ಆಸ್ಟ್ರೇಲಿಯಾ ವಿರುದ್ಧ ಗೆದ್ದು ಬೀಗಿದ ಸೌತ್ ಆಫ್ರಿಕಾ

| Updated By: ಝಾಹಿರ್ ಯೂಸುಫ್

Updated on: Oct 12, 2023 | 9:54 PM

Australia vs South Africa: ಮಧ್ಯಮ ಕ್ರಮಾಂಕದಲ್ಲಿ ಮಾರ್ನಸ್ ಲಾಬುಶೇನ್ 46 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 140 ರ ಗಡಿದಾಟಿಸಿದರು. ಈ ಹಂತದಲ್ಲಿ ದಾಳಿಗಿಳಿದ ಸ್ಪಿನ್ನರ್ ಕೇಶವ್ ಮಹಾರಾಜ್ ಎರಡು ವಿಕೆಟ್ ಪಡೆಯುವ ಮೂಲಕ ಮಿಂಚಿದರು.

ಆಸ್ಟ್ರೇಲಿಯಾ ವಿರುದ್ಧ ಗೆದ್ದು ಬೀಗಿದ ಸೌತ್ ಆಫ್ರಿಕಾ
Australia vs South Africa
Follow us on

ಏಕದಿನ ವಿಶ್ವಕಪ್​ನ 10ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೌತ್ ಆಫ್ರಿಕಾ ತಂಡ ಭರ್ಜರಿ ಜಯ ಸಾಧಿಸಿದೆ. ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ಪರ ಟೆಂಬಾ ಬವುಮಾ ಹಾಗೂ ಕ್ವಿಂಟನ್ ಡಿಕಾಕ್ ಇನಿಂಗ್ಸ್​ ಆರಂಭಿಸಿದರು.

ಮೊದಲ ವಿಕೆಟ್​ಗೆ 108 ರನ್​ಗಳ ಜೊತೆಯಾಟವಾಡಿದ ಟೆಂಬಾ ಬವುಮಾ (35) ವಿಕೆಟ್ ಒಪ್ಪಿಸಿದರು. ಮತ್ತೊಂದೆಡೆ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಕ್ವಿಂಟನ್ ಡಿಕಾಕ್ 106 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 8 ಫೋರ್​ಗಳೊಂದಿಗೆ 109 ರನ್ ಬಾರಿಸಿ ಅಬ್ಬರಿಸಿದರು.

ಇನ್ನು ಐಡೆನ್ ಮಾರ್ಕ್ರಾಮ್ 44 ಎಸೆತಗಳಲ್ಲಿ 56 ರನ್​ಗಳ ಕೊಡುಗೆ ನೀಡಿದರು. ಈ ಮೂಲಕ ಸೌತ್ ಆಫ್ರಿಕಾ ತಂಡವು 50 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 311 ರನ್ ಕಲೆಹಾಕಿತು.

312 ರನ್​ಗಳ ಕಠಿಣ ಗುರಿ ಪಡೆದ ಆಸ್ಟ್ರೇಲಿಯಾ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಸೌತ್ ಆಫ್ರಿಕಾ ಬೌಲರ್​ಗಳು ಯಶಸ್ವಿಯಾದರು. ಕರಾರುವಾಕ್ ದಾಳಿ ಸಂಘಟಿಸಿದ ಸೌತ್ ಆಫ್ರಿಕಾ ಬೌಲರ್​ ಆಸೀಸ್ ಪಡೆಗೆ ಶಾಕ್ ಮೇಲೆ ಶಾಕ್ ನೀಡಿದರು. ಪರಿಣಾಮ 65 ರನ್​ಗಳಿಸುವಷ್ಟರಲ್ಲಿ ಅಗ್ರ ಕ್ರಮಾಂಕದ ಐವರು ಬ್ಯಾಟರ್​ಗಳು ಪೆವಿಲಿಯನ್ ಸೇರಿದ್ದರು.

ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಮಾರ್ನಸ್ ಲಾಬುಶೇನ್ 46 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 140 ರ ಗಡಿದಾಟಿಸಿದರು. ಈ ಹಂತದಲ್ಲಿ ದಾಳಿಗಿಳಿದ ಸ್ಪಿನ್ನರ್ ಕೇಶವ್ ಮಹಾರಾಜ್ ಎರಡು ವಿಕೆಟ್ ಪಡೆಯುವ ಮೂಲಕ ಮಿಂಚಿದರು.

ಇನ್ನು ಅಂತಿಮ ಎರಡು ವಿಕೆಟ್​ಗಳನ್ನು ತಬ್ರೇಝ್ ಶಂಸಿ ಉರುಳಿಸಿದರು. ಇದರೊಂದಿಗೆ ಆಸ್ಟ್ರೇಲಿಯಾ ತಂಡವು 40.5 ಓವರ್​ಗಳಿಗೆ 177 ರನ್​ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ಸೌತ್ ಆಫ್ರಿಕಾ ತಂಡವು 134 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಇತ್ತ ಆಸ್ಟ್ರೇಲಿಯಾ ತಂಡವು ಸತತ 2ನೇ ಪಂದ್ಯದಲ್ಲೂ ಸೋತಿದೆ. ಇದಕ್ಕೂ ಮುನ್ನ ಟೀಮ್ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ಹೀನಾಯವಾಗಿ ಸೋಲನುಭವಿಸಿದ್ದರು. ಇದೀಗ ಸೌತ್ ಆಫ್ರಿಕಾ ವಿರುದ್ಧ ಪರಾಜಯಗೊಂಡಿದೆ.

ಆಸ್ಟ್ರೇಲಿಯಾ (ಪ್ಲೇಯಿಂಗ್ XI): ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್, ಮಾರ್ನಸ್ ಲಾಬುಶೇನ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ಆ್ಯಂಡ ಝಂಪಾ, ಜೋಶ್ ಹ್ಯಾಝಲ್‌ವುಡ್.

ಇದನ್ನೂ ಓದಿ: ಹಳೆಯ ದಾಖಲೆಗಳು ಉಡೀಸ್: ಹೊಸ ವಿಶ್ವ ದಾಖಲೆ ಬರೆದ ರೋಹಿತ್ ಶರ್ಮಾ

ಸೌತ್ ಆಫ್ರಿಕಾ (ಪ್ಲೇಯಿಂಗ್ XI): ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಟೆಂಬಾ ಬವುಮಾ (ನಾಯಕ), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಯಾನ್ಸೆನ್, ಕೇಶವ್ ಮಹಾರಾಜ್, ಲುಂಗಿ ಎನ್ಗಿಡಿ, ಕಗಿಸೊ ರಬಾಡ, ತಬ್ರೇಝ್ ಶಂಸಿ.