AUS vs WI: ಮೊದಲ ಏಕದಿನದಲ್ಲಿ ಆಸ್ಟ್ರೇಲಿಯಾಕ್ಕೆ ಸುಲಭ ತುತ್ತಾದ ವೆಸ್ಟ್ ಇಂಡೀಸ್

|

Updated on: Feb 02, 2024 | 9:29 PM

AUS vs WI: ಮೇಲ್ಬೋರ್ನ್​ ಕ್ರಿಕೆಟ್ ಮೈದಾನದಲ್ಲಿ ನಡೆದ ಉಭಯ ತಂಡಗಳ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡ, ವೆಸ್ಟ್ ಇಂಡೀಸ್ ತಂಡವನ್ನು 8 ವಿಕೆಟ್​ಗಳಿಂದ ಸೋಲಿಸಿ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

AUS vs WI: ಮೊದಲ ಏಕದಿನದಲ್ಲಿ ಆಸ್ಟ್ರೇಲಿಯಾಕ್ಕೆ ಸುಲಭ ತುತ್ತಾದ ವೆಸ್ಟ್ ಇಂಡೀಸ್
ಆಸ್ಟ್ರೇಲಿಯಾ ತಂಡ
Follow us on

ಗಬ್ಬಾದಲ್ಲಿ ನಡೆದ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯವನ್ನು ಗೆದ್ದು ಇತಿಹಾಸ ನಿರ್ಮಿಸಿದಲ್ಲದೆ, ಸರಣಿಯನ್ನು 1-1 ರಿಂದ ಸಮಬಲದೊಂದಿಗೆ ಅಂತ್ಯಗೊಳಿಸಿದ್ದ ವೆಸ್ಟ್ ಇಂಡೀಸ್ ತಂಡ ಇಂದಿನಿಂದ ಬಲಿಷ್ಠ ಆಸ್ಟ್ರೇಲಿಯಾ (Australia vs West Indies) ವಿರುದ್ಧ ಏಕದಿನ ಸರಣಿಯನ್ನು ಆರಂಭಿಸಿದೆ. ಆದರೆ ಏಕದಿನ ಸರಣಿಯಲ್ಲಿ ವಿಂಡೀಸ್ ಪಡೆಗೆ ನಿರೀಕ್ಷಿತ ಆರಂಭ ಸಿಕ್ಕಿಲ್ಲ. ಮೇಲ್ಬೋರ್ನ್​ ಕ್ರಿಕೆಟ್ ಮೈದಾನದಲ್ಲಿ (Melbourne Cricket Ground) ನಡೆದ ಉಭಯ ತಂಡಗಳ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡ, ವೆಸ್ಟ್ ಇಂಡೀಸ್ ತಂಡವನ್ನು 8 ವಿಕೆಟ್​ಗಳಿಂದ ಸೋಲಿಸಿ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ವಿಂಡೀಸ್ ನೀಡಿದ 232 ರನ್​ಗಳ ಸವಾಲನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ 38.3 ಓವರ್​ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.

ತತ್ತರಿಸಿದ ವಿಂಡೀಸ್ ಇನ್ನಿಂಗ್ಸ್

ಪಂದ್ಯದಲ್ಲಿ ಆಸ್ಟ್ರೇಲಿಯಾ ಟಾಸ್ ಗೆದ್ದು ವಿಂಡೀಸ್ ತಂಡವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿತು. ಅದರಂತೆ ಬ್ಯಾಟಿಂಗ್‌ ಆರಂಭಿಸಿದ ವಿಂಡೀಸ್​ಗೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಆರಂಭಿಕರಿಬ್ಬರು ಒಂದಂಕಿಗೆ ಸುಸ್ತಾದರು. ತಂಡದ ಪರ ಅರ್ಧಶತಕ ಇನ್ನಿಂಗ್ಸ್ ಆಡಿದ ಕೇಸಿ ಕಾರ್ಟಿ 88 ರನ್ ಕಲೆಹಾಕಿದರೆ, ರೋಸ್ಟನ್ ಚೇಸ್ 59 ರನ್‌ಗಳ ಕೊಡುಗೆ ನೀಡಿದರು. ಈ ಇಬ್ಬರನ್ನು ಹೊರತುಪಡಿಸಿ ಉಳಿದವರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಹೊರಬರಲಿಲ್ಲ. ಅಂತಿಮವಾಗಿ ತಂಡ 48.4 ಓವರ್‌ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 231 ರನ್ ಗಳಿಸಿತು. ಆಸ್ಟ್ರೇಲಿಯಾ ಪರ ಕ್ಸೇವಿಯರ್ ಬಾರ್ಟ್ಲೆಟ್ 4 ವಿಕೆಟ್ ಪಡೆದರೆ, ಸೀನ್ ಅಬಾಟ್ ಮತ್ತು ಕ್ಯಾಮರೂನ್ ಗ್ರೀನ್ ತಲಾ 2 ವಿಕೆಟ್ ಪಡೆದರು. ಆಡಮ್ ಝಂಪಾ 1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ಆಸ್ಟ್ರೇಲಿಯಾಕ್ಕೆ ಸುಲಭ ಜಯ

ವಿಂಡೀಸ್ ನೀಡಿದ 231 ರನ್​ಗಳ ಸುಲಭ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಕೇವಲ 2 ವಿಕೆಟ್ ಕಳೆದುಕೊಂಡು 38.3 ಓವರ್​ಗಳಲ್ಲಿ ಗೆಲುವಿನ ನಗೆ ಬೀರಿತು. ತಂಡದ ಪರ ನಾಯಕ ಸ್ಟೀವನ್ ಸ್ಮಿತ್ ಅಜೇಯ 79 ರನ್ ಗಳಿಸಿದರು. ತಮ್ಮ ಇನ್ನಿಂಗ್ಸ್​ನಲ್ಲಿ 79 ಎಸೆತಗಳನ್ನು ಎದುರಿಸಿದ ಸ್ಮಿತ್ 8 ಬೌಂಡರಿಗಳನ್ನು ಬಾರಿಸಿದರು. ಏತನ್ಮಧ್ಯೆ, ಕ್ಯಾಮರೂನ್ ಗ್ರೀನ್ ಕೂಡ 104 ಎಸೆತಗಳಲ್ಲಿ 77 ರನ್​ ಕಲೆಹಾಕಿದರು. ಕ್ಯಾಮರೂನ್ ಮತ್ತು ಸ್ಟೀವನ್ ಮೂರನೇ ವಿಕೆಟ್‌ಗೆ ಅಜೇಯ 149 ರನ್‌ಗಳ ಜೊತೆಯಾಟ ನೀಡಿದರು. ಇದಕ್ಕೂ ಮುನ್ನ ಜೋಸ್ ಇಂಗ್ಲಿಷ್ ಮತ್ತು ಕ್ಯಾಮರೂನ್ ಗ್ರೀನ್ ಇಬ್ಬರೂ ಎರಡನೇ ವಿಕೆಟ್‌ಗೆ 79 ರನ್ ಸೇರಿಸಿದರು. ಜೋಸ್ ಇಂಗ್ಲಿಷ್ 65 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ ಟ್ರಾವಿಸ್ ಹೆಡ್ 4 ರನ್ ಗಳಿಸಿ ಔಟಾದರು. ವಿಂಡೀಸ್ ಪರ ಗುಡಾಕೇಶ್ ಮೋತಿ ಮತ್ತು ಮ್ಯಾಥ್ಯೂ ಫೋರ್ಡ್ ತಲಾ 1 ವಿಕೆಟ್ ಪಡೆದರು.

ಆಸೀಸ್​ಗೆ 8 ವಿಕೆಟ್ ಜಯ

ಉಭಯ ತಂಡಗಳು

ಆಸ್ಟ್ರೇಲಿಯಾ ತಂಡ: ಸ್ಟೀವನ್ ಸ್ಮಿತ್ (ನಾಯಕ), ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಕ್ಯಾಮೆರಾನ್ ಗ್ರೀನ್, ಮಾರ್ನಸ್ ಲಬುಶೇನ್, ಮ್ಯಾಥ್ಯೂ ಶಾರ್ಟ್, ಆರನ್ ಹಾರ್ಡಿ, ಶಾನ್ ಅಬಾಟ್, ಕ್ಸೇವಿಯರ್ ಬಾರ್ಟ್ಲೆಟ್, ಲ್ಯಾನ್ಸ್ ಮೋರಿಸ್ ಮತ್ತು ಆಡಮ್ ಝಂಪಾ.

ವೆಸ್ಟ್ ಇಂಡೀಸ್: ಜಸ್ಟಿನ್ ಗ್ರೀವ್ಸ್, ಅಲಿಕ್ ಅಥಾನಾಜೆಹ್, ಶಾಯ್ ಹೋಪ್ (ನಾಯಕ ಮತ್ತು ವಿಕೆಟ್ ಕೀಪರ್), ಕೇಸಿ ಕಾರ್ಟಿ, ಕವೆಮ್ ಹಾಡ್ಜ್, ರೋಸ್ಟನ್ ಚೇಸ್, ರೊಮಾರಿಯೋ ಶೆಫರ್ಡ್, ಮ್ಯಾಥ್ಯೂ ಫೋರ್ಡ್, ಹೇಡನ್ ವಾಲ್ಷ್, ಗುಡಕೇಶ್ ಮೊತಿ ಮತ್ತು ಒಶಾನೆ ಥಾಮಸ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ