Ashes 2025: ಆ್ಯಶಸ್ ಸರಣಿಗೆ ಬಲಿಷ್ಠ ಆಸ್ಟ್ರೇಲಿಯಾ ತಂಡ ಪ್ರಕಟ

Australia vs England: ನವೆಂಬರ್ 21 ರಿಂದ ಶುರುವಾಗಲಿರುವ ಇಂಗ್ಲೆಂಡ್ ವಿರುದ್ಧದ ಆ್ಯಶಸ್ ಸರಣಿಯ ಮೊದಲ ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಅಲಭ್ಯರಾಗಿದ್ದಾರೆ. ಕಮಿನ್ಸ್ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಮೊದಲ ಮ್ಯಾಚ್​ನಲ್ಲಿ ಅನುಭವಿ ಆಟಗಾರ ಸ್ಟೀವ್ ಸ್ಮಿತ್ ಮುನ್ನಡೆಸಲಿದ್ದಾರೆ.

Ashes 2025: ಆ್ಯಶಸ್ ಸರಣಿಗೆ ಬಲಿಷ್ಠ ಆಸ್ಟ್ರೇಲಿಯಾ ತಂಡ ಪ್ರಕಟ
Australia

Updated on: Nov 05, 2025 | 9:53 AM

ಇಂಗ್ಲೆಂಡ್ ವಿರುದ್ಧದ ಪ್ರತಿಷ್ಠಿತ ಆ್ಯಶಸ್ ಸರಣಿಯ ಮೊದಲ ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡವನ್ನು ಸ್ಟೀವ್ ಸ್ಮಿತ್ ಮುನ್ನಡೆಸಲಿರುವುದು ವಿಶೇಷ. ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಸೊಂಟದ ಮೂಳೆಯ ನೋವಿನಿಂದ ಬಳಲುತ್ತಿದ್ದು, ಹೀಗಾಗಿ ನವೆಂಬರ್ 21 ರಂದು ಆರಂಭವಾಗಲಿರುವ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.

ಇತ್ತ ಪ್ಯಾಟ್ ಕಮಿನ್ಸ್ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಮೊದಲ ಪಂದ್ಯದಲ್ಲಿ ಸ್ಟೀವ್ ಸ್ಮಿತ್ ಮುನ್ನಡೆಸಲಿದ್ದಾರೆ. ಇನ್ನು ಉಳಿದ ಪಂದ್ಯಗಳಿಂದಲೂ ಕಮಿನ್ಸ್ ಹೊರಗುಳಿದರೆ ಸ್ಮಿತ್ ನಾಯಕನಾಗಿ ಮುಂದುವರೆಯಲಿದ್ದಾರೆ.

ಅಂದಹಾಗೆ ಸ್ಟೀವ್ ಸ್ಮಿತ್ ಈ ಹಿಂದೆ ಆಸ್ಟ್ರೇಲಿಯಾ ತಂಡದ ನಾಯಕನಾಗಿ ಕಾಣಿಸಿಕೊಂಡಿದ್ದರು.  ಸ್ಮಿತ್ ಮುಂದಾಳತ್ವದಲ್ಲಿ 40 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಆಸೀಸ್ ಪಡೆ 23 ಗೆಲುವು ದಾಖಲಿಸಿತ್ತು. ಇನ್ನು ಸ್ಮಿತ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ಸೋತಿರುವುದು ಕೇವಲ 10 ಮ್ಯಾಚ್​ಗಳನ್ನು ಮಾತ್ರ. ಇನ್ನುಳಿದ 7 ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ.

ಇನ್ನು 15 ಸದಸ್ಯರುಗಳ ಈ ತಂಡಕ್ಕೆ ಯುವ ಸ್ಫೋಟಕ ದಾಂಡಿಗ ಸ್ಯಾಮ್ ಕೋನ್​ಸ್ಟಾಸ್ ಆಯ್ಕೆಯಾಗಿಲ್ಲ. ಬದಲಾಗಿ ಜೇಕ್ ವೆದರಾಲ್ಡ್​ಗೆ ಚೊಚ್ಚಲ ಬಾರಿಗೆ ಅವಕಾಶ ನೀಡಲಾಗಿದೆ. ಹಾಗೆಯೇ ಬ್ರೆಂಡನ್ ಡಾಗೆಟ್‌ಗೆ 7 ವರ್ಷಗಳ ನಂತರ ಮತ್ತೊಮ್ಮೆ ಆಸ್ಟ್ರೇಲಿಯಾ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅದರಂತೆ ಆ್ಯಶಸ್ ಸರಣಿಗೆ ಆಸ್ಟ್ರೇಲಿಯಾ ತಂಡ ಈ ಕೆಳಗಿನಂತಿದೆ…

ಆಸ್ಟ್ರೇಲಿಯಾ ಟೆಸ್ಟ್ ತಂಡ (ಮೊದಲ ಪಂದ್ಯಕ್ಕೆ): ಸ್ಟೀವ್ ಸ್ಮಿತ್ (ನಾಯಕ), ಶಾನ್ ಅಬಾಟ್, ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಬ್ರೆಂಡನ್ ಡಾಗೆಟ್, ಕ್ಯಾಮರೋನ್ ಗ್ರೀನ್, ಜೋಶ್ ಹೇಝಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಉಸ್ಮಾನ್ ಖ್ವಾಜಾ, ಮಾರ್ನಸ್ ಲಾಬುಶೇನ್, ನಾಥನ್ ಲಿಯಾನ್, ಮಿಚೆಲ್ ಸ್ಟಾರ್ಕ್, ಜೇಕ್ ವೆದರಾಲ್ಡ್, ಬ್ಯೂ ವೆಬ್‌ಸ್ಟರ್.

ಇಂಗ್ಲೆಂಡ್ ತಂಡ: ಬೆನ್ ಸ್ಟೋಕ್ಸ್ (ನಾಯಕ), ಹ್ಯಾರಿ ಬ್ರೂಕ್ (ಉಪನಾಯಕ), ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಶೋಯೆಬ್ ಬಶೀರ್, ಜೇಕಬ್ ಬೆಥೆಲ್, ಬ್ರೈಡನ್ ಕಾರ್ಸೆ, ಜ್ಯಾಕ್ ಕ್ರಾಲಿ, ಬೆನ್ ಡಕೆಟ್, ವಿಲ್ ಜ್ಯಾಕ್ಸ್, ಓಲಿ ಪೋಪ್, ಮ್ಯಾಥ್ಯೂ ಪಾಟ್ಸ್, ಜೋ ರೂಟ್, ಜೇಮಿ ಸ್ಮಿತ್, ಜೋಶ್ ಟಂಗ್, ಮಾರ್ಕ್ ವುಡ್.

ಇದನ್ನೂ ಓದಿ: ಮಿಲಿಂದ್ ಆರ್ಭಟಕ್ಕೆ ವಿರಾಟ್ ಕೊಹ್ಲಿಯ ವಿಶ್ವ ದಾಖಲೆ ಉಡೀಸ್

ಆ್ಯಶಸ್ ಸರಣಿ ವೇಳಾಪಟ್ಟಿ:

  • ಮೊದಲ ಟೆಸ್ಟ್: ಶುಕ್ರವಾರ ನವೆಂಬರ್ 21 – ನವೆಂಬರ್ 25 (ಬೆಳಿಗ್ಗೆ 2.30) – ಆಪ್ಟಸ್ ಕ್ರೀಡಾಂಗಣ, ಪರ್ತ್
  • ಎರಡನೇ ಟೆಸ್ಟ್: ಗುರುವಾರ ಡಿಸೆಂಬರ್ 4 – ಡಿಸೆಂಬರ್ 8 (ಬೆಳಿಗ್ಗೆ 4.30) – ದಿ ಗಬ್ಬಾ, ಬ್ರಿಸ್ಬೇನ್
  • ಮೂರನೇ ಟೆಸ್ಟ್: ಬುಧವಾರ ಡಿಸೆಂಬರ್ 17 – ಡಿಸೆಂಬರ್ 21 (ಬೆಳಿಗ್ಗೆ 12) – ಅಡಿಲೇಡ್ ಓವಲ್
  • ನಾಲ್ಕನೇ ಟೆಸ್ಟ್: ಗುರುವಾರ ಡಿಸೆಂಬರ್ 25 – ಡಿಸೆಂಬರ್ 29 (ರಾತ್ರಿ 11.30) – ಮೆಲ್ಬೋರ್ನ್ ಕ್ರಿಕೆಟ್ ಮೈದಾನ
  • ಐದನೇ ಟೆಸ್ಟ್: ಜನವರಿ 3 ಭಾನುವಾರ – ಜನವರಿ 7  (ರಾತ್ರಿ 11.30) – ಸಿಡ್ನಿ ಕ್ರಿಕೆಟ್ ಮೈದಾನ.