ಮೂರು ಪಂದ್ಯಗಳ ಟಿ20 ಸರಣಿಗಾಗಿ ಸ್ಕಾಟ್ಲೆಂಡ್ ಪ್ರವಾಸ ಮಾಡಿರುವ ಬಲಿಷ್ಠ ಆಸ್ಟ್ರೇಲಿಯಾ ತಂಡ ಸರಣಿಯಲ್ಲಿ ಶುಭಾರಂಭ ಮಾಡಿದೆ. ಇಂದು ನಡೆದ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ಸ್ಕಾಟ್ಲೆಂಡ್ ತಂಡವನ್ನು ಏಕಪಕ್ಷೀಯವಾಗಿ ಮಣಿಸಿದ ಆಸ್ಟ್ರೇಲಿಯಾ ಮೂರು ಪಂದ್ಯಗಳ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದೆ. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸ್ಕಾಟ್ಲೆಂಡ್ ತಂಡ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 154 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ, ಆರಂಭಿಕ ಟ್ರಾವಿಡ್ ಹೆಡ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದಾಗಿ 3 ವಿಕೆಟ್ ಕಳೆದುಕೊಂಡು 9.4 ಓವರ್ಗಳಲ್ಲಿ ಅಂದರೆ ಇನ್ನು 62 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ದಡ ಮುಟ್ಟಿತು.
ಎಡಿನ್ ಬರ್ಗ್ ಮೈದಾನದಲ್ಲಿ ನಡೆದ ಈ ಸರಣಿಯ ಮೊದಲ ಟಿ20 ಪಂದ್ಯದಲ್ಲಿ ಆತಿಥೇಯ ಸ್ಕಾಟ್ಲೆಂಡ್ ತಂಡ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಲಷ್ಟೇ ಶಕ್ತವಾಯಿತು. ಇದಾದ ಬಳಿಕ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯ ತಂಡ ಜ್ಯಾಕ್ ಫ್ರೇಸರ್ ಮೆಕ್‌ಗುರ್ಕ್ ಅವರ ಮೊದಲ ವಿಕೆಟ್ ಅನ್ನು ಶೂನ್ಯಕ್ಕೆ ಕಳೆದುಕೊಂಡಿತು. ಇದಾದ ಬಳಿಕ ಟ್ರಾವಿಸ್ ಹೆಡ್ ಮತ್ತು ಮಿಚೆಲ್ ಮಾರ್ಷ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ ಮೊದಲ 6 ಓವರ್ಗಳ ಅಂತ್ಯಕ್ಕೆ ತಂಡದ ಮೊತ್ತವನ್ನು ಒಂದು ವಿಕೆಟ್ ನಷ್ಟಕ್ಕೆ 113 ರನ್ಗಳಿಗೆ ಏರಿಸಿದರು.
ಇದರೊಂದಿಗೆ, ಆಸ್ಟ್ರೇಲಿಯಾ ತಂಡವು ಪೂರ್ಣ ಸದಸ್ಯ ತಂಡವಾಗಿ ಅಂತರಾಷ್ಟ್ರೀಯ ಟಿ20ಯ ಪವರ್‌ಪ್ಲೇನಲ್ಲಿ ಅತಿ ಹೆಚ್ಚು ರನ್ ಗಳಿಸಿದ ತಂಡವೆಂಬ ಹೊಸ ದಾಖಲೆಯನ್ನು ತನ್ನದಾಗಿಸಿಕೊಂಡಿತು. ಇದಕ್ಕೂ ಮೊದಲು ಈ ದಾಖಲೆ ದಕ್ಷಿಣ ಆಫ್ರಿಕಾ ಹೆಸರಿನಲ್ಲಿತ್ತು. ಆಫ್ರಿಕಾ ತಂಡ ವೆಸ್ಟ್ ಇಂಡೀಸ್ ವಿರುದ್ಧ 2023 ರಲ್ಲಿ ನಡೆದಿದ್ದ ಟಿ20 ಪಂದ್ಯದ ಪವರ್‌ಪ್ಲೇನಲ್ಲಿ 102 ರನ್ ದಾಖಲಿಸಿತ್ತು.
Travis Head's blistering knock takes Australia to an easy win against Scotland in the first T20I 💥#SCOvAUS 📝: https://t.co/mop56JOlfq pic.twitter.com/vNaePHkQNO
— ICC (@ICC) September 4, 2024
ಈ ಪಂದ್ಯದಲ್ಲಿ ಟ್ರಾವಿಸ್ ಹೆಡ್ ಕೇವಲ 25 ಎಸೆತಗಳಲ್ಲಿ 80 ರನ್ ಗಳಿಸಿದರು. 320.00 ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದ ಹೆಡ್, 12 ಬೌಂಡರಿಗಳು ಮತ್ತು 5 ಸಿಕ್ಸರ್‌ಗಳನ್ನು ಸಿಡಿಸಿ, ಪವರ್‌ಪ್ಲೇನಲ್ಲಿಯೇ ಒಟ್ಟು 73 ರನ್ ಕಲೆಹಾಕಿದರು. ಇದರೊಂದಿಗೆ ಪವರ್‌ಪ್ಲೇಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು. 2020 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಪವರ್‌ಪ್ಲೇಯಲ್ಲಿ ಪಾಲ್ ಸ್ಟಿರ್ಲಿಂಗ್ 63 ರನ್ ಬಾರಿಸಿ ಈ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡಿದ್ದರು. ಆದರೆ ಈಗ ಆ ದಾಖಲೆಯನ್ನು ಹೆಡ್ ತನ್ನದಾಗಿಸಿಕೊಂಡಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:44 pm, Wed, 4 September 24