
ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ಹಿರಿಯ ವೇಗದ ಬೌಲರ್ ಮೇಗನ್ ಶಟ್ ಅವರಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಎರಡು ಪಂದ್ಯಗಳ ನಿಷೇಧ ಹೇರಿದೆ. ಪ್ರಿಸ್ಕ್ರಿಪ್ಷನ್ ಔಷಧಿಗಳ ಬಳಕೆಗೆ ಸಂಬಂಧಿಸಿದ ವೈದ್ಯಕೀಯ ಮಾರ್ಗಸೂಚಿಗಳನ್ನು ಪಾಲಿಸದ ಕಾರಣ ಅವರ ವಿರುದ್ಧ ಈ ಶಿಸ್ತು ಕ್ರಮ ಕೈಗೊಳ್ಳಲಾಗಿದೆ.
ಕ್ರಿಕೆಟ್ ಆಸ್ಟ್ರೇಲಿಯಾದ ಪ್ರಕಾರ, ಮೇಗನ್ ಶಟ್ ಅವರು ಮಂಡಳಿಯ ‘ಕ್ರೀಡಾ ವಿಜ್ಞಾನ ಮತ್ತು ಕ್ರೀಡಾ ವೈದ್ಯಕೀಯ’ (SSSM) ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆ. ಆದರೆ, ಇದು ಯಾವುದೇ ರೀತಿಯ ಉದ್ದೀಪನ ಮದ್ದು ಅಥವಾ ಕ್ರೀಡಾ ಪ್ರದರ್ಶನ ಹೆಚ್ಚಿಸುವ ನಿಷೇಧಿತ ಔಷಧ ಬಳಕೆಯ ಪ್ರಕರಣವಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
33 ವರ್ಷದ ಅನುಭವಿ ವೇಗಿ ಮೇಗನ್ ಶಟ್ ಈ ನಿಷೇಧದಿಂದಾಗಿ ಮುಂಬರುವ ಎರಡು ಪ್ರಮುಖ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ.
ನ್ಯೂಝಿಲೆಂಡ್ ವಿರುದ್ಧದ 3ನೇ ಟಿ20ಐ (ಅಕ್ಟೋಬರ್ 22, 2026): ನಾರ್ತ್ ಸಿಡ್ನಿ ಓವಲ್‌ನಲ್ಲಿ ಇಂದು ನಡೆಯಲಿರುವ ನ್ಯೂಝಿಲೆಂಡ್ ವಿರುದ್ಧದ ಸರಣಿಯ ಅಂತಿಮ ಪಂದ್ಯದಿಂದ ಅವರು ಹೊರಗುಳಿಯಲಿದ್ದಾರೆ. ಈ ಸರಣಿಯಲ್ಲಿ ಆಸ್ಟ್ರೇಲಿಯಾ ಈಗಾಗಲೇ 2-0 ಮುನ್ನಡೆ ಸಾಧಿಸಿದ್ದು, ಹೀಗಾಗಿ ಶಟ್ ಅವರ ಅಲಭ್ಯತೆಯು ಆಸ್ಟ್ರೇಲಿಯಾ ತಂಡದ ಮೇಲೆ ನೇರ ಪರಿಣಾಮ ಬೀರಲ್ಲ ಎನ್ನಬಹುದು.
WBBL ಆರಂಭಿಕ ಪಂದ್ಯ (ಅಕ್ಟೋಬರ್ 31, 2026): ವುಮೆನ್ಸ್ ಬಿಗ್ ಬ್ಯಾಶ್ ಲೀಗ್‌ನಲ್ಲಿ ಅಡಿಲೇಡ್ ಸ್ಟ್ರೈಕರ್ಸ್ ಪರವಾಗಿ ಕಣಕ್ಕಿಳಿಯುತ್ತಿರುವ ಮೇಗನ್ ಶಟ್ ಮೆಲ್ಬೋರ್ನ್ ಸ್ಟಾರ್ಸ್ ವಿರುದ್ಧದ ಮೊದಲ ಪಂದ್ಯದಿಂದಲೂ ಹೊರಗುಳಿಯಬೇಕಾಗುತ್ತದೆ.
ಕ್ರಿಕೆಟ್ ಆಸ್ಟ್ರೇಲಿಯಾದ ತೀರ್ಪನ್ನು ತಕ್ಷಣವೇ ಒಪ್ಪಿಕೊಂಡಿರುವ ಮೇಗನ್ ಶಟ್, “ನನ್ನ ಮೇಲಿನ ಶಿಸ್ತು ಕ್ರಮವನ್ನು ನಾನು ಸಂಪೂರ್ಣವಾಗಿ ಸ್ವೀಕರಿಸುತ್ತೇನೆ. ನಿಗದಿಪಡಿಸಿದ ಉನ್ನತ ಮಾನದಂಡಗಳನ್ನು ಪಾಲಿಸಲು ನನ್ನಿಂದ ಸಾಧ್ಯವಾಗದ್ದಕ್ಕೆ ನಾನು ಕ್ಷಮೆಯಾಚಿಸುತ್ತೇನೆ” ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ತಮಗೆ ನಿಯಮಗಳ ಬಗ್ಗೆ ನಿಯಮಿತವಾಗಿ ಮಾಹಿತಿ ನೀಡಲಾಗುತ್ತಿದ್ದರೂ ಜವಾಬ್ದಾರಿಯುತವಾಗಿ ನಡೆದುಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ವಿಶ್ವಕಪ್ ಟೂರ್ನಿಯಿಂದ ಹಿಂದೆ ಸರಿದ ಪಾಕಿಸ್ತಾನ್!
ಇತ್ತೀಚೆಗಷ್ಟೇ ಬಾಂಗ್ಲಾದೇಶ್ ವಿರುದ್ಧದ ಏಕದಿನ ಸರಣಿಯಲ್ಲಿ 10 ವಿಕೆಟ್ ಪಡೆದು ‘ಪ್ಲೇಯರ್ ಆಫ್ ದಿ ಸೀರೀಸ್’ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಮೇಗನ್ ಶಟ್ ಅವರಿಗೆ ಈ ನಿಷೇಧ ದೊಡ್ಡ ಹಿನ್ನಡೆಯಾಗಿದೆ. ಇದಾಗ್ಯೂ ಕ್ರಿಕೆಟ್ ಆಸ್ಟ್ರೇಲಿಯಾವು ಮೇಗನ್ ಶಟ್ ಅವರಿಗೆ ಅಗತ್ಯ ಬೆಂಬಲವನ್ನು ನೀಡುವುದಾಗಿ ತಿಳಿಸಿದೆ.
Published On - 1:58 pm, Thu, 22 October 26