ಬಾರ್ಡರ್ – ಗವಾಸ್ಕರ್ ಟೆಸ್ಟ್ ಸರಣಿಯ ಎರಡನೇ ಪಂದ್ಯಕ್ಕೆ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದೆ. ಈ ಪಂದ್ಯದಲ್ಲೂ ನಾಯಕರಾಗಿ ಪ್ಯಾಟ್ ಕಮಿನ್ಸ್ ಕಾಣಿಸಿಕೊಳ್ಳಲಿದ್ದಾರೆ. ಆದರೆ ಮೊದಲ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಆಲ್ರೌಂಡರ್ ಮಿಚೆಲ್ ಮಾರ್ಷ್ ಪಿಂಕ್ ಬಾಲ್ ಟೆಸ್ಟ್ಗೆ ಅಲಭ್ಯರಾಗಿದ್ದಾರೆ.
ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿರುವ ಮಾರ್ಷ್ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಅವರ ಬದಲಿಗೆ ಅನುಭವಿ ಆಲ್ರೌಂಡರ್ ಬ್ಯೂ ವೆಬ್‌ಸ್ಟರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
30 ವರ್ಷದ ಬ್ಯೂ ವೆಬ್‌ಸ್ಟರ್ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 159 ಇನಿಂಗ್ಸ್ ಆಡಿರುವ ವೆಬ್‌ಸ್ಟರ್ 12 ಶತಕ ಹಾಗೂ 24 ಅರ್ಧಶತಕಗಳೊಂದಿಗೆ 5297 ರನ್ ಕಲೆಹಾಕಿದ್ದಾರೆ. ಹಾಗೆಯೇ ಬೌಲಿಂಗ್ನಲ್ಲಿ 148 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಇದೀಗ ರಾಷ್ಟ್ರೀಯ ತಂಡಕ್ಕೆ ಎಂಟ್ರಿ ಕೊಟ್ಟಿರುವ ಹಿರಿಯ ಆಟಗಾರನಿಗೆ ಅಡಿಲೇಡ್ ಟೆಸ್ಟ್ನಲ್ಲಿ ಅವಕಾಶ ಸಿಗಲಿದೆಯಾ ಕಾದು ನೋಡಬೇಕಿದೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಪಿಂಕ್ ಬಾಲ್ ಟೆಸ್ಟ್ ಡಿಸೆಂಬರ್ 6 ರಿಂದ ಶುರುವಾಗಲಿದೆ. ಅಡಿಲೇಡ್ನ ಓವಲ್ ಮೈದಾನದಲ್ಲಿ ಜರುಗಲಿರುವ ಈ ಪಂದ್ಯವು ಡೇ-ನೈಟ್ ನಲ್ಲಿ ನಡೆಯಲಿದ್ದು, ಈ ಪಂದ್ಯವನ್ನು ಪಿಂಕ್ ಬಾಲ್ನಲ್ಲಿ ಆಡಲಾಗುತ್ತದೆ. ಇದೇ ಕಾರಣದಿಂದಾಗಿ ಇದನ್ನು ಪಿಂಕ್ ಬಾಲ್ ಟೆಸ್ಟ್ ಎಂದು ಕರೆಯಲಾಗುತ್ತದೆ. ಈ ಟೆಸ್ಟ್ ಪಂದ್ಯಕ್ಕಾಗಿ ಉಭಯ ತಂಡಗಳು ಈ ಕೆಳಗಿನಂತಿದೆ…
ಆಸ್ಟ್ರೇಲಿಯಾ ಟೆಸ್ಟ್ ತಂಡ: ಪ್ಯಾಟ್ ಕಮಿನ್ಸ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್‌ಚಾಗ್ನೆ, ನಾಥನ್ ಲಿಯಾನ್, ಮಿಚ್ ಮಾರ್ಷ್, ನಾಥನ್ ಮೆಕ್‌ಸ್ವೀನಿ, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ , ಬ್ಯೂ ವೆಬ್‌ಸ್ಟರ್.
ಇದನ್ನೂ ಓದಿ: IPL 2025: ವಿರಾಟ್ ಕೊಹ್ಲಿ ಜೊತೆಗಿನ ಕಿರಿಕ್ಗೆ ಭಾರೀ ಬೆಲೆ ತೆತ್ತ ‘ಮ್ಯಾಂಗೊ’ ನವೀನ
ಐದು ಪಂದ್ಯದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಮುನ್ನಡೆ ಸಾಧಿಸಿದೆ. ಪರ್ತ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ 295 ರನ್ಗಳಿಂದ ಆಸೀಸ್ ಪಡೆಯನ್ನು ಬಗ್ಗು ಬಡಿದು ಭಾರತ ತಂಡ ಶುಭಾರಂಭ ಮಾಡಿದೆ. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ 1-0 ಅಂತರದಿಂದ ಮುನ್ನಡೆ ಸಾಧಿಸಿದ್ದು, ಈ ಗೆಲುವಿನ ಲಯವನ್ನು ಅಡಿಲೇಡ್ನಲ್ಲೂ ಮುಂದುವರೆಸುವ ವಿಶ್ವಾಸದಲ್ಲಿದೆ.