IND vs PAK: ‘ಪಾಕ್ ತಂಡ ಭಾರತಕ್ಕೆ ಹೋಗಬೇಕು’; ಪಿಸಿಬಿ ನಿರ್ಧಾರಕ್ಕೆ ಅಖ್ತರ್ ಅಪಸ್ವರ

IND vs PAK: ‘ಪಾಕ್ ತಂಡ ಭಾರತಕ್ಕೆ ಹೋಗಬೇಕು’; ಪಿಸಿಬಿ ನಿರ್ಧಾರಕ್ಕೆ ಅಖ್ತರ್ ಅಪಸ್ವರ

ಪೃಥ್ವಿಶಂಕರ
|

Updated on: Dec 02, 2024 | 4:58 PM

IND vs PAK: ನಾವು ಸ್ನೇಹದ ಹಸ್ತವನ್ನು ಚಾಚಿ ಭಾರತಕ್ಕೆ ಹೋಗಬೇಕು. ಪಾಕಿಸ್ತಾನ ತಂಡ ಭಾರತಕ್ಕೆ ಏಕೆ ಹೋಗುವುದಿಲ್ಲ? ಖಂಡಿತ ನಾವು ಹೋಗಬೇಕು. ನಮ್ಮ ತಂಡ ಭಾರತಕ್ಕೆ ಹೋಗಿ, ಅಲ್ಲಿ ಆಟವಾಡಿ, ಟೀಂ ಇಂಡಿಯಾವನ್ನು ಅವರ ನೆಲದಲ್ಲೇ ಸೋಲಿಸಬೇಕು ಎಂದು ಶೋಯೆಬ್ ಅಖ್ತರ್ ಹೇಳಿದ್ದಾರೆ.

ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯಲ್ಲಿರುವ ಚಾಂಪಿಯನ್ಸ್ ಟ್ರೋಫಿ ಆಯೋಜನೆಗೆ ಸಂಬಂಧಿಸಿದಂತೆ ಉಂಟಾಗಿದ್ದ ಗೊಂದಲಗಳಿಗೆ ತೆರೆ ಬಿದ್ದಿದೆ. ಐಸಿಸಿ ಆದೇಶದಂತೆ ಆತಿಥೇಯ ಪಾಕಿಸ್ತಾನ ಈ ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲು ಸಮ್ಮತಿ ಸೂಚಿಸಿದೆ ಎಂಬ ಮಾಹಿತಿ ಹೊರಬಿದ್ದಿದೆ. ಆದರೆ ಹೈಬ್ರಿಡ್ ಮಾದರಿಗೆ ಒಪ್ಪಿಗೆ ಸೂಚಿಸಿರುವುದರ ಜೊತೆಗೆ ಪಾಕ್ ಕ್ರಿಕೆಟ್ ಮಂಡಳಿ, ಐಸಿಸಿ ಮುಂದಿಟ್ಟಿರುವ ಕೆಲವು ಷರತ್ತುಗಳ ಬಗ್ಗೆ ಪ್ರಸ್ತುತ ಚರ್ಚೆ ನಡೆಯುತ್ತಿದೆ. ಈ ನಡುವೆ ಪಾಕ್ ಮಂಡಳಿ ಐಸಿಸಿ ಮುಂದಿಟ್ಟಿರುವ ಷರತ್ತುಗಳ ಬಗ್ಗೆ ಪಾಕ್ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಅಪಸ್ವರ ಎತ್ತಿದ್ದಾರೆ. ಮಂಡಳಿಯ ಕೆಲವು ಬೇಡಿಕೆಗಳು ಒಪ್ಪುವಂತದ್ದು ಎಂದಿರುವ ಅಖ್ತರ್, ಅದೊಂದು ಷರತ್ತಿಗೆ ಮಾತ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಪಿಸಿಬಿಯ ಷರತ್ತಿಗೆ ಅಖ್ತರ್ ಅಪಸ್ವರ

ವಾಸ್ತವವಾಗಿ ಚಾಂಪಿಯನ್ಸ್ ಟ್ರೋಫಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲು ಒಪ್ಪಿಗೆ ಸೂಚಿಸಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಇದರ ಜೊತೆಗೆ ಪ್ರಮುಖವಾಗಿ ಎರಡು ಬೇಡಿಕೆಗಳನ್ನು ಐಸಿಸಿ ಮುಂದಿಟ್ಟಿದೆ. ಅದರ ಮೊದಲನೆಯದ್ದಾಗಿ ಐಸಿಸಿ ತನ್ನ ವಾರ್ಷಿಕ ಆದಾಯದಲ್ಲಿ ತನ್ನ ಪಾಲನ್ನು ಹೆಚ್ಚಿಸುವ ಷರತ್ತನ್ನು ಪಿಸಿಬಿ ಮುಂದಿಟ್ಟಿದೆ. ಐಸಿಸಿಯ ಪ್ರಸ್ತುತ ಆದಾಯ ಮಾದರಿಯ ಅಡಿಯಲ್ಲಿ, ಬಿಸಿಸಿಐ ಗರಿಷ್ಠ ಹಣವನ್ನು ಅಂದರೆ ಶೇ, 39 ಪ್ರತಿಶತ ಹಣವನ್ನು ಪಡೆಯುತ್ತಿದೆ. ಆದರೆ ಪಾಕ್ ಕ್ರಿಕೆಟ್ ಮಂಡಳಿ ಕೇವಲ 5.75 ಪ್ರತಿಶತ ಹಣವನ್ನು ಪಡೆಯುತ್ತಿದೆ. ಇದೀಗ ಇದನ್ನೂ ಹೆಚ್ಚಿಸುವಂತೆ ಪಿಸಿಬಿ ಆಗ್ರಹಿಸುತ್ತಿದೆ.

ಎರಡನೇಯದ್ದಾಗಿ ಮುಂದಿನ 7 ವರ್ಷಗಳಲ್ಲಿ ಐಸಿಸಿ ಆಯೋಜಿಸುವ ಟೂರ್ನಿಗಳನ್ನು ಹೈಬ್ರಿಡ್ ಮಾದರಿಯಲ್ಲೇ ಆಯೋಜಿಸಬೇಕು ಎಂಬುದು ಪಿಸಿಬಿಯ ಮತ್ತೊಂದು ಷರತ್ತಾಗಿದೆ. ಅಂದರೆ ಇದೀಗ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾದ ಪಂದ್ಯಗಳನ್ನು ಹೇಗೆ ಪಾಕಿಸ್ತಾನದ ಹೊರಗೆ ಆಯೋಜಿಸಲಾಗುತ್ತಿದೇಯೋ ಹಾಗೆಯೇ ಮುಂದಿನ 7 ವರ್ಷಗಳಲ್ಲಿ ಭಾರತ ಆತಿಥ್ಯವಹಿಸುವ ಐಸಿಸಿ ಟೂರ್ನಿಗಳಲ್ಲಿ ಪಾಕಿಸ್ತಾನದ ಪಂದ್ಯಗಳನ್ನು ಭಾರತದ ಹೊರಗೆ ಆಯೋಜಿಸಬೇಕು ಎಂಬುದು ಪಿಸಿಬಿಯ ಷರತ್ತಾಗಿದೆ.

ಅವರ ನೆಲದಲ್ಲೇ ಅವರನ್ನು ಸೋಲಿಸಬೇಕು

ಇದೀಗ ಪಿಸಿಬಿಯ ಈ ಷರತ್ತುಗಳ ಬಗ್ಗೆ ಪಾಕಿಸ್ತಾನಿ ಚಾನೆಲ್‌ನಲ್ಲಿ ಮಾತನಾಡಿದ ಶೋಯೆಬ್ ಅಖ್ತರ್, ‘ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೋಸ್ಟಿಂಗ್ ಹಕ್ಕುಗಳು ಮತ್ತು ಆದಾಯದ ಪಾಲನ್ನು ಹೆಚ್ಚಿಸುವ ಬಗ್ಗೆ ಇಟ್ಟಿರುವ ಬೇಡಿಕೆ ಎಲ್ಲರೂ ಒಪ್ಪುವಂತದ್ದೆ. ಆದರೆ ಭಾರತ ಆತಿಥ್ಯ ನೀಡುವ ಐಸಿಸಿ ಪಂದ್ಯಾವಳಿಗಳಲ್ಲಿ ತನ್ನ ತಂಡದ ಪಂದ್ಯಗಳನ್ನು ಭಾರತದ ಹೊರಗೆ ಆಯೋಜಿಸಬೇಕು ಎನ್ನುವ ಮಂಡಳಿಯ ಷರತ್ತನ್ನು ಒಪ್ಪಲು ಸಾಧ್ಯವಿಲ್ಲ. ನಾವು ಸ್ನೇಹದ ಹಸ್ತವನ್ನು ಚಾಚಿ ಭಾರತಕ್ಕೆ ಹೋಗಬೇಕು. ಪಾಕಿಸ್ತಾನ ತಂಡ ಭಾರತಕ್ಕೆ ಏಕೆ ಹೋಗುವುದಿಲ್ಲ? ಖಂಡಿತ ನಾವು ಹೋಗಬೇಕು. ನಮ್ಮ ತಂಡ ಭಾರತಕ್ಕೆ ಹೋಗಿ, ಅಲ್ಲಿ ಆಟವಾಡಿ, ಟೀಂ ಇಂಡಿಯಾವನ್ನು ಅವರ ನೆಲದಲ್ಲೇ ಸೋಲಿಸಬೇಕು ಎಂದು ಹೇಳಿದ್ದಾರೆ.

ಯುಎಇಯಲ್ಲಿ ಭಾರತದ ಪಂದ್ಯಗಳು

ಮುಂದಿನ ವರ್ಷ ನಡೆಯುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡ ತನ್ನ ಎಲ್ಲಾ ಪಂದ್ಯಗಳನ್ನು ಯುಎಇಯಲ್ಲಿ ಆಡಲಿದೆ. ಟೀಂ ಇಂಡಿಯಾ ಪ್ಲೇ ಆಫ್​ಗೆ ಅರ್ಹತೆ ಪಡೆದರೆ, ಟೂರ್ನಿಯ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ಯುಎಇಯಲ್ಲಿಯೇ ನಡೆಯಲಿವೆ. ಆದರೆ, ರೋಹಿತ್ ಸೇನೆಯ ಪಯಣ ಗುಂಪು ಹಂತದಲ್ಲಿಯೇ ಅಂತ್ಯಗೊಂಡರೆ, ಸೆಮಿಫೈನಲ್ ಮತ್ತು ಫೈನಲ್ ಲಾಹೋರ್‌ನಲ್ಲಿ ನಡೆಯಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ