ಐಸಿಸಿ ಏಕದಿನ ವಿಶ್ವಕಪ್ (ODI World Cup) ರೋಚಕತೆ ಸೃಷ್ಟಿಸುತ್ತಿದೆ. ಇಂದು ನಡೆಯಲಿರುವ ಹತ್ತನೇ ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾ ಹಾಗೂ ಟೆಂಬಾ ಬವುಮಾ ನೇತೃತ್ವದ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿ ಆಗುತ್ತಿದೆ. ಲಖನೌದ ಭಾರತ್ ರತ್ನ ಶ್ರೀ ಅಟನ್ ಬಿಹಾರಿ ವಾಜಪೇಯಿ ಏಕಾನ ಕ್ರಿಕೆಟ್ ಸ್ಟೇಡಿಯಂ ಈ ಹೈವೋಲ್ಟೇಜ್ ಕದನಕ್ಕೆ ಸಾಕ್ಷಿಯಾಗಲಿದೆ. ಭಾರತೀಯ ಕಾಲಮಾನದ ಪ್ರಕಾರ ಪಂದ್ಯ ಮಧ್ಯಾಹ್ನ 2 ಗಂಟೆಗೆ ಶುರುವಾಗಲಿದೆ.
ಆಸ್ಟ್ರೇಲಿಯಾ ತಂಡದಲ್ಲಿ ಸ್ಟಾರ್ ಅನುಭವಿ ಆಟಗಾರರ ದಂಡೇ ಇದ್ದರೂ ಲಕ್ ಸಿಗುತ್ತಿಲ್ಲ. ಭಾರತ ವಿರುದ್ಧದ ಸರಣಿ ಸೋಲಿನ ಬಳಿಕ ವಿಶ್ವಕಪ್ನ ಮೊದಲ ಪಂದ್ಯದಲ್ಲೂ ಭಾರತ ವಿರುದ್ಧದ ಸೋತಿದೆ. ಗೆಲುವಿನ ಲಯಕ್ಕೆ ಮರಳಬೇಕಾಗಿರುವುದು ಅನಿವಾರ್ಯ. ಮಿಚೆಲ್ ಮಾರ್ಶ್ ಅವರು ವಾರ್ನರ್ ಜೊತೆ ಉತ್ತಮ ಆರಂಭ ಒದಗಿಸಬೇಕಿದೆ. ಸ್ಟೀವ್ ಸ್ಮಿತ್, ಲಾಬುಶೇನ್ ಹಾಗೂ ಮ್ಯಾಕ್ಸ್‌ವೆಲ್ ಮಧ್ಯಮ ಕ್ರಮಾಂಕದಲ್ಲಿ ಆಸರೆಯಾಗಬೇಕು. ಅಲೆಕ್ಸ್ ಕ್ಯಾರಿ ಕೂಡ ನೆರವಾಗಬೇಕು. ಸ್ಟೋಯಿನಿಸ್ ಲಭ್ಯತೆ ಬಗ್ಗೆ ಮಾಹಿತಿಯಿಲ್ಲ. ಬೌಲಿಂಗ್ನಲ್ಲಿ ಸ್ಟಾರ್ಕ್, ಕಮ್ಮಿನ್ಸ್, ಹ್ಯಾಜಲ್‌ವುಡ್, ಝಂಪಾ ಕೂಡ ಮಿಂಚಬೇಕಿದೆ.
ಶನಿವಾರ ಶ್ರೀಲಂಕಾ ವಿರುದ್ಧ ಬರೋಬ್ಬರಿ 428 ರ ಬೃಹತ್ ರನ್ ಕಲೆಹಾಕಿದ ಹರಿಣಗಳು ಭರ್ಜರಿ ಫಾರ್ಮ್ನಲ್ಲಿದ್ದಾರೆ. ಈ ಪಂದ್ಯದಲ್ಲಿ ಮೂರು ಶತಕಗಳು ಬಂದಿದ್ದವು. ಕ್ವಿಂಟನ್ ಡಿ ಕಾಕ್, ರಾಸ್ಸಿ ವ್ಯಾನ್ ಡೆರ್ ಡುಸೆನ್ ಮತ್ತು ಐಡೆನ್ ಮಾರ್ಕ್ರಾಮ್ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದರು. ಇದು ವಿಶ್ವಕಪ್ ಇತಿಹಾಸದಲ್ಲಿ ದಾಖಲೆಯಾಗಿತ್ತು. ನಾಯಕ ಬವುಮಾ ಫಾರ್ಮ್ಗೆ ಮರಳಬೇಕು. ಬೌಲಿಂಗ್ನಲ್ಲಿ ವಿಕೆಟ್ ಟೇಕರ್ಗಳಿದ್ದರೂ ರನ್ಗೆ ಕಡಿವಾಣ ಹಾಕಬೇಕು. ಎನ್ಗಿಡಿ, ರಬಾಡ, ಮಹರಾಜ್, ಜಾನ್ಸೆನ್ರಂತಹ ಅಪಾಯಕಾರಿ ಬೌಲರ್ಗಳಿದ್ದಾರೆ.
ದಾಖಲೆಯ ಶತಕ ಸಿಡಿಸಿದ ರೋಹಿತ್; ವಿಶ್ವಕಪ್ನಲ್ಲಿ ಗೆಲುವಿನ ನಾಗಾಲೋಟ ಮುಂದುವರಿದ ಭಾರತ
ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಉಭಯ ತಂಡಗಳು 6 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಆಸ್ಟ್ರೇಲಿಯಾವು ದಕ್ಷಿಣ ಆಫ್ರಿಕಾದ ವಿರುದ್ಧ 3-2 ಗೆಲುವು/ಸೋಲಿನ ದಾಖಲೆಯನ್ನು ಹೊಂದಿದೆ, ಒಂದು ಪಂದ್ಯ ಟೈನಲ್ಲಿ ಕೊನೆಗೊಂಡಿತ್ತು. ಭಾರತದಲ್ಲಿ ಎರಡೂ ತಂಡ ಮೂರು ಬಾರಿ ಮುಖಾಮುಖಿಯಾಗಿದ್ದವು. ಇದರಲ್ಲಿ ಮೂರು ಪಂದ್ಯವನ್ನೂ ಆಫ್ರಿಕಾ ಗೆದ್ದಿದೆ.
ಏಕಾನ ಕ್ರಿಕೆಟ್ ಸ್ಟೇಡಿಯಂ ಬೌಲರ್‌ಗಳಿಗೆ, ವಿಶೇಷವಾಗಿ ಸ್ಪಿನ್ನರ್‌ಗಳಿಗೆ ಹೆಚ್ಚು ಅನುಕೂಲಕರವಾಗಿದೆ. ನಿಧಾನಗತಿ ಪಿಚ್ ಆಗಿರುವುದರಿಂದ ಬ್ಯಾಟರ್‌ಗಳು ಪರದಾಡುವುದು ಖಚಿತ. ಪಂದ್ಯವು ಮುಂದುವರೆದಂತೆ, ವೇಗಿಗಳಿಗೆ ಪ್ರಯೋಜನವನ್ನು ಆಗುತ್ತದೆ. ಮೈದಾನದ ಗಾತ್ರವು ಚಿಕ್ಕದಾಗಿರುವುದರಿಂದ ದೊಡ್ಡ ಸ್ಕೋರ್ ಆಗಬಹುದು. ಇಲ್ಲಿ ಒಟ್ಟು ನಾಲ್ಕು ಏಕದಿನ ಪಂದ್ಯಗಳು ನಡೆದಿವೆ. ಈ ಪಂದ್ಯಗಳಲ್ಲಿ, ಮೊದಲ ಇನ್ನಿಂಗ್ಸ್‌ನ ಸರಾಸರಿ ಸ್ಕೋರ್ 220 ಆಗಿದೆ, ತಂಡವು ಮೊದಲ ಮತ್ತು ಎರಡನೇ ಬ್ಯಾಟಿಂಗ್‌ನೊಂದಿಗೆ ಪಂದ್ಯಗಳನ್ನು 2-2 ರಿಂದ ಸಮಬಲ ಸಾಧಿಸಿದೆ.
ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮ್ಮಿನ್ಸ್ (ನಾಯಕ), ಸ್ಟೀವ್ ಸ್ಮಿತ್, ಅಲೆಕ್ಸ್ ಕ್ಯಾರಿ, ಜೋಶ್ ಇಂಗ್ಲಿಸ್, ಸೀನ್ ಅಬಾಟ್, ಕ್ಯಾಮೆರಾನ್ ಗ್ರೀನ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಮಾರ್ನಸ್ ಲ್ಯಾಬುಸ್‌ಚಾಗ್ನೆ, ಮಿಚ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಡೇವಿಡ್ ವಾರ್ನರ್, ಆಡಮ್ ಝಂಪಾ, ಮಿಚೆಲ್ ಸ್ಟಾರ್ಕ್.
ದಕ್ಷಿಣ ಆಫ್ರಿಕಾ ತಂಡ: ಕ್ವಿಂಟನ್ ಡಿ ಕಾಕ್, ಟೆಂಬಾ ಬವುಮಾ (ನಾಯಕ), ರಾಸ್ಸಿ ವ್ಯಾನ್ ಡೆರ್ ಡುಸೆನ್, ಐಡೆನ್ ಮಾರ್ಕ್ರಾಮ್, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಜಾನ್ಸೆನ್, ಜೆರಾಲ್ಡ್ ಕೊಯೆಟ್ಜಿ, ಕೇಶವ್ ಮಹಾರಾಜ್, ಲುಂಗಿ ಎನ್ಗಿಡಿ, ಕಗಿಸೊ ರಬಾಡ, ಲಿಜಾಡ್ ವಿಲಿಯಮ್ಸ್ ಹೆಂಡ್ರಿಕ್ಸ್, ಆಂಡಿಲೆ ಫೆಹ್ಲುಕ್ವಾಯೊ, ತಬ್ರೈಜ್ ಶಮ್ಸಿ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:14 am, Thu, 12 October 23