ಕ್ರಿಕೆಟ್ ಲೆಜೆಂಡ್ ಆಸ್ಟ್ರೇಲಿಯಾದ ಶೇನ್ ವಾರ್ನ್ (Shane Warne) ಅವರ ವಿಶ್ವ ದಾಖಲೆಯೊಂದನ್ನು ಆಸೀಸ್ ಸ್ಪಿನ್ನರ್ ನಾಥನ್ ಲಿಯಾನ್ ಸರಿಗಟ್ಟುವ ಮೂಲಕ ಹೊಸ ಸಾಧನೆ ಮೆರೆದಿದ್ದಾರೆ. ಶ್ರೀಲಂಕಾ ವಿರುದ್ದ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಸ್ಪಿನ್ ಮೋಡಿ ತೋರಿಸಿದ್ದ ಲಿಯಾನ್ 5 ವಿಕೆಟ್ ಉರುಳಿಸಿ ಮಿಂಚಿದ್ದರು. ಈ ಐದು ವಿಕೆಟ್ಗಳೊಂದಿಗೆ ನಾಥನ್ ಲಿಯಾನ್ ವಿಶೇಷ ಸಾಧನೆಯನ್ನೂ ಸಹ ಮಾಡಿದ್ದಾರೆ. ಲಿಯಾನ್ಗೆ ಇದು ಟೆಸ್ಟ್ ವೃತ್ತಿಜೀವನದ 20ನೇ 5 ವಿಕೆಟ್ ಗುಚ್ಛವಾಗಿದೆ. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ 20 ಅಥವಾ ಅದಕ್ಕಿಂತ ಹೆಚ್ಚು ಬಾರಿ 5 ವಿಕೆಟ್ ಪಡೆದ ಆಸ್ಟ್ರೇಲಿಯಾದ 5ನೇ ಬೌಲರ್ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಶೇನ್ ವಾರ್ನ್ (37), ಗ್ಲೆನ್ ಮೆಕ್‌ಗ್ರಾತ್ (29), ಡೆನ್ನಿಸ್ ಲಿಲ್ಲಿ (23) ಮತ್ತು ಕ್ಲಾರಿ ಗ್ರಿಮ್ಮೆಟ್ (21) ನಾಥನ್ ಲಿಯಾನ್‌ಗಿಂತ ಮುಂದಿದ್ದಾರೆ.
ವಿಶೇಷ ಎಂದರೆ ಏಷ್ಯನ್ ಪಿಚ್‌ನಲ್ಲಿ ಇನ್ನಿಂಗ್ಸ್‌ವೊಂದರಲ್ಲಿ 5 ವಿಕೆಟ್ ಕಬಳಿಸಿದ ಶೇನ್ ವಾರ್ನ್ ಅವರ ವಿಶ್ವ ದಾಖಲೆಯನ್ನು ಕೂಡ ಇದರೊಂದಿಗೆ ನಾಥನ್ ಲಿಯಾನ್ ಸರಿಗಟ್ಟಿದ್ದಾರೆ. ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಏಷ್ಯಾದಲ್ಲಿ 9 ಬಾರಿ 5 ವಿಕೆಟ್ಗಳನ್ನು ಪಡೆದಿದ್ದರು. ಇದೀಗ ಲಿಯಾನ್ ಶ್ರೀಲಂಕಾ ವಿರುದ್ದ 5 ವಿಕೆಟ್ ಉರುಳಿಸುವ ಮೂಲಕ ಏಷ್ಯಾದಲ್ಲಿ 9ನೇ ಬಾರಿ ಈ ಸಾಧನೆ ಮಾಡಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾದ ಶ್ರೇಷ್ಠ ಸ್ಪಿನ್ನರ್ ಶೇನ್ ವಾರ್ನ್ ಅವರ ಸಾಧನೆಯನ್ನು ಸರಿಗಟ್ಟಿದ್ದಾರೆ.
ಸದ್ಯ ನಾಥನ್ ಲಿಯಾನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ 12ನೇ ಸ್ಥಾನದಲ್ಲಿದ್ದಾರೆ. ಲಂಕಾ ವಿರುದ್ದ ಐದು ವಿಕೆಟ್ ಕಬಳಿಸುವ ಮೂಲಕ ಸರ್ ರಿಚರ್ಡ್ ಹ್ಯಾಡ್ಲಿ ಅವರನ್ನು ಹಿಂದಿಕ್ಕಿದರು. ಇದೀಗ ಲಂಕಾ ರಂಗನಾ ಹೆರಾತ್ (433) ಅವರ ವಿಕೆಟ್ಗಳ ದಾಖಲೆಯನ್ನು ಸರಿಗಟ್ಟಲು ಲಿಯಾನ್ಗೆ ಕೇವಲ 1 ವಿಕೆಟ್ ಅವಶ್ಯಕತೆಯಿದೆ. ಹಾಗೆಯೇ 432 ವಿಕೆಟ್ ಉರುಳಿಸಿರುವ ಲಿಯಾನ್ ಅವರ ಮುಂದಿನ ಟಾರ್ಗೆಟ್ ಕಪಿಲ್ ದೇವ್ ಅವರ 434 ವಿಕೆಟ್‌ಗಳು. ಕಪಿಲ್ ದೇವ್ ಅವರನ್ನು ಹಿಂದಿಕ್ಕಿದ್ದರೆ ನಾಥನ್ ಲಿಯಾನ್ ಟೆಸ್ಟ್ ಕ್ರಿಕೆಟ್‌ನ ಟಾಪ್ 10 ವಿಕೆಟ್ ಟೇಕರ್ ಬೌಲರ್‌ಗಳ ಪಟ್ಟಿಗೆ ಸೇರ್ಪಡೆಯಾಗಲಿದ್ದಾರೆ.
ಇನ್ನು ಗಾಲೆಯಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ದದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಬೌಲರ್ಗಳು ಅತ್ಯುತ್ತಮ ಬೌಲಿಂಗ್ ದಾಳಿ ಸಂಘಟಿಸಿದ್ದರು. ಪರಿಣಾಮ ಶ್ರೀಲಂಕಾ ಮೊದಲ ಇನಿಂಗ್ಸ್ನಲ್ಲಿ ಕೇವಲ 212 ರನ್‌ಗಳಿಗೆ ಆಲೌಟ್ ಆಗಿದೆ. ಇದೀಗ ಆಸ್ಟ್ರೇಲಿಯಾ ತಂಡವು ಮೊದಲ ಇನಿಂಗ್ಸ್ ಬ್ಯಾಟಿಂಗ್ ಮಾಡುತ್ತಿದ್ದು, ಮಧ್ಯಾಹ್ನದ ಊಟದ ಬ್ರೇಕ್ ವೇಳೆಗೆ 3 ವಿಕೆಟ್ ನಷ್ಟಕ್ಕೆ 98 ರನ್ ಕಲೆಹಾಕಿದೆ.