IND vs AUS: ಆಸೀಸ್ ತಂಡದೊಳಗೆ ಒಡಕು..! ಮೌನ ಮುರಿದ ಟ್ರಾವಿಸ್ ಹೆಡ್
IND vs AUS: ಪರ್ತ್‌ನಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾದ ಸೋಲಿನ ನಂತರ ತಂಡದಲ್ಲಿ ಒಡಕು ಉಂಟಾಗಿದೆ ಎಂಬ ವದಂತಿಗಳಿಗೆ ಟ್ರಾವಿಸ್ ಹೆಡ್ ತಮ್ಮ ಹೇಳಿಕೆಯ ಮೂಲಕ ತೆರೆ ಎಳೆದಿದ್ದಾರೆ. ತಂಡದಲ್ಲಿ ಯಾವುದೇ ವಿವಾದವಿಲ್ಲ ಎಂದು ಹೇಳಿರುವ ಹೆಡ್, ಸೋಲಿನಿಂದ ಚೇತರಿಸಿಕೊಳ್ಳಲು ಹೊಸ ಮಾರ್ಗಗಳನ್ನು ಹುಡುಕುತ್ತಿರುವುದಾಗಿ ತಿಳಿಸಿದ್ದಾರೆ. ಜೋಶ್ ಹೇಜಲ್‌ವುಡ್ ನೀಡಿದ ಹೇಳಿಕೆಯಿಂದ ಉಂಟಾದ ಗೊಂದಲವನ್ನು ಸ್ಪಷ್ಟಪಡಿಸಲು ಹೆಡ್ ಪ್ರಯತ್ನಿಸಿದ್ದಾರೆ.
ಪರ್ತ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಭಾರತ ಅತ್ಯಂತ ಹೀನಾಯವಾಗಿ ಸೋಲಿಸಿತ್ತು. ವೇಗದ ಮತ್ತು ಬೌನ್ಸಿ ಪಿಚ್‌ನಲ್ಲಿ ಕಾಂಗರೂ ತಂಡ ಭಾರತದ ಆಟಗಾರರಿಗೆ ಶರಣಾಯಿತು. ಆಸ್ಟ್ರೇಲಿಯ ಎಂದಿಗೂ ಸೋಲನುಭವಿಸದ ನೆಲದಲ್ಲಿ 295 ರನ್‌ಗಳ ಹೀನಾಯ ಸೋಲು ಕಂಡಿರುವುದು ಪ್ಯಾಟ್ ಕಮಿನ್ಸ್ ತಂಡ ಸೇರಿದಂತೆ ಆಸ್ಟ್ರೇಲಿಯಾದ ಮಾಜಿ ಆಟಗಾರರಿಗೆ ಆಘಾತ ನೀಡಿದೆ. ಏತನ್ಮಧ್ಯೆ, ಜೋಶ್ ಹೇಜಲ್‌ವುಡ್ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಹೇಳಿಕೆಯೊಂದಿಗೆ ಹೊಸ ಬಾಂಬ್ ಸಿಡಿಸುವ ಮೂಲಕ ಆಸೀಸ್ ತಂಡದೊಳಗೆ ಬಿರುಕು ಮೂಡಿದೆ ಎಂಬ ಸಂದೇಹ ಹುಟ್ಟುಹಾಕಿದ್ದರು. ಆ ನಂತರ ಆಸ್ಟ್ರೇಲಿಯಾದ ಮಾಜಿ ವಿಕೆಟ್ಕೀಪರ್ ಆಡಮ್ ಗಿಲ್‌ಕ್ರಿಸ್ಟ್ ಕೂಡ ತಂಡದಲ್ಲಿ ಒಡಕು ಉಂಟಾಗಿದೆ ಎಂದು ಹೇಳುವ ಮೂಲಕ ಹೇಜಲ್‌ವುಡ್ ಹೇಳಿಕೆ ಮತ್ತಷ್ಟು ಪುಷ್ಠಿ ನೀಡಿದ್ದರು. ಇದೀಗ ಟ್ರಾವಿಸ್ ಹೆಡ್ ಈ ಹೇಳಿಕೆಯ ಬಗ್ಗೆ ಮೌನ ಮುರಿದಿದ್ದಾರೆ.
ಎಲ್ಲಾ ಊಹಾಪೋಹ ಎಂದ ಹೆಡ್
ಅಡಿಲೇಡ್‌ನಲ್ಲಿ ನಡೆಯಲಿರುವ ಪಿಂಕ್ ಬಾಲ್ ಟೆಸ್ಟ್ಗಾಗಿ ಭಾರತ ಹಾಗೂ ಆಸ್ಟ್ರೇಲಿಯಾ ಅಭ್ಯಾಸದಲ್ಲಿ ನಿರತವಾಗಿವೆ. ಈ ವೇಳೆ ಆಟಗಾರರ ನಡುವೆ ಮನಸ್ತಾಪ ಉಂಟಾಗಿದೆ ಎಂಬ ಸುದ್ದಿಯ ಬಗ್ಗೆ ಹೆಡ್ ಬಳಿ ಪ್ರಶ್ನಿಸಲಾಯಿತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಹೆಡ್, ಡ್ರೆಸ್ಸಿಂಗ್ ರೂಮ್‌ನಲ್ಲಿ ಯಾವುದೇ ರೀತಿಯ ವಿವಾದ ಅಥವಾ ಭಿನ್ನಾಭಿಪ್ರಾಯವಿಲ್ಲ. ಇದೆಲ್ಲ ವದಂತಿಗಳಷ್ಟೆ. ಆಟಗಾರರ ನಡುವೆಯೂ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಎಲ್ಲಾ ಆಟಗಾರರು ಪರಸ್ಪರ ಸಮಯ ಕಳೆಯುತ್ತಿದ್ದಾರೆ. ಕಳೆದ ವಾರ ನಮಗೆ ಕೆಟ್ಟ ವಾರವಾಗಿತ್ತು. ಹೀಗಾಗಿ ಈ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪುಟಿದೇಳಲು ಹೊಸ ಮಾರ್ಗಗಳನ್ನು ಹುಡುಕುತ್ತಿದ್ದೇವೆ.
ಿಇನ್ನು ಡ್ರೆಸ್ಸಿಂಗ್ ರೂಮ್ ವಾತಾವರಣದ ಬಗ್ಗೆ ಮಾತನಾಡಿದ ಹೆಡ್, ‘ಇತರ ಬ್ಯಾಟ್ಸ್‌ಮನ್‌ಗಳು ನನಗೆ ಯಾವುದೇ ರೀತಿಯ ಬ್ಯಾಟಿಂಗ್ ಸಲಹೆಗಳನ್ನು ನೀಡಲು ಬರುತ್ತಿಲ್ಲ. ಪ್ರತಿಯೊಬ್ಬರೂ ತಮ್ಮದೇ ಆದ ಆಟವಾಡುವ ವಿಧಾನವನ್ನು ಹೊಂದಿದ್ದಾರೆ ಮತ್ತು ನಾವೆಲ್ಲರೂ ಪರಸ್ಪರ ಬೆಂಬಲಿಸುತ್ತಿದ್ದೇವೆ. ಮುಂದಿನ ಮೂರ್ನಾಲ್ಕು ದಿನಗಳ ಕಾಲ ನಮ್ಮ ನಡುವೆ ವಾಪಸಾತಿಗೆ ಸಂಬಂಧಿಸಿದಂತೆ ಚರ್ಚೆಗಳು ನಡೆಯಲಿವೆ. ಕಳೆದ 3-4 ವರ್ಷಗಳಲ್ಲಿ ನಾವು ಉತ್ತಮ ಸಾಧನೆ ಮಾಡಿದ್ದೇವೆ. ಇದು ನಮಗೆ ಕೆಟ್ಟ ವಾರವಾಗಿತ್ತು ಆದರೆ ಇದು ಹೆಚ್ಚು ಮುಖ್ಯವಲ್ಲ. ಉತ್ತಮ ಪ್ರದರ್ಶನಕ್ಕೆ ಇನ್ನೂ 4 ಅವಕಾಶಗಳಿವೆ. ಮೊದಲಿನಂತೆಯೇ, ನಾವು ಮತ್ತೆ ಹೊಸ ವಿಧಾನವನ್ನು ಕಂಡುಕೊಳ್ಳುತ್ತೇವೆ ಎಂದಿದ್ದಾರೆ.
ಹೇಜಲ್‌ವುಡ್ ನೀಡಿದ ಹೇಳಿಕೆಯಲ್ಲಿ ಏನಿತ್ತು?
ಪರ್ತ್ ಟೆಸ್ಟ್‌ನಲ್ಲಿ ಹೀನಾಯ ಸೋಲಿನ ನಂತರ ಆಸ್ಟ್ರೇಲಿಯಾದ ಹಲವು ಮಾಜಿ ಆಟಗಾರರು ತಂಡದ ವಿರುದ್ಧ ಕೋಪಗೊಂಡಿದ್ದಲ್ಲದೆ, ಪ್ಯಾಟ್ ಕಮಿನ್ಸ್ ಪಡೆಯನ್ನು ತೀವ್ರವಾಗಿ ಟೀಕಿಸಿದ್ದರು. ಜೊತೆಗೆ ತಂಡದ ಆಟದ ವಿಧಾನದ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಯಿತು. ಇದರ ಜೊತೆಗೆ ಪರ್ತ್ ಟೆಸ್ಟ್ ಮುಗಿದ ಬಳಿಕ ಆಸೀಸ್ ವೇಗಿ ಜೋಶ್ ಹ್ಯಾಜಲ್‌ವುಡ್ ಬಳಿ ಭಾರತ ನೀಡಿದ ಗುರಿಯನ್ನು ಬೆನ್ನಟ್ಟಲು ಸಾಧ್ಯವಾಗದ ಬಗ್ಗೆ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ್ದ ಹೆಡ್, ಈ ಪ್ರಶ್ನೆಯನ್ನು ನೀವು ತಂಡದ ಬ್ಯಾಟ್ಸ್‌ಮನ್‌ಗಳ ಬಳಿ ಕೇಳಬೇಕು ಎಂದಿದ್ದರು. ಜೋಶ್ ಅವರ ಈ ಉತ್ತರದ ನಂತರ ಆಟಗಾರರ ನಡುವೆ ಬಿರುಕು ಮೂಡಿದೆ ಎಂದು ಮಾಧ್ಯಮಗಳು ವರದಿ ಮಾಡಲಾರಂಭಿಸಿದ್ದವು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ