರಾಗಿ ಕೂಗಿ ಎಂದ ಮೊಹಮ್ಮದ್ ಸಿರಾಜ್

ಆಸ್ಟ್ರೇಲಿಯಾ ಅಭಿಮಾನಿಗಳಿಂದ ಮೂದಲಿಕೆ: ಇನ್ನೂ ಜೋರಾಗಿ ಕೂಗಿ ಎಂದ ಮೊಹಮ್ಮದ್ ಸಿರಾಜ್

ಝಾಹಿರ್ ಯೂಸುಫ್
|

Updated on: Dec 08, 2024 | 8:10 AM

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್​​ನಲ್ಲಿ 180 ರನ್​ಗಳಿಸಿದರೆ, ಆಸ್ಟ್ರೇಲಿಯಾ ತಂಡವು 337 ರನ್ ಕಲೆಹಾಕಿದೆ. ಇದೀಗ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಭಾರತ ತಂಡವು 2ನೇ ದಿನದಾಟದ ಮುಕ್ತಾಯಕ್ಕೆ 5 ವಿಕೆಟ್ ಕಳೆದುಕೊಂಡು 128 ರನ್ ಕಲೆಹಾಕಿದೆ.

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಪೈಪೋಟಿ ಕಾವೇರುತ್ತಿದೆ. ಅಡಿಲೇಡ್​ನ ಓವಲ್​ ಮೈದಾನದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ 2ನೇ ದಿನದಾಟವು ಆಟಗಾರರ ಜಿದ್ದಾಜಿದ್ದಿಗೆ ಸಾಕ್ಷಿಯಾಗಿದೆ. ಮೊದಲು ಹರ್ಷಿತ್ ರಾಣಾ ಹಾಗೂ ಮಾರ್ನಸ್ ಲಾಬುಶೇನ್ ಮಾತಿನ ಚಕಮಕಿ ನಡೆಸಿದರೆ, ಆ ಬಳಿಕ ಮೊಹಮ್ಮದ್ ಸಿರಾಜ್ ಹಾಗೂ ಟ್ರಾವಿಸ್ ಹೆಡ್ ಪರಸ್ಪರ ವಾಗ್ದಾಳಿ ನಡೆಸಿದರು.

ಅದರಲ್ಲೂ ಭಾರತೀಯ ಬೌಲರ್​​ಗಳನ್ನು ಹಿಗ್ಗಾಮುಗ್ಗಾ ದಂಡಿಸಿದ ಟ್ರಾವಿಸ್ ಹೆಡ್ ಕೇವಲ 111 ಎಸೆತಗಳಲ್ಲಿ ಶತಕ ಪೂರೈಸಿದರು. ಹೆಡ್​ ವಿಕೆಟ್​ ಪಡೆಯಲು ಟೀಮ್ ಇಂಡಿಯಾ ಬೌಲರ್​​ಗಳು ಹರಸಾಹಸಪಟ್ಟುಕೊಂಡರು. ಇದಾಗ್ಯೂ 82ನೇ ಓವರ್​​ನ 4ನೇ ಎಸೆತದಲ್ಲಿ ಹೆಡ್​ ರನ್ನು ಬೌಲ್ಡ್ ಮಾಡಿದ ಸಿರಾಜ್ ಆಕ್ರೋಶಭರಿತರಾಗಿ ಬೀಳ್ಕೊಡುಗೆ ಕೊಟ್ಟರು. ಅತ್ತ ಟ್ರಾವಿಸ್ ಹೆಡ್ ಕೂಡ ಅದೇನೊ ಗೊಣಗುತ್ತಾ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು.

ಈ ಘಟನೆಯ ಬಳಿಕ ಮೊಹಮ್ಮದ್ ಸಿರಾಜ್ ಅವರನ್ನು ಆಸ್ಟ್ರೇಲಿಯಾ ಅಭಿಮಾನಿಗಳು ಗುರಿಯಾಗಿಸಿದ್ದಾರೆ. ಬೌಂಡರಿ ಲೈನ್​​ನಲ್ಲಿ ಫೀಲ್ಡಿಂಗ್​​ನಲ್ಲಿದ್ದ ಸಿರಾಜ್ ಅವರನ್ನು ಮೂದಲಿಸುವ ಮೂಲಕ ಆಸೀಸ್ ಫ್ಯಾನ್ಸ್ ಕೆಣಕಲಾರಂಭಿಸಿದ್ದಾರೆ.

ಆದರೆ ಆಸ್ಟ್ರೇಲಿಯಾ ಅಭಿಮಾನಿಗಳ ಈ ಮೂದಲಿಕೆಗೆ ಡೋಂಟ್ ಕೇರ್ ಎಂದ ಮೊಹಮ್ಮದ್ ಸಿರಾಜ್, ಇನ್ನೂ ಜೋರಾಗಿ ಕೂಗುವಂತೆ ಹೇಳಿದ್ದಾರೆ. ಇದೀಗ ಆಸೀಸ್ ಫ್ಯಾನ್ಸ್​ಗೆ ಸಿರಾಜ್ ನೀಡಿರುವ ಪ್ರತ್ಯುತ್ತರದ ವಿಡಿಯೋ ವೈರಲ್ ಆಗಿದ್ದು, ಟೀಮ್ ಇಂಡಿಯಾ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್​​ನಲ್ಲಿ 180 ರನ್​ಗಳಿಸಿದರೆ, ಆಸ್ಟ್ರೇಲಿಯಾ ತಂಡವು 337 ರನ್ ಕಲೆಹಾಕಿದೆ. ಇದೀಗ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಭಾರತ ತಂಡವು 2ನೇ ದಿನದಾಟದ ಮುಕ್ತಾಯಕ್ಕೆ 5 ವಿಕೆಟ್ ಕಳೆದುಕೊಂಡು 128 ರನ್ ಕಲೆಹಾಕಿದೆ.