ಮಿಲಿಂದ್ ಆರ್ಭಟಕ್ಕೆ ವಿರಾಟ್ ಕೊಹ್ಲಿಯ ವಿಶ್ವ ದಾಖಲೆ ಉಡೀಸ್
Milind Kumar Record: ದೆಹಲಿ ಮೂಲದ ಯುಎಸ್ಎ ಬ್ಯಾಟ್ಸ್ಮನ್ ಮಿಲಿಂದ್ ಕುಮಾರ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ. ಕಳೆದ 5 ಏಕದಿನ ಇನಿಂಗ್ಸ್ಗಳಲ್ಲಿ ನಾಲ್ಕು 50+ ಸ್ಕೋರ್ಗಳಿಸಿರುವ ಮಿಲಿಂದ್ ಕುಮಾರ್ ಇದೀಗ ವಿರಾಟ್ ಕೊಹ್ಲಿಯ ಹೆಸರಿನಲ್ಲಿದ್ದ ಭರ್ಜರಿ ದಾಖಲೆಯೊಂದನ್ನು ಮುರಿದಿದ್ದಾರೆ. ಈ ಮೂಲಕ ಹೊಸ ಇತಿಹಾಸವನ್ನು ನಿರ್ಮಿಸಿದ್ದಾರೆ.
Updated on:Nov 05, 2025 | 8:31 AM

ಯುಎಸ್ಎ ತಂಡದ ಅನುಭವಿ ಬ್ಯಾಟರ್ ಮಿಲಿಂದ್ ಕುಮಾರ್ (Milind Kumar) ಏಕದಿನ ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಈ ವರ್ಲ್ಡ್ ರೆಕಾರ್ಡ್ ನಿರ್ಮಿಸಿರುವುದು ದಾಖಲೆಗಳ ಸರದಾರ ವಿರಾಟ್ ಕೊಹ್ಲಿಯ (Virat Kohli) ಭರ್ಜರಿ ದಾಖಲೆ ಮುರಿಯುವ ಮೂಲಕ ಎಂಬುದು ವಿಶೇಷ.

ನವೆಂಬರ್ 3 ರಂದು ನಡೆದ ಯುಎಇ ವಿರುದ್ಧದ ಏಕದಿನ ಪಂದ್ಯದಲ್ಲಿ ಮಿಲಿಂದ್ ಕುಮಾರ್ ಅಜೇಯ 123 ರನ್ಗಳ ಇನಿಂಗ್ಸ್ ಆಡಿದ್ದರು. ಈ ಭರ್ಜರಿ ಇನಿಂಗ್ಸ್ನೊಂದಿಗೆ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಕನಿಷ್ಠ 20 ಇನಿಂಗ್ಸ್ ಆಡಿ ಅತ್ಯುತ್ತಮ ಸರಾಸರಿ ಹೊಂದಿರುವ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನು ಮಿಲಿಂದ್ ಕುಮಾರ್ ತಮ್ಮದಾಗಿಸಿಕೊಂಡರು.

ಇದಕ್ಕೂ ಮುನ್ನ ಏಕದಿನ ಕ್ರಿಕೆಟ್ನಲ್ಲಿ ಅತ್ಯುತ್ತಮ ಅವರೇಜ್ ಹೊಂದಿರುವ ದಾಖಲೆ ವಿರಾಟ್ ಕೊಹ್ಲಿಯ ಹೆಸರಿನಲ್ಲಿತ್ತು. ಕಿಂಗ್ ಕೊಹ್ಲಿ 57.71 ಬ್ಯಾಟಿಂಗ್ ಸರಾಸರಿಯೊಂದಿಗೆ ಏಕದಿನ ಕ್ರಿಕೆಟ್ನಲ್ಲಿ ಪಾರುಪತ್ಯ ಮುಂದುವರೆಸಿದ್ದಾರೆ. ಆದರೀಗ ಮಿಲಿಂದ್ 60 ಕ್ಕಿಂತ ಹೆಚ್ಚಿನ ಸರಾಸರಿಯೊಂದಿಗೆ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ.

ಯುಎಸ್ಎ ಪರ ಈವರೆಗೆ 21 ಏಕದಿನ ಇನಿಂಗ್ಸ್ ಆಡಿರುವ ಮಿಲಿಂದ್ ಕುಮಾರ್ 67.73 ರ ಸರಾಸರಿಯೊಂದಿಗೆ ಒಟ್ಟು 1016 ರನ್ ಕಲೆಹಾಕಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಕನಿಷ್ಠ 20 ಇನಿಂಗ್ಸ್ ಆಡಿ ಅತ್ಯುತ್ತಮ ಅವರೇಜ್ ಹೊಂದಿರುವ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಅಷ್ಟೇ ಅಲ್ಲದೆ ಯುಎಸ್ಎ ಪರ ಏಕದಿನ ಕ್ರಿಕೆಟ್ನಲ್ಲಿ ಅತೀ ಕಡಿಮೆ ಇನಿಂಗ್ಸ್ಗಳಲ್ಲಿ ಸಾವಿರ ರನ್ ಪೂರೈಸಿದ ಬ್ಯಾಟರ್ ಎಂಬ ದಾಖಲೆಯನ್ನು ಸಹ ತಮ್ಮದಾಗಿಸಿಕೊಂಡಿದ್ದಾರೆ. ಮಿಲಿಂದ್ ಕುಮಾರ್ 21 ಇನಿಂಗ್ಸ್ಗಳಲ್ಲಿ 3 ಶತಕ ಹಾಗೂ 7 ಅರ್ಧಶತಕಗಳೊಂದಿಗೆ 1016 ರನ್ ಕಲೆಹಾಕಿ ಈ ಸಾಧನೆ ಮಾಡಿದ್ದಾರೆ.
Published On - 8:30 am, Wed, 5 November 25
