AUS vs ENG 3rd Test: 68 ರನ್​ಗೆ ಇಂಗ್ಲೆಂಡ್ ಆಲೌಟ್: ಮೂರೇ ದಿನಕ್ಕೆ ಮುಗಿಯಿತು ಆ್ಯಶಸ್ 3ನೇ ಟೆಸ್ಟ್: ಸರಣಿ ಆಸ್ಟ್ರೇಲಿಯಾ ಪಾಲು

| Updated By: Vinay Bhat

Updated on: Dec 28, 2021 | 8:28 AM

The Ashes, 2021-22: ಆಸ್ಟ್ರೇಲಿಯಾ ಇನ್ನಿಂಗ್ಸ್ ಮತ್ತು 14 ರನ್​ಗಳ ಜಯ ಸಾಧಿಸಿ ಸರಣಿ ವಶಪಡಿಸಿಕೊಂಡಿದೆ. ಸರಣಿಯ ಮೊದಲ ಎರಡೂ ಪಂದ್ಯಗಳಲ್ಲೂ ಹೀನಾಯ ಸೋಲು ಅನುಭವಿಸಿದ್ದ ಪ್ರವಾಸಿ ಇಂಗ್ಲೆಂಡ್ ಬಳಗವು ಮೂರನೇ ಟೆಸ್ಟ್​ನಲ್ಲೂ ಅದೇರೀತಿ ಸೋಲುಂಡು ಮುಖಭಂಗಕ್ಕೆ ಒಳಗಾಗಿದೆ.

AUS vs ENG 3rd Test: 68 ರನ್​ಗೆ ಇಂಗ್ಲೆಂಡ್ ಆಲೌಟ್: ಮೂರೇ ದಿನಕ್ಕೆ ಮುಗಿಯಿತು ಆ್ಯಶಸ್ 3ನೇ ಟೆಸ್ಟ್: ಸರಣಿ ಆಸ್ಟ್ರೇಲಿಯಾ ಪಾಲು
Australia cricket Team
Follow us on

ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್​ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪ್ರತಿಷ್ಠಿಯ ಆ್ಯಶಸ್ ಸರಣಿಯ (Ashes Series) ಮೂರನೇ ಟೆಸ್ಟ್ ಪಂದ್ಯದಲ್ಲೂ ಆಸ್ಟ್ರೇಲಿಯಾ (Australia vs England) ಇನ್ನಿಂಗ್ಸ್ ಮತ್ತು 14 ರನ್​ಗಳ ಗೆಲುವು ಸಾಧಿಸಿದೆ. ಈ ಮೂಲಕ ಐದು ಪಂದ್ಯಗಳ ಆ್ಯಶಸ್ ಟೆಸ್ಟ್​ನಲ್ಲಿ 3-0 ಮುನ್ನಡೆ ಸಾಧಿಸಿ ಸರಣಿ ವಶಪಡಿಸಿಕೊಂಡಿದೆ. ಎರಡನೇ ಇನ್ನಿಂಗ್ಸ್​ನಲ್ಲಿ ಕೇವಲ 68 ರನ್​ಗೆ ಆಲೌಟ್ ಆಗುವ ಮೂಲಕ ಕೆಟ್ಟ ದಾಖಲೆ ಬರೆದಿರುವ ಆಂಗ್ಲರು ಭಾರೀ ಮುಖಭಂಗಕ್ಕೆ ಒಳಗಾಗಿದ್ದಾರೆ. ರೂಟ್ (Joe Root) ಪಡೆಗೆ ಅಕ್ಷರಶಃ ವಿಲನ್ ಆದ ಸ್ಕಾಟ್ ಬೊಲಾಂಡ್ (Scot Boland) ಪದಾರ್ಪಣೆ ಪಂದ್ಯದಲ್ಲೇ 6 ವಿಕೆಟ್ ಕಿತ್ತು ಶ್ರೇಷ್ಠ ಪ್ರದರ್ಶನ ನೀಡಿದರು. ಈ ಮೂಲಕ ಆಸ್ಟ್ರೇಲಿಯಾ ಟೆಸ್ಟ್​ ಕ್ರಿಕೆಟ್​ನಲ್ಲಿ ಬಲಿಷ್ಠವಾಗಿ ಹೊರಹೊಮ್ಮಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ 185 ರನ್​ಗೆ ಆಲೌಟ್ ಆಯಿತು. ತಂಡದ ಪರ ನಾಯಕ ಜೋ ರೂಟ್ 50 ರನ್ ಗಳಿಸಿದ್ದು ಬಿಟ್ಟರೆ, ಜಾನಿ ಬೈರ್​ಸ್ಟೋ 35 ರನ್ ಬಾರಿಸಿದ್ದೇ ಹೆಚ್ಚು, ಉಳಿದ ಬ್ಯಾಟರ್​ಗಳ ಸ್ಕೋರ್ 25ರ ಗಡಿ ದಾಟಲಿಲ್ಲ. ಸಂಘಟಿತ ಪ್ರದರ್ಶನ ತೋರಿದ ಆಸೀಸ್ ಬೌಲರ್​ಗಳು ಇಂಗ್ಲೆಂಡ್ ಬ್ಯಾಟರ್​ಗಳನ್ನು ಪೆವಿಲಿಯನ್​ಗೆ ಅಟ್ಟಿದರು. ನಾಯಕ ಪ್ಯಾಟ್ ಕಮಿನ್ಸ್ ಮತ್ತು ನೇಥನ್ ಲ್ಯಾನ್ ತಲಾ 3 ವಿಕೆಟ್ ಕಿತ್ತರೆ, ಮಿಚೆಲ್ ಸ್ಟಾರ್ಕ್ 2 ಮತ್ತು ಬೊಲಾಂಡ್, ಗ್ರೀನ್ ತಲಾ 1 ವಿಕೆಟ್ ಪಡೆದರು.

ಇತ್ತ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಕೂಡ ದೊಡ್ಡ ಮುನ್ನಡೆ ಪಡೆದುಕೊಳ್ಳಲಿಲ್ಲ. ಸೋಮವಾರದ ಆಟದಲ್ಲಿ ಒಟ್ಟು 13 ವಿಕೆಟ್‌ ಪತನಗೊಂಡಿತು. ಒಂದಕ್ಕೆ 61 ರನ್‌ ಮಾಡಿದ್ದ ಆಸ್ಟ್ರೇಲಿಯ 267ಕ್ಕೆ ಆಲೌಟ್‌ ಆಯಿತು. ದೊಡ್ಡ ಮೇಲುಗೈ ನಿರೀಕ್ಷೆಯಲ್ಲಿದ್ದ ಆಸೀಸ್‌ಗೆ ಲಭಿಸಿದ್ದು 82 ರನ್‌ ಮುನ್ನಡೆ ಮಾತ್ರ. ಮರ್ಕಸ್ ಹ್ಯಾರಿಸ್ 189 ಎಸೆತಗಳಲ್ಲಿ 76 ರನ್, ಡೇವಿಡ್ ವಾರ್ನರ್ 38 ರನ್ ಗಳಿಸಿ ಗರಷ್ಠ ಸ್ಕೋರರ್ ಎನಿಸಿಕೊಂಡರು. ಇಂಗ್ಲೆಂಡ್ ಪರ ಜೇಮ್ಸ್ ಆ್ಯಂಡರ್ಸನ್ 4 ವಿಕೆಟ್ ಪಡೆದರು.

ಅಲ್ಪ ಹಿನ್ನಡೆಯೊಂದಿಗೆ ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್​ಗೆ ಕಮ್​ಬ್ಯಾಕ್ ಮಾಡಲು ಇದು ಅತ್ಯುತ್ತಮ ಅವಕಾಶವಾಗಿತ್ತು. ಆದರೆ, ಈ ಬಾರಿ ಸ್ಕಾಟ್ ಬೊಲಾಂಡ್ ಬೌಲಿಂಗ್ ಬಿರುಗಾಳಿಗೆ ಆಂಗ್ಲರು ತತ್ತರಿಸಿದರು. ಎರಡನೇ ದಿನದಾಟದ ಮುಕ್ತಾಯಕ್ಕೆ ಇಂಗ್ಲೆಂಡ್ 12 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 31 ರನ್ ಗಳಿಸಿತ್ತು. ಇಂದು ಮೂರನೇ ದಿನ ಮತ್ತದೆ ಹಳೆ ಚಾಳಿ ಮುಂದುವರೆಸಿದ ಇಂಗ್ಲೆಂಡ್ ಕ್ರಿಕೆಟ್ ಇತಿಹಾಸದಲ್ಲಿ ಕೆಟ್ಟ ಪ್ರದರ್ಶನ ನೀಡಿತು. ಕೇವಲ 68 ರನ್​ಗೆ ಸರ್ವಪತನ ಕಂಡಿತು. ನಾಯಕ ರೂಟ್ 28 ರನ್ ಗಳಿಸಿದ್ದೇ ಹೆಚ್ಚು. ಸ್ಕಾಟ್ ಬೊಲಾಂಡ್ ಕೇವಲ 4 ಓವರ್ ಬೌಲಿಂಗ್ ಮಾಡಿ 7 ರನ್ ನೀಡಿ 6 ವಿಕೆಟ್ ಕಬಳಿಸಿದರು. ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಬಾಜಿಕೊಂಡರು.

ಈ ಮೂಲಕ ಆಸ್ಟ್ರೇಲಿಯಾ ಇನ್ನಿಂಗ್ಸ್ ಮತ್ತು 14 ರನ್​ಗಳ ಜಯ ಸಾಧಿಸಿ ಸರಣಿ ವಶಪಡಿಸಿಕೊಂಡಿದೆ. ಸರಣಿಯ ಮೊದಲ ಎರಡೂ ಪಂದ್ಯಗಳಲ್ಲೂ ಹೀನಾಯ ಸೋಲು ಅನುಭವಿಸಿದ್ದ ಪ್ರವಾಸಿ ಇಂಗ್ಲೆಂಡ್ ಬಳಗವು ಮೂರನೇ ಟೆಸ್ಟ್​ನಲ್ಲೂ ಅದೇರೀತಿ ಸೋಲುಂಡು ಮುಖಭಂಗಕ್ಕೆ ಒಳಗಾಗಿದೆ.

Anju Bobby George: ವಿಶ್ವ ಅಥ್ಲೆಟಿಕ್ಸ್‌ನಿಂದ ವರ್ಷದ ಮಹಿಳೆ ಪ್ರಶಸ್ತಿ ಪಡೆಯುವುದು ಗೌರವವಾಗಿದೆ: ಅಂಜು ಬಾಬಿ ಜಾರ್ಜ್

(AUS vs ENG 3rd Test Scott Boland takes 6 wickets Australia won by an innings plus 14 runs and Retain Ashes)