
ಕ್ಯಾನ್ಬೆರಾದ ಮನುಕಾ ಓವಲ್ ಮೈದಾನದಲ್ಲಿ ನಡೆದ ವೆಸ್ಟ್ ಇಂಡೀಸ್ (West Indies) ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ (Australia) ತಂಡ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್ (Steve Smith) ಬೌಲಿಂಗ್ ಆಯ್ದುಕೊಂಡಿದ್ದರು. ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಬೌಲಿಂಗ್ ದಾಳಿ ಸಂಘಟಿಸಿದ ಆಸೀಸ್ ಬೌಲರ್ಗಳು ವೆಸ್ಟ್ ಇಂಡೀಸ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಯಶಸ್ವಿಯಾಗಿದ್ದರು. ಮೊದಲ 10 ಓವರ್ಗಳಲ್ಲಿ ಕೇವಲ 38 ರನ್ ನೀಡಿದ ಆಸೀಸ್ ವೇಗಿಗಳು 2 ವಿಕೆಟ್ ಕಬಳಿಸಿದ್ದರು.
ಇದಾದ ಬಳಿಕ ವಿಂಡೀಸ್ ಬ್ಯಾಟರ್ಗಳು ಆಸೀಸ್ ದಾಳಿಯನ್ನು ಎದುರಿಸಲು ತಿಣುಕಾಡಿದರು. ಪರಿಣಾಮ ನಾಯಕ ಶಾಯ್ ಹೋಪ್ 4 ರನ್ಗಳಿಸಿ ಔಟಾದರು. ಇದರ ಬೆನ್ನಲ್ಲೇ ಟೆಡ್ಡಿ ಬಿಷಪ್ (0), ರೊಸ್ಟನ್ ಚೇಸ್ (12), ರೊಮೊರಿಯೊ ಶೆಫರ್ಡ್ (1), ಮ್ಯಾಥ್ಯೂ ಫೋರ್ಡ್ (0) ಪೆವಿಲಿಯನ್ ಪರೇಡ್ ನಡೆಸಿದರು.
ಇದಾಗ್ಯೂ ಒಂದೆಡೆ ಕ್ರೀಸ್ ಕಚ್ಚಿ ನಿಂತ ಅಲಿಕ್ ಅಥನಾಝ್ 60 ಎಸೆತಗಳನ್ನು ಎದುರಿಸಿ 32 ರನ್ ಕಲೆಹಾಕಿದರು. ಆದರೆ ಆ್ಯಡಂ ಝಂಪಾ ಎಸೆತವನ್ನು ಸರಿಯಾಗಿ ಗುರುತಿಸುವಲ್ಲಿ ಎಡವಿದ ಅಥನಾಝ್ ಕೂಡ ವಿಕೆಟ್ ಒಪ್ಪಿಸಿದರು.
ಇನ್ನು ಅಲ್ಝಾರಿ ಜೋಸೆಫ್ (6) ಹಾಗೂ ಗುಡಾಕೇಶ್ ಮೋಟಿ (0) ವಿಕೆಟ್ ಕೈಚೆಲ್ಲುವುದರೊಂದಿಗೆ ವೆಸ್ಟ್ ಇಂಡೀಸ್ ತಂಡ 24.1 ಓವರ್ಗಳಲ್ಲಿ ಕೇವಲ 86 ರನ್ಗಳಿಗೆ ಆಲೌಟ್ ಆಯಿತು. ಆಸ್ಟ್ರೇಲಿಯಾ ಪರ ಕ್ಸೇವಿಯರ್ ಬಾರ್ಟ್ಲೆಟ್ 7.1 ಓವರ್ಗಳಲ್ಲಿ 21 ರನ್ ನೀಡಿ 4 ವಿಕೆಟ್ ಪಡೆದರೆ, ಆ್ಯಡಂ ಝಂಪಾ ಹಾಗೂ ಲಾನ್ಸ್ ಮೋರಿಸ್ ತಲಾ 2 ವಿಕೆಟ್ ಕಬಳಿಸಿ ಮಿಂಚಿದರು.
50 ಓವರ್ಗಳಲ್ಲಿ 87 ರನ್ಗಳ ಸುಲಭ ಗುರಿ ಪಡೆದ ಆಸ್ಟ್ರೇಲಿಯಾ ಪರ ಆರಂಭಿಕ ಆಟಗಾರ ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್ 41 ರನ್ ಬಾರಿಸಿದರೆ, ಜೋಶ್ ಇಂಗ್ಲಿಸ್ ಅಜೇಯ 35 ರನ್ ಸಿಡಿಸಿದರು. ಈ ಮೂಲಕ 6.5 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 87 ರನ್ ಬಾರಿಸಿ ಆಸ್ಟ್ರೇಲಿಯಾ ತಂಡವು 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಈ ಸರಣಿಯನ್ನು ಆಸ್ಟ್ರೇಲಿಯಾ 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ.
ಆಸ್ಟ್ರೇಲಿಯಾ ಪ್ಲೇಯಿಂಗ್ 11: ಜೇಕ್ ಫ್ರೇಸರ್-ಮೆಕ್‌ಗುರ್ಕ್ , ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್) , ಆರನ್ ಹಾರ್ಡಿ , ಸ್ಟೀವ್ ಸ್ಮಿತ್ (ನಾಯಕ) , ಕ್ಯಾಮರೋನ್ ಗ್ರೀನ್ , ಮಾರ್ನಸ್ ಲಾಬುಶೇನ್, ಶಾನ್ ಅಬಾಟ್ , ವಿಲ್ ಸದರ್ಲ್ಯಾಂಡ್ , ಕ್ಸೇವಿಯರ್ ಬಾರ್ಟ್ಲೆಟ್ , ಆ್ಯಡಂ ಝಂಪಾ , ಲ್ಯಾನ್ಸ್ ಮೋರಿಸ್.
ಇದನ್ನೂ ಓದಿ: Kane Williamson: ಬ್ಯಾಕ್ ಟು ಬ್ಯಾಕ್ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೇನ್ ವಿಲಿಯಮ್ಸನ್
ವೆಸ್ಟ್ ಇಂಡೀಸ್ ಪ್ಲೇಯಿಂಗ್ 11: ಅಲಿಕ್ ಅಥಾನಾಝ್ , ಟೆಡ್ಡಿ ಬಿಷಪ್ , ಕ್ಜೋರ್ನ್ ಒಟ್ಟ್ಲಿ , ಶಾಯ್ ಹೋಪ್ (ನಾಯಕ) , ಕೀಸಿ ಕಾರ್ಟಿ , ರೋಸ್ಟನ್ ಚೇಸ್ , ರೊಮಾರಿಯೋ ಶೆಫರ್ಡ್ , ಮ್ಯಾಥ್ಯೂ ಫೋರ್ಡ್ , ಅಲ್ಝಾರಿ ಜೋಸೆಫ್ , ಗುಡಾಕೇಶ್ ಮೋಟಿ , ಒಶಾನೆ ಥಾಮಸ್.