- Kannada News Photo gallery Cricket photos IND vs AFG India defeated Afghanistan and broke many records in world cup 2023
IND vs AFG: ಅಫ್ಘಾನಿಸ್ತಾನವನ್ನು ಸೋಲಿಸಿ ಅನೇಕ ದಾಖಲೆಗಳನ್ನು ಮುರಿದ ಭಾರತ..!
India vs Afghanistan, ICC World Cup 2023: ಆತಿಥೇಯ ಭಾರತ ಐಸಿಸಿ ವಿಶ್ವಕಪ್‌ನಲ್ಲಿ ಸತತ ಎರಡನೇ ಗೆಲುವನ್ನು ದಾಖಲಿಸಿದೆ. ದೆಹಲಿಯಲ್ಲಿ ನಡೆದ ತನ್ನ ಎರಡನೇ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು ಹೀನಾಯವಾಗಿ ಸೋಲಿಸಿದ ರೋಹಿತ್ ಪಡೆ ಹಲವು ದಾಖಲೆಗಳನ್ನು ಮುರಿದಿದೆ.
Updated on: Oct 12, 2023 | 6:13 AM

ಆತಿಥೇಯ ಭಾರತ ಐಸಿಸಿ ವಿಶ್ವಕಪ್‌ನಲ್ಲಿ ಸತತ ಎರಡನೇ ಗೆಲುವನ್ನು ದಾಖಲಿಸಿದೆ. ದೆಹಲಿಯಲ್ಲಿ ನಡೆದ ತನ್ನ ಎರಡನೇ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು ಹೀನಾಯವಾಗಿ ಸೋಲಿಸಿದ ರೋಹಿತ್ ಪಡೆ ಹಲವು ದಾಖಲೆಗಳನ್ನು ಮುರಿದಿದೆ.

ಈ ಪಂದ್ಯದಲ್ಲಿ ಅಫ್ಘಾನಿಸ್ತಾನ ನೀಡಿದ 273 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ, ವಿಶ್ವಕಪ್‌ನಲ್ಲಿ 250 ರನ್‌ಗಳಿಗಿಂತ ಅಧಿಕ ಗುರಿಯನ್ನು ಹೆಚ್ಚು ರನ್ ರೇಟ್ ಮೂಲಕ ಗೆದ್ದ ತಂಡ ಎಂಬ ದಾಖಲೆ ಬರೆದಿದೆ. ಈ ಪಂದ್ಯದಲ್ಲಿ ಭಾರತ 7.8 ರನ್ ರೇಟ್‌ನಲ್ಲಿ 273 ರನ್‌ಗಳ ಗುರಿಯನ್ನು ಸಾಧಿಸಿ ಈ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.

ಭಾರತಕ್ಕೂ ಮುನ್ನ ಈ ದಾಖಲೆಯನ್ನು ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ನಡೆದ ವಿಶ್ವಕಪ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಮಾಡಿತ್ತು. ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ್ದ 283 ರನ್‌ಗಳ ಗುರಿಯನ್ನು ನ್ಯೂಜಿಲೆಂಡ್ 7.78 ರನ್ ರೇಟ್‌ನಲ್ಲಿ ಸಾಧಿಸಿತ್ತು.

ಇದಲ್ಲದೇ ವಿಶ್ವಕಪ್‌ನಲ್ಲಿ ಭಾರತ ಗುರಿ ಬೆನ್ನಟ್ಟಿದ ನಾಲ್ಕನೇ ಗರಿಷ್ಠ ಸ್ಕೋರ್ ಇದಾಗಿದೆ. ಈ ಹಿಂದೆ ಆಕ್ಲೆಂಡ್‌ನಲ್ಲಿ ನಡೆದ 2015 ರ ವಿಶ್ವಕಪ್‌ನಲ್ಲಿ ಜಿಂಬಾಬ್ವೆ ವಿರುದ್ಧ ಭಾರತವು 288 ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದು, ಇದುವರೆಗಿನ ದಾಖಲೆಯಾಗಿದೆ.

ಅದೇ ಸಮಯದಲ್ಲಿ, ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಭಾರತಕ್ಕೆ ಇದು ಐತಿಹಾಸಿಕ ವಿಜಯವಾಗಿದೆ. ಈ ಕ್ರೀಡಾಂಗಣದಲ್ಲಿ ಭಾರತ 273 ರನ್‌ಗಳ ಗುರಿಯನ್ನು ಸಾಧಿಸಿದ್ದು ಇದು ಎರಡನೇ ಬಾರಿಯಾಗಿದೆ. ಇದಕ್ಕೂ ಮುನ್ನ 1982ರ ವಿಶ್ವಕಪ್‌ನಲ್ಲಿ ಭಾರತ, ಶ್ರೀಲಂಕಾ ನೀಡಿದ್ದ 278 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಸಾಧಿಸಿತ್ತು.

ಇದೆಲ್ಲದರ ನಡುವೆ ಅಫ್ಘಾನ ವಿರುದ್ಧ ಶತಕ ಸಿಡಿಸಿದ ರೋಹಿತ್ ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಶತಕಗಳನ್ನು ಸಿಡಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡರು. ರೋಹಿತ್ ಮೂರು ವಿಶ್ವಕಪ್‌ಗಳಲ್ಲಿ ಕೇವಲ 19 ಇನ್ನಿಂಗ್ಸ್‌ಗಳಲ್ಲಿ 7ನೇ ಬಾರಿ ಶತಕ ಸಿಡಿಸಿದ್ದಾರೆ. ಈ ಮೂಲಕ ರೋಹಿತ್, ಈ ವಿಚಾರದಲ್ಲಿ ಸಚಿನ್ ತೆಂಡೂಲ್ಕರ್ (44 ಇನ್ನಿಂಗ್ಸ್, 6 ಶತಕ) ಅವರನ್ನು ಹಿಂದಿಕ್ಕಿದರು.

ಶತಕ ಮಾತ್ರವಲ್ಲದೆ, ವಿಶ್ವಕಪ್‌ನಲ್ಲಿ ಅತಿ ಕಡಿಮೆ ಇನ್ನಿಂಗ್ಸ್‌ಗಳಲ್ಲಿ 1000 ರನ್ ಗಳಿಸಿದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಇದಲ್ಲದೆ ತಮ್ಮ 31 ನೇ ಏಕದಿನ ಶತಕವನ್ನು ಪೂರ್ಣಗೊಳಿಸಿದ ರೋಹಿತ್ ಏಕದಿನದಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಮೂರನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈ ವಿಚಾರದಲ್ಲಿ 30 ಶತಕಗಳನ್ನು ಸಿಡಿಸಿರುವ ಆಸ್ಟ್ರೇಲಿಯಾದ ಮಾಜಿ ದಿಗ್ಗಜ ರಿಕಿ ಪಾಂಟಿಂಗ್ ಅವರನ್ನು ಹಿಂದಿಕ್ಕಿದರು. ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ (49) ಮೊದಲ ಸ್ಥಾನದಲ್ಲಿದ್ದರೆ, ವಿರಾಟ್ ಕೊಹ್ಲಿ (47) ಎರಡನೇ ಸ್ಥಾನದಲ್ಲಿದ್ದಾರೆ.




