ಭಾರತ ಪ್ರವಾಸಕ್ಕೂ ಮುನ್ನ ಕಾಂಗರೂಗಳಿಗೆ ಆಘಾತ; ತಂಡದ ಇಬ್ಬರ ಸ್ಟಾರ್ ಆಟಗಾರರು ಟೆಸ್ಟ್ ಸರಣಿಗೆ ಅಲಭ್ಯ..!

| Updated By: ಪೃಥ್ವಿಶಂಕರ

Updated on: Dec 03, 2022 | 12:11 PM

Border Gavaskar Trophy: ಬಾರ್ಡರ್ ಗವಾಸ್ಕರ್ ಟ್ರೋಫಿಗಾಗಿ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾ ಫೆಬ್ರವರಿ-ಮಾರ್ಚ್‌ನಲ್ಲಿ ಭಾರತ ಪ್ರವಾಸ ಮಾಡಲಿದೆ. ಟೀಂ ಇಂಡಿಯಾ ಕಳೆದ ವರ್ಷ ಆಸ್ಟ್ರೇಲಿಯಾ ಪ್ರವಾಸ ಮಾಡಿ ತವರಿನಲ್ಲಿಯೇ ಕಾಂಗರೂಗಳಿಗೆ ಸೋಲಿನ ಶಾಕ್ ನೀಡಿತ್ತು.

ಭಾರತ ಪ್ರವಾಸಕ್ಕೂ ಮುನ್ನ ಕಾಂಗರೂಗಳಿಗೆ ಆಘಾತ; ತಂಡದ ಇಬ್ಬರ ಸ್ಟಾರ್ ಆಟಗಾರರು ಟೆಸ್ಟ್ ಸರಣಿಗೆ ಅಲಭ್ಯ..!
mitchell marsh
Follow us on

ಪ್ರಸ್ತುತ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿಯನ್ನು ಆಡುತ್ತಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡ, ಫೆಬ್ರವರಿ-ಮಾರ್ಚ್‌ ತಿಂಗಳಲ್ಲಿ ಬಾರ್ಡರ್ ಗವಾಸ್ಕರ್ ಟ್ರೋಫಿಗಾಗಿ (Border Gavaskar Trophy) ಭಾರತ ಪ್ರವಾಸ ಮಾಡಲಿದೆ. ಈ ಪ್ರವಾಸದಲ್ಲಿ ಕಾಂಗರೂ ಪಡೆ ಟೀಂ ಇಂಡಿಯಾ (Team India) ವಿರುದ್ಧ ಟೆಸ್ಟ್ ಹಾಗೂ ಏಕದಿನ ಸರಣಿಯನ್ನು ಆಡಲಿದೆ. ಆದರೆ ಏಕದಿನ ಸರಣಿಗೂ ಮುನ್ನ ನಡೆಯುವ ಟೆಸ್ಟ್ ಸರಣಿಗೆ ಕಾಂಗರೂ ತಂಡದ ಇಬ್ಬರು ಸ್ಟಾರ್ ಆಟಗಾರರು ಅಲಭ್ಯರಾಗುತ್ತಿರುವುದು ಕಮ್ಮಿನ್ಸ್ ಪಡೆಗೆ ಕೊಂಚ ಹಿನ್ನಡೆಯುಂಟು ಮಾಡಿದೆ. ತಂಡದ ಸ್ಟಾರ್ ಆಲ್​ರೌಂಡರ್​ಗಳಾದ ಮಿಚೆಲ್ ಮಾರ್ಷ್ (Mitchell Marsh) ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ (Glenn Maxwell) ಟೀಂ ಇಂಡಿಯಾ ವಿರುದ್ಧದ ಟೆಸ್ಟ್​ ಸರಣಿಯಿಂದ ಹೊರಗುಳಿಯಲಿದ್ದಾರೆ. ಮಿಚೆಲ್ ಮಾರ್ಷ್​ ಈ ಸಮಯದಲ್ಲಿ ಎಡ ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದು, ಈ ಕಾರಣಕ್ಕಾಗಿ ಅವರು ಭಾರತದ ವಿರುದ್ಧದ ಟೆಸ್ಟ್ ಸರಣಿಯಿಂದ ಹಿಂದೆ ಸರಿದಿದ್ದಾರೆ.

ಮೂರು ತಿಂಗಳು ಕ್ರಿಕೆಟ್‌ನಿಂದ ದೂರ

ಶಸ್ತ್ರ ಚಿಕಿತ್ಸೆಗೆ ಒಳಗಾಗಲಿರುವ ಮಾರ್ಷ್ ಮೂರು ತಿಂಗಳು ಕ್ರಿಕೆಟ್‌ನಿಂದ ದೂರವಿರುವ ಸಾಧ್ಯತೆಯಿದೆ. ಈ ಗಾಯದಿಂದ ಮಾರ್ಷ್ ಸಂಪೂರ್ಣವಾಗಿ ಚೇತರಿಸಿಕೊಳ್ಳುವವರೆಗೆ ಕ್ರಿಕೆಟ್ ಆಸ್ಟ್ರೇಲಿಯಾ ಅವರನ್ನು ಮರಳಿ ತಂಡಕ್ಕೆ ಕರೆತರುವ ಅವಸರದಲ್ಲಿಲ್ಲ. ಗಾಯದಿಂದ ಚೇತರಿಸಿಕೊಳ್ಳಲು ಮಾರ್ಷ್‌ಗೆ ಪೂರ್ಣ ಸಮಯ ನೀಡಲಾಗುವುದು ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿಕೊಂಡಿದೆ. ಈ ಗಾಯದಿಂದ ಬಹುದಿನಗಳಿಂದ ಬಳಲುತ್ತಿರುವ ಮಾರ್ಷ್ ಆಗಸ್ಟ್​ನಲ್ಲಿ ಜಿಂಬಾಬ್ವೆ ವಿರುದ್ಧ ಆಡಿದ ಏಕದಿನ ಸರಣಿಯಲ್ಲೂ ಇದೇ ಗಾಯದಿಂದ ನರಳಿದ್ದರು.

ಇದೀಗ ಮಾರ್ಷ್ ಅಲಭ್ಯತೆ ಆಸ್ಟ್ರೇಲಿಯಾ ತಂಡಕ್ಕೆ ಹಿನ್ನಡೆಯಾಗಿರುವುದಲ್ಲದೆ, ಬಿಗ್ ಬ್ಯಾಷ್ ಲೀಗ್‌ನ ಪರ್ತ್ ಸ್ಕಾರ್ಚರ್ಸ್ ತಂಡಕ್ಕೂ ಆಘಾತ ತಂದೊಡ್ಡಿದೆ. ಈ ಗಾಯದಿಂದಾಗಿ, ಮುಂಬರುವ ಬಿಬಿಎಲ್ ಸೀಸನ್​ನಿಂದಲೂ ಮಾರ್ಷ್ ಹೊರಗುಳಿಯಲಿದ್ದಾರೆ.

ಇದನ್ನೂ ಓದಿ: ವಿಶ್ವಕಪ್​ನಲ್ಲಿ ಭಾರತಕ್ಕೆ ಸೋಲಿನ ಭಯ ಹುಟ್ಟಿಸಿದ್ದ ಆಟಗಾರನಿಗೆ ನಾಯಕನ ಪಟ್ಟಕಟ್ಟಿದ ಬಾಂಗ್ಲಾ..!

ಮ್ಯಾಕ್ಸ್​ವೆಲ್ ಕೂಡ ಔಟ್

ಮಾರ್ಷ್‌ನ ಹೊರತಾಗಿ, ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಸಹ ಈ ಟೆಸ್ಟ್ ಸರಣಿಯಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಈ ಹಿಂದೆ ಗೆಳೆಯನ ಬರ್ತ್​ ಡೇ ಪಾರ್ಟಿಯಲ್ಲಿ ಕಾಲು ಮುರಿದುಕೊಂಡಿದ್ದ ಮ್ಯಾಕ್ಸ್​ವೆಲ್ ಆ ಬಳಿಕ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಸದ್ಯ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಮ್ಯಾಕ್ಸ್​ವೆಲ್ ಈ ಸರಣಿಯಿಂದ ಹೊರಗುಳಿಯಲಿದ್ದಾರೆ.

ಫೆಬ್ರವರಿ-ಮಾರ್ಚ್‌ನಲ್ಲಿ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿ

ಬಾರ್ಡರ್ ಗವಾಸ್ಕರ್ ಟ್ರೋಫಿಗಾಗಿ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾ ಫೆಬ್ರವರಿ-ಮಾರ್ಚ್‌ನಲ್ಲಿ ಭಾರತ ಪ್ರವಾಸ ಮಾಡಲಿದೆ. ಟೀಂ ಇಂಡಿಯಾ ಕಳೆದ ವರ್ಷ ಆಸ್ಟ್ರೇಲಿಯಾ ಪ್ರವಾಸ ಮಾಡಿ ತವರಿನಲ್ಲಿಯೇ ಕಾಂಗರೂಗಳಿಗೆ ಸೋಲಿನ ಶಾಕ್ ನೀಡಿತ್ತು. ಇದಕ್ಕೂ ಮುಂಚೆ ಅಂದರೆ 2018ರಲ್ಲಿ ಭಾರತದಲ್ಲಿ ನಡೆದಿದ್ದ ಈ ಸರಣಿಯಲ್ಲಿ ಟೀಂ ಇಂಡಿಯಾ ಆಸೀಸ್ ಪಡೆಯನ್ನು ಮಣಿಸಿ ಅವರನ್ನು ಬರಿಗೈಯಲ್ಲಿ ವಾಪಸ್ ಕಳುಹಿಸಿತ್ತು. ಈಗ ಅದ್ಭುತ ಫಾರ್ಮ್​ನಲ್ಲಿರುವ ಆಸ್ಟ್ರೇಲಿಯಾದ ತಂಡ ಈ ಎರಡು ಸರಣಿಗಳ ಸೋಲಿಗೆ ಸೇಡು ತೀರಿಸಿಕೊಳ್ಳುವ ಗುರಿಯೊಂದಿಗೆ ಭಾರತಕ್ಕೆ ಕಾಲಿಡಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:09 pm, Sat, 3 December 22