ಆಸೀಸ್ ದಾಂಡಿಗರ ಭರ್ಜರಿ ಬ್ಯಾಟಿಂಗ್: ಮೊದಲ ದಿನವೇ 300 ಕ್ಕೂ ಹೆಚ್ಚು ರನ್ ಕಲೆಹಾಕಿದ ಆಸ್ಟ್ರೇಲಿಯಾ

|

Updated on: Dec 26, 2024 | 2:06 PM

Australia vs India Test: ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಮ್ಯಾಚ್​ನಲ್ಲಿ ಟೀಮ್ ಇಂಡಿಯಾ 295 ರನ್​​ಗಳ ಭರ್ಜರಿ ಜಯ ಸಾಧಿಸಿತ್ತು. ಇನ್ನು ದ್ವಿತೀಯ ಪಂದ್ಯದಲ್ಲಿ ಆಸ್ಟ್ರೇಲಿಯಾ 10 ವಿಕೆಟ್​ಗಳ ಗೆಲುವು ದಾಖಲಿಸಿದೆ. ಆದರೆ ಮೂರನೇ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿತ್ತು. ಇದೀಗ ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿವೆ.

ಆಸೀಸ್ ದಾಂಡಿಗರ ಭರ್ಜರಿ ಬ್ಯಾಟಿಂಗ್: ಮೊದಲ ದಿನವೇ 300 ಕ್ಕೂ ಹೆಚ್ಚು ರನ್ ಕಲೆಹಾಕಿದ ಆಸ್ಟ್ರೇಲಿಯಾ
IND vs AUS
Follow us on

ಮೆಲ್ಬೋರ್ನ್​ನಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 4ನೇ ಪಂದ್ಯದ ಮೊದಲ ದಿನದಾಟ ಮುಗಿದಿದೆ. ಎಂಸಿಜಿ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡಕ್ಕೆ ಉಸ್ಮಾನ್ ಖ್ವಾಜಾ ಹಾಗೂ ಸ್ಯಾಮ್ ಕೊನ್​ಸ್ಟಾಸ್ ಉತ್ತಮ ಆರಂಭ ಒದಗಿಸಿದ್ದರು. ಮೊದಲ ವಿಕೆಟ್​ಗೆ 89 ರನ್​ಗಳ ಜೊತೆಯಾಟವಾಡಿದ ಬಳಿಕ ಕೊನ್​ಸ್ಟಾಸ್ ವಿಕೆಟ್ ಒಪ್ಪಿಸಿದರು. ಆದರೆ ಇದಕ್ಕೂ ಮುನ್ನ ಯುವ ದಾಂಡಿಗ ಕೇವಲ 65 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 6 ಫೋರ್​​ಗಳೊಂದಿಗೆ 60 ರನ್​ ಚಚ್ಚಿದ್ದರು.

ಇದಾದ ಬಳಿಕ ಜೊತೆಗೂಡಿದ ಉಸ್ಮಾನ್ ಖ್ವಾಜಾ ಹಾಗೂ ಮಾರ್ನಸ್ ಲಾಬುಶೇನ್ ದ್ವಿತೀಯ ವಿಕೆಟ್​ಗಳ ಅರ್ಧಶತಕಗಳ ಜೊತೆಯಾಟವಾಡಿದರು. ಈ ಹಂತದಲ್ಲಿ 121 ಎಸೆತಗಳಲ್ಲಿ 57 ರನ್ ಬಾರಿಸಿದ್ದ ಖ್ವಾಜಾ ಬುಮ್ರಾ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿ ಔಟಾದರು.

ಮತ್ತೊಂದೆಡೆ ಉತ್ತಮ ಬ್ಯಾಟಿಂಗ್ ಮುಂದುವರೆಸಿದ ಮಾರ್ನಸ್ ಲಾಬುಶೇನ್ 145 ಎಸೆತಗಳಲ್ಲಿ 7 ಫೋರ್​ಗಳೊಂದಿಗೆ 72 ರನ್​ ಸಿಡಿಸಿದರು. ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸ್ಟೀವ್ ಸ್ಮಿತ್ ಕೂಡ ಹಾಫ್ ಸೆಂಚುರಿ ಸಿಡಿಸಿದರು.

ಆದರೆ ಮಾರ್ನಸ್ ಲಾಬುಶೇನ್ (72) ಔಟಾದ ಬಳಿಕ ಆಗಮಿಸಿದ ಟ್ರಾವಿಸ್ ಹೆಡ್ (0) ಬುಮ್ರಾ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಇದರ ಬೆನ್ನಲ್ಲೇ ಮಿಚೆಲ್ ಮಾರ್ಷ್ (4) ಕೂಡ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

ಇದಾಗ್ಯೂ ಜವಾಬ್ದಾರಿಯುತ ಬ್ಯಾಟಿಂಗ್ ಮುಂದುವರೆಸಿದ ಸ್ಟೀವ್ ಸ್ಮಿತ್ ವಿಕೆಟ್ ಕೀಪರ್ ಬ್ಯಾಟರ್ ಅಲೆಕ್ಸ್ ಕ್ಯಾರಿ ಜೊತೆಗೂಡಿ ಇನಿಂಗ್ಟ್ ಕಟ್ಟಿದರು. ಪರಿಣಾಮ 6ನೇ ವಿಕೆಟ್​ಗೆ 53 ರನ್​ಗಳ ಜೊತೆಯಾಟ ಮೂಡಿಬಂತು. ಈ ಹಂತದಲ್ಲಿ ಆಕಾಶ್ ದೀಪ್ ಎಸೆದ ಎಸೆತದಲ್ಲಿ ಅಲೆಕ್ಸ್ ಕ್ಯಾರಿ (31) ಔಟಾದರು.

ಆದರೆ ಮತ್ತೊಂದೆಡೆ ಕ್ರೀಸ್ ಕಚ್ಚಿ ನಿಂತ ಸ್ಟೀವ್ ಸ್ಮಿತ್ 68 ರನ್​ಗಳೊಂದಿಗೆ ಅಜೇಯರಾಗಿ ಉಳಿದರು.  ಈ ಮೂಲಕ ಬಾಕ್ಸಿಂಗ್ ಡೇ ಟೆಸ್ಟ್​ನ ಮೊದಲ ದಿನದಾಟದಲ್ಲಿ ಆಸ್ಟ್ರೇಲಿಯಾ ತಂಡವು 6 ವಿಕೆಟ್ ಕಳೆದುಕೊಂಡು 311 ರನ್ ಕಲೆಹಾಕಿದೆ.

ಟೀಮ್ ಇಂಡಿಯಾ ಪರ ಜಸ್​ಪ್ರೀತ್ ಬುಮ್ರಾ 3 ವಿಕೆಟ್ ಪಡೆದರೆ, ಆಕಾಶ್ ದೀಪ್, ರವೀಂದ್ರ ಜಡೇಜಾ ಹಾಗೂ ವಾಷಿಂಗ್ಟನ್ ಸುಂದರ್ ತಲಾ ಒಂದು ವಿಕೆಟ್ ಕಬಳಿಸಿದರು.

ಆಸ್ಟ್ರೇಲಿಯಾ ಪ್ಲೇಯಿಂಗ್ 11: ಉಸ್ಮಾನ್ ಖ್ವಾಜಾ , ಸ್ಯಾಮ್ ಕೊನ್​ಸ್ಟಾಸ್ , ಮಾರ್ನಸ್ ಲಾಬುಶೇನ್, ಸ್ಟೀವ್ ಸ್ಮಿತ್ , ಟ್ರಾವಿಸ್ ಹೆಡ್ , ಮಿಚೆಲ್ ಮಾರ್ಷ್ , ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್) , ಪ್ಯಾಟ್ ಕಮ್ಮಿನ್ಸ್ (ನಾಯಕ) , ಮಿಚೆಲ್ ಸ್ಟಾರ್ಕ್ , ನಾಥನ್ ಲಿಯಾನ್ , ಸ್ಕಾಟ್ ಬೋಲ್ಯಾಂಡ್.

ಇದನ್ನೂ ಓದಿ: Virat Kohli: ಕಿರಿಕ್ ಕೊಹ್ಲಿಗೆ ಬಿಸಿ ಮುಟ್ಟಿಸಲು ಮುಂದಾದ ಐಸಿಸಿ

ಭಾರತ ಪ್ಲೇಯಿಂಗ್ 11: ಯಶಸ್ವಿ ಜೈಸ್ವಾಲ್ , ಕೆಎಲ್ ರಾಹುಲ್ , ರೋಹಿತ್ ಶರ್ಮಾ (ನಾಯಕ) , ವಿರಾಟ್ ಕೊಹ್ಲಿ , ರಿಷಬ್ ಪಂತ್ (ವಿಕೆಟ್ ಕೀಪರ್) , ರವೀಂದ್ರ ಜಡೇಜಾ , ನಿತೀಶ್ ಕುಮಾರ್ ರೆಡ್ಡಿ , ವಾಷಿಂಗ್ಟನ್ ಸುಂದರ್ , ಜಸ್​ಪ್ರೀತ್ ಬುಮ್ರಾ , ಮೊಹಮ್ಮದ್ ಸಿರಾಜ್ , ಆಕಾಶ್ ದೀಪ್.

 

Published On - 12:36 pm, Thu, 26 December 24