ಟೀಮ್ ಇಂಡಿಯಾದಲ್ಲಿ ಚಾನ್ಸ್​ ಸಿಗುತ್ತಿದ್ದಂತೆ, ಏರ್​ಪೋರ್ಟ್​ನಿಂದ ನೇರವಾಗಿ ಮಾಜಿ ಕ್ರಿಕೆಟಿಗನ ಮನೆಗೆ ತೆರಳಿದ ಅವೇಶ್ ಖಾನ್

| Updated By: ಝಾಹಿರ್ ಯೂಸುಫ್

Updated on: Nov 10, 2021 | 4:05 PM

Avesh Khan: ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಖಾಯಂ ಸದಸ್ಯರಾಗಿರುವ ಅವೇಶ್ ಖಾನ್ ಈ ಬಾರಿ 24 ವಿಕೆಟ್ ಉರುಳಿಸಿ ಮಿಂಚಿದ್ದರು. ಅಷ್ಟೇ ಅಲ್ಲದೆ ಈ ಹಿಂದೆ ಭಾರತ ತಂಡ ನೆಟ್ ಬೌಲರ್ ಆಗಿ ಕೂಡ ಆಯ್ಕೆಯಾಗಿದ್ದರು.

ಟೀಮ್ ಇಂಡಿಯಾದಲ್ಲಿ ಚಾನ್ಸ್​ ಸಿಗುತ್ತಿದ್ದಂತೆ, ಏರ್​ಪೋರ್ಟ್​ನಿಂದ ನೇರವಾಗಿ ಮಾಜಿ ಕ್ರಿಕೆಟಿಗನ ಮನೆಗೆ ತೆರಳಿದ ಅವೇಶ್ ಖಾನ್
Avesh Khan
Follow us on

ನ್ಯೂಜಿಲೆಂಡ್ ವಿರುದ್ದದ ಟಿ20 ಸರಣಿಗಾಗಿ ಆಯ್ಕೆ ಮಾಡಲಾದ ಟೀಮ್ ಇಂಡಿಯಾದಲ್ಲಿ (Team India) ಮಧ್ಯಪ್ರದೇಶದ ಯುವ ವೇಗಿ ಅವೇಶ್ ಖಾನ್ (Avesh Khan) ಸ್ಥಾನ ಪಡೆದಿದ್ದಾರೆ. ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಪರ ಭರ್ಜರಿ ಬೌಲಿಂಗ್ ಪ್ರದರ್ಶಿಸಿರುವ ಅವೇಶ್ ಅವರಿಗೆ ಈ ಬಾರಿ ಆಯ್ಕೆ ಸಮಿತಿ ಮಣೆಹಾಕಿದೆ. ಇತ್ತ ತಂಡದಲ್ಲಿ ಸ್ಥಾನ ಸಿಗುತ್ತಿದ್ದಂತೆ ಅವೇಶ್ ಖಾನ್​ ಇಂದೋರ್​ಗೆ ಏರ್​ಪೋರ್ಟ್​ಗೆ ಮರಳಿದ್ದು, ಅಲ್ಲಿಂದ ನೇರವಾಗಿ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗನ ಮನೆಗೆ ತೆರಳಿ ಆಶೀರ್ವಾದ ಪಡೆದರು. ಹೌದು, ತನ್ನೆಲ್ಲಾ ಕೆಲಸವನ್ನು ಬದಿಗಿಟ್ಟು ಅವೇಶ್ ಖಾನ್ ತೆರಳಿದ್ದು ಭಾರತ ತಂಡದ ಮಾಜಿ ಆಟಗಾರ ಅಮಯ್ ಖುರಾಸಿಯಾ (Amay Khurasiya) ಅವರ ಮನೆಗೆ ಎಂಬುದು ವಿಶೇಷ.

ಭಾರತದ ಪರ 12 ಏಕದಿನ ಪಂದ್ಯಗಳನ್ನಾಡಿರುವ ಅಮಯ್ ಖುರಾಸಿಯಾ ಅವೇಶ್ ಖಾನ್ ಅವರ ಪ್ರತಿಭೆಯನ್ನು ಗುರುತಿಸಿದ್ದರು. ಅಷ್ಟೇ ಅಲ್ಲದೆ ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವ ಅತ್ಯುತ್ತಮ ಬೌಲರ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶ ಅವೇಶ್ ಖಾನ್​ಗೆ ಒದಗಿ ಬಂದಿದೆ. ಈ ಸಂತಸದ ಸಂದರ್ಭದಲ್ಲಿ ನನ್ನ ಗುರುಗಳಾದ ಅಮಯ್ ಖುರಾಸಿಯಾ ಅವರನ್ನು ಭೇಟಿಯಾಗಿ ಅವೇಶ್ ಆಶೀರ್ವಾದ ಪಡೆದಿದ್ದಾರೆ. ಆ ಬಳಿಕವಷ್ಟೇ ಅವೇಶ್ ಖಾನ್ ತಮ್ಮ ಮನೆಗೆ ತೆರಳಿದ್ದರು ಎಂಬುದು ವಿಶೇಷ.

ಇನ್ನು ಭಾರತ ತಂಡಕ್ಕೆ ಆಯ್ಕೆಯಾಗಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಅವೇಶ್ ಖಾನ್, ದೇಶಕ್ಕಾಗಿ ಆಡುವುದು ಪ್ರತಿಯೊಬ್ಬರ ಕನಸು. ಇದೀಗ ನಾನು ಭಾರತವನ್ನು ಪ್ರತಿನಿಸುತ್ತಿದ್ದೇನೆ. ದೇಶಕ್ಕಾಗಿ ಆಡುವ ಕನಸು ಈಗ ನನಸಾಗುತ್ತಿದೆ ಎಂದು ತಿಳಿಸಿದರು. ಹಿಂದಿನ ದೇಶೀಯ ಟೂರ್ನಿ ಮತ್ತು ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಭಾರತ ತಂಡದಲ್ಲಿ ಸ್ಥಾನ ಪಡೆಯಲು ಸಹಾಯ ಮಾಡಿದೆ ಎಂದು ಅವೇಶ್ ಖಾನ್ ಹೇಳಿದರು.

ನನ್ನ ಈ ಎಲ್ಲಾ ಸಾಧನೆಗೆ ಮುಖ್ಯ ಕಾರಣಕರ್ತರು ಮಾಜಿ ಕ್ರಿಕೆಟಿಗರಾದ ಅಮಯ್ ಖುರಾಸಿಯಾ, ಚಂದ್ರಕಾಂತ್ ಪಂಡಿತ್, ದೇವೇಂದ್ರ ಬುಂದೇಲಾ ಮತ್ತು ಅಬ್ಬಾಸ್ ಅಲಿ. ಈಗ ನಾನು ಭಾರತ ತಂಡಕ್ಕೆ ಆಯ್ಕೆಯಾಗಿರುವ ಶ್ರೇಯಸ್ಸು ಇವರೆಲ್ಲರಿಗೂ ಸಲ್ಲುತ್ತದೆ. ಇವರೆಲ್ಲರೂ ತಮ್ಮ ಸಾಮರ್ಥ್ಯವನ್ನು ಗುರುತಿಸಿ ಮಾರ್ಗದರ್ಶನ ನೀಡಿದ್ದರು ಎಂದು 24 ವರ್ಷದ ಅವೇಶ್ ಖಾನ್ ತಿಳಿಸಿದರು.

ಮಗ ಭಾರತ ತಂಡವನ್ನು ಪ್ರತಿನಿಧಿಸುತ್ತಿರುವ ಬಗ್ಗೆ ಖುಷಿ ವ್ಯಕ್ತಪಡಿಸಿದ ಯುವ ವೇಗಿಯ ತಂದೆ ಆಶಿಕ್ ಖಾನ್, ನನ್ನ ಮಗನಿಗೆ ಕ್ರಿಕೆಟಿಗನಾಗಬೇಕೆಂಬ ಆಸೆಯಿತ್ತು. ಇದಕ್ಕಾಗಿ ಆತ ಮೊದಲು ಇಂದೋರ್ ಕೋಲ್ಟ್ಸ್ ಕ್ರಿಕೆಟ್ ಕ್ಲಬ್ ಸೇರಿದ್ದನು. ನಂತರ ಅವನ ಪ್ರತಿಭೆಯನ್ನು ಗುರುತಿಸಿದ ಅಮಯ್ ಖುರಾಸಿಯಾ ಅವರು ತಮ್ಮ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿಗೆ ಆಯ್ಕೆ ಮಾಡಿದರು. ಆ ಬಳಿಕ ಅವೇಶ್ ಖಾನ್ ಹಿಂತಿರುಗಿ ನೋಡಲಿಲ್ಲ. ಹೀಗಾಗಿ ಅವೇಶ್ ಖಾನ್ ಈ ಆಯ್ಕೆಯ ಹಿಂದಿನ ಪರಿಶ್ರಮದಲ್ಲಿ ಎಲ್ಲಾ ಕೋಚ್​ ಹಾಗೂ ಸಿಬ್ಬಂದಿಗಳಿದ್ದಾರೆ ಎಂದು ತಿಳಿಸಿದರು.

ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಖಾಯಂ ಸದಸ್ಯರಾಗಿರುವ ಅವೇಶ್ ಖಾನ್ ಈ ಬಾರಿ 24 ವಿಕೆಟ್ ಉರುಳಿಸಿ ಮಿಂಚಿದ್ದರು. ಅಷ್ಟೇ ಅಲ್ಲದೆ ಈ ಹಿಂದೆ ಭಾರತ ತಂಡ ನೆಟ್ ಬೌಲರ್ ಆಗಿ ಕೂಡ ಆಯ್ಕೆಯಾಗಿದ್ದರು. ಇದಾಗ್ಯೂ ಅವರು ಟಿ20 ವಿಶ್ವಕಪ್​ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಇದೀಗ ರೋಹಿತ್ ಶರ್ಮಾ ನೇತೃತ್ವದ 16 ಸದಸ್ಯರ ಬಳಗದಲ್ಲಿ ಅವೇಶ್ ಖಾನ್ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: Team India: ಟೀಮ್ ಇಂಡಿಯಾದ ಈ ಜೋಡಿ ವಿಶ್ವಕಪ್ ಗೆದ್ದು ಕೊಡಲಿದೆ ಎಂದ ಮಾಜಿ ಕ್ರಿಕೆಟಿಗ

ಇದನ್ನೂ ಓದಿ: Team India: ಟೀಮ್ ಇಂಡಿಯಾದ ಮುಂದಿನ ಸರಣಿಗಳ ವೇಳಾಪಟ್ಟಿ ಹೀಗಿದೆ

ಇದನ್ನೂ ಓದಿ:   IPL 2022: ಯುವ ನಾಯಕನ ಮೇಲೆ ಕಣ್ಣಿಟ್ಟಿರುವ CSK

(Avesh Khan takes blessings of Coach Amay Khurasiya after selection)