ಆಸ್ಟ್ರೇಲಿಯಾದ ದಿಗ್ಗಜ ಸ್ಟೀವ್ ವಾ (Steve Waugh) ದಕ್ಷಿಣ ಆಫ್ರಿಕಾದ ಅಚ್ಚರಿಯ ತಂಡದ ಆಯ್ಕೆಯನ್ನು ಖಂಡಿಸಿದ್ದಾರೆ. ಫೆಬ್ರವರಿಯಲ್ಲಿ ನ್ಯೂಝಿಲೆಂಡ್ ವಿರುದ್ಧ 2 ಟೆಸ್ಟ್ ಪಂದ್ಯಗಳನ್ನು ಆಡಲು ಸಜ್ಜಾಗಿರುವ ದಕ್ಷಿಣ ಆಫ್ರಿಕಾ ಅನನುಭವಿ ತಂಡವನ್ನು ಹೆಸರಿಸಿದೆ. 14-ಪುರುಷರ ತಂಡದಲ್ಲಿ, 7 ಆಟಗಾರರು ಅನ್‌ಕ್ಯಾಪ್ ಆಗಿದ್ದಾರೆ, ಇದರಲ್ಲಿ ಸ್ವತಃ ನಾಯಕ, ನೀಲ್ ಬ್ರಾಂಡ್ ಕೂಡ ಇದುವರೆಗೆ ಒಂದೇ ಒಂದು ಅಂತರರಾಷ್ಟ್ರೀಯ ಟೆಸ್ಟ್ ಪಂದ್ಯವನ್ನು ಆಡಿಲ್ಲ. ಇವರು ಕಿವೀಸ್ ನಾಡಿಗೆ ಟೆಸ್ಟ್ ಆಡಲು ಪ್ರಯಾಣಿಸಲಿದ್ದಾರೆ.
ಆಸ್ಟ್ರೇಲಿಯಾದ ಮಾಜಿ ನಾಯಕ ಮತ್ತು ದಂತಕಥೆ ಸ್ಟೀವ್ ವಾ ಈ ನಿರ್ಧಾರದಿಂದ ಕೋಪಗೊಂಡಿದ್ದಾರೆ. ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯು ಟೆಸ್ಟ್ ಕ್ರಿಕೆಟ್ ಬಗ್ಗೆ ಕಾಳಜಿ ವಹಿಸುವುದಿಲ್ಲ ಎಂದು ವಾ ಹೇಳಿದ್ದಾರೆ. ಇದಲ್ಲದೆ, ನಾನು ನ್ಯೂಝಿಲೆಂಡ್ ತಂಡದಲ್ಲಿ ಇರುತ್ತಿದ್ದರೆ, ಇಂತಹ ತಂಡದ ವಿರುದ್ಧ ಸರಣಿಯನ್ನು ಸಹ ಆಡುತ್ತಿರಲಿಲ್ಲ ಎಂದು ಕೋಪದಿಂದ ಹೇಳಿದ್ದಾರೆ.
“ದಕ್ಷಿಣ ಆಫ್ರಿಕಾದ ಕ್ರಿಕೆಟ್ ಮಂಡಳಿಯು ಭವಿಷ್ಯದ ಟೆಸ್ಟ್ ಬಗ್ಗೆ ಚಿಂತಿಸುತ್ತಿಲ್ಲ. ಹಾಗೊಂದುವೇಳೆ ಅವರ ಅಲೋಚಿಸಿದ್ದರೆ ಅತ್ಯುತ್ತಮ ಆಟಗಾರರನ್ನು ಮನೆಯಲ್ಲಿ ಇರಿಸಿ ಅನನುಭವಿಗಳನ್ನು ನ್ಯೂಝಿಲೆಂಡ್‌ಗೆ ಕಳುಹಿಸುತ್ತಿರಲಿಲ್ಲ. ನಾನು ನ್ಯೂಝಿಲೆಂಡ್ ತಂಡದಲ್ಲಿ ಇದ್ದಿದ್ದರೆ ಆ ಸರಣಿಯನ್ನು ಆಡುತ್ತಲೇ ಇರಲಿಲ್ಲ. ಅವರು ಏಕೆ ಆಡುತ್ತಿದ್ದಾರೆಂದು ನನಗೆ ತಿಳಿದಿಲ್ಲ. ಇದು ನ್ಯೂಝಿಲೆಂಡ್ ಕ್ರಿಕೆಟ್‌ಗೆ ಅಗೌರವ ತೋರಿದಂತೆ,”ಎಂದು ಸ್ಟೀವ್ ವಾ ಹೇಳಿದರು.
David Warner retires: ಹೊಸ ವರ್ಷದಂದು ಶಾಕ್ ನೀಡಿದ ಡೇವಿಡ್ ವಾರ್ನರ್: ಏಕದಿನ ಕ್ರಿಕೆಟ್ನಿಂದ ದಿಢೀರ್ ನಿವೃತ್ತಿ
ಕೆಲ ರಾಷ್ಟ್ರಗಳು ಟೆಸ್ಟ್ ಕ್ರಿಕೆಟ್‌ಗೆ ಕಡಿಮೆ ಪ್ರಾಮುಖ್ಯತೆಯನ್ನು ತೋರಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ವಾ, “ಸಮಸ್ಯೆ ಏನು ಎಂಬುದು ಬಹಳ ಸ್ಪಷ್ಟವಾಗಿದೆ. ವೆಸ್ಟ್ ಇಂಡೀಸ್ ತಮ್ಮ ಪೂರ್ಣ ಸಾಮರ್ಥ್ಯದ ತಂಡವನ್ನು [ಈ ಬೇಸಿಗೆಯಲ್ಲಿ ಆಸ್ಟ್ರೇಲಿಯಾಕ್ಕೆ] ಕಳುಹಿಸುತ್ತಿಲ್ಲ. ಅವರು ಈಗ ಒಂದೆರಡು ವರ್ಷಗಳಿಂದ ಪೂರ್ಣ ಸಾಮರ್ಥ್ಯದ ಟೆಸ್ಟ್ ತಂಡವನ್ನು ಆಯ್ಕೆಯೇ ಮಾಡಿಲ್ಲ. ಟೆಸ್ಟ್ ಕ್ರಿಕೆಟ್ ಕ್ಷೀಣಿಸುತ್ತಿರುವಾಗ ಇದು ಸರಿಯೇ? ಖಂಡಿತವಾಗಿಯೂ ಐಸಿಸಿ ಜೊತೆ ಭಾರತ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದ ಕ್ರಿಕೆಟ್ ಮಂಡಳಿಗಳು ಟೆಸ್ಟ್ ಸ್ವರೂಪವನ್ನು ರಕ್ಷಿಸಲು ಮುಂದಾಗಬೇಕು,” ಎಂದು ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ಸದ್ಯ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಭಾರತವನ್ನು ಸೋಲಿಸಿದೆ. ಆದರೆ ಆತಿಥೇಯರು ನ್ಯೂಝಿಲೆಂಡ್‌ಗೆ ಸ್ಟಾರ್ ಅನುಭವಿ ಆಟಗಾರರನ್ನು ಕಳುಹಿಸದಿರಲು ಪ್ರಮುಖ ಕಾರಣವೆಂದರೆ ಸೌತ್ ಆಫ್ರಿಕಾ 20 ಲೀಗ್. ಟಿ20 ಪಂದ್ಯಾವಳಿಯು ಜನವರಿ 10 ರಿಂದ ಪ್ರಾರಂಭವಾಗಲಿದೆ. ಅಲ್ಲದೆ T20 ವಿಶ್ವಕಪ್‌ಗೆ ಕೆಲವೇ ತಿಂಗಳುಗಳು ಬಾಕಿಯಿದೆ. ಹೀಗಾಗಿ ಆಫ್ರಿಕಾ ತಮ್ಮ ಸಂಪೂರ್ಣ ಗಮನವನ್ನು ಟಿ20 ಸ್ವರೂಪದತ್ತ ಹರಿಸಲು ನಿರ್ಧರಿಸಿದೆ.
ನ್ಯೂಝಿಲೆಂಡ್ ಟೆಸ್ಟ್ಗೆ ದಕ್ಷಿಣ ಆಫ್ರಿಕಾ ತಂಡ: ನೀಲ್ ಬ್ರಾಂಡ್ (ನಾಯಕ), ಡೇವಿಡ್ ಬೆಡಿಂಗ್ಹ್ಯಾಮ್, ರುವಾನ್ ಡಿ ಸ್ವಾರ್ಡ್ಟ್, ಕ್ಲೈಡ್ ಫಾರ್ಟುಯಿನ್, ಜುಬೇರ್ ಹಮ್ಜಾ, ಟ್ಶೆಪೊ ಮೊರೆಕಿ, ಮಿಹ್ಲಾಲಿ ಎಂಪೊಂಗ್ವಾನಾ, ಡುವಾನ್ನೆ ಒಲಿವಿಯರ್, ಡೇನ್ ಪ್ಯಾಟರ್ಸನ್, ಕೀಗನ್ ಪೀಟರ್ಸನ್, ಡೇನ್ ಪೀಡ್ಟ್, ರೇನಾರ್ಡ್ ವ್ಯಾನ್ ಬರ್ಗ್, ಶಾನ್ ವಾನ್ ಬರ್ಗ್ ಮತ್ತು ಖಯಾ ಜೊಂಡೋ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ