
ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಮೂರನೇ ಏಕದಿನ ಪಂದ್ಯದಿಂದಲೂ ಟೀಮ್ ಇಂಡಿಯಾದ ಆಲ್ರೌಂಡರ್ ಅಕ್ಷರ್ ಪಟೇಲ್ ಹೊರಗುಳಿದಿದ್ದಾರೆ. ಗಾಯದ ಕಾರಣ ಮೊದಲ ಎರಡು ಪಂದ್ಯಗಳಿಂದ ಹೊರಗುಳಿದಿದ್ದ ಅಕ್ಷರ್ ರಾಜ್ಕೋಟ್ನಲ್ಲಿ ನಡೆಯಲಿರುವ ಮೂರನೇ ಪಂದ್ಯದ ವೇಳೆ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಗಾಯದಿಂದ ಚೇತರಿಸಿಕೊಳ್ಳದ ಕಾರಣ ಅಂತಿಮ ಏಕದಿನ ಪಂದ್ಯದಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.
ಇತ್ತ ಏಕದಿನ ವಿಶ್ವಕಪ್ಗೂ ಮುನ್ನ ಅಕ್ಷರ್ ಪಟೇಲ್ ಗಾಯಗೊಂಡಿರುವುದು ಟೀಮ್ ಇಂಡಿಯಾದ ಚಿಂತೆಯನ್ನು ಹೆಚ್ಚಿಸಿದೆ. ಅದರಲ್ಲೂ ಆಸ್ಟ್ರೇಲಿಯಾ ವಿರುದ್ಧದ ಸರಣಿಯಿಂದ ಹೊರಗುಳಿದಿರುವ ಕಾರಣ ಅವರ ಫಿಟ್ನೆಸ್ ಬಗ್ಗೆ ಪ್ರಶ್ನೆಗಳೆದ್ದಿವೆ.
ಇದಾಗ್ಯೂ ಅವರನ್ನು ವಿಶ್ವಕಪ್ ತಂಡದಿಂದ ಕೈ ಬಿಡಲಾಗಿಲ್ಲ. ಬದಲಾಗಿ ಏಕದಿನ ವಿಶ್ವಕಪ್ನ ಅಭ್ಯಾಸ ಪಂದ್ಯಗಳವರೆಗೆ ಕಾದು ನೋಡಲು ಬಿಸಿಸಿಐ ಆಯ್ಕೆ ಸಮಿತಿ ನಿರ್ಧರಿಸಿದೆ. ಭಾರತ ತಂಡವು ಸೆಪ್ಟೆಂಬರ್ 30 ರಂದು ಇಂಗ್ಲೆಂಡ್ ವಿರುದ್ಧ ಹಾಗೂ ಅಕ್ಟೋಬರ್ 3 ರಂದು ನೆದರ್ಲೆಂಡ್ಸ್ ವಿರುದ್ಧ ಅಭ್ಯಾಸ ಪಂದ್ಯವನ್ನಾಡಲಿದೆ. ಈ ವೇಳೆಗೆ ಅಕ್ಷರ್ ಚೇತರಿಸಿಕೊಳ್ಳದಿದ್ದರೆ ತಂಡದಿಂದ ಹೊರಬೀಳುವುದು ಖಚಿತ.
ಒಂದು ವೇಳೆ ಅಕ್ಷರ್ ಪಟೇಲ್ ವಿಶ್ವಕಪ್ ತಂಡದಿಂದ ಹೊರಬಿದ್ದರೆ, ರವಿಚಂದ್ರನ್ ಅಶ್ವಿನ್ಗೆ ಸ್ಥಾನ ಸಿಗುವುದು ಖಚಿತ ಎನ್ನಬಹುದು. ಇದೇ ಕಾರಣದಿಂದಾಗಿ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಅಶ್ವಿನ್ ಅವರನ್ನು ಆಯ್ಕೆ ಮಾಡಲಾಗಿದೆ. ಇತ್ತ ಸಿಕ್ಕ ಅವಕಾಶದಲ್ಲಿ ಅಶ್ವಿನ್ 4 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಹೀಗಾಗಿ ಅಕ್ಷರ್ ಬದಲಿಗೆ ಅಶ್ವಿನ್ ಆಯ್ಕೆಯನ್ನು ನಿರೀಕ್ಷಿಸಬಹುದು.
ರಾಜ್ಕೋಟ್ನಲ್ಲಿ ನಡೆಯಲಿರುವ 3ನೇ ಏಕದಿನ ಪಂದ್ಯದಿಂದ ಟೀಮ್ ಇಂಡಿಯಾ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಹಾಗೂ ಆಲ್ರೌಂಡರ್ ಶಾರ್ದೂಲ್ ಠಾಕೂರ್ಗೆ ವಿಶ್ರಾಂತಿ ನೀಡಲಾಗಿದೆ.
ಮುಂಬರುವ ಏಕದಿನ ವಿಶ್ವಕಪ್ ನಿಮಿತ್ತ ಇಬ್ಬರು ಆಟಗಾರರಿಗೆ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಇನ್ನು ಈ ಪಂದ್ಯದ ವೇಳೆಗೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಹಾಗೂ ಜಸ್ಪ್ರೀತ್ ಬುಮ್ರಾ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಹೀಗಾಗಿ ಭಾರತ ತಂಡದ ಪ್ಲೇಯಿಂಗ್ ಇಲೆವೆನ್ನಲ್ಲಿ ಮಹತ್ವದ ಬದಲಾವಣೆ ಕಂಡು ಬರಲಿದೆ.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ, (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಆರ್ ಅಶ್ವಿನ್.
ಇದನ್ನೂ ಓದಿ: ಟೀಮ್ ಇಂಡಿಯಾ ಪರ ಸತತ 4 ಸಿಕ್ಸ್ ಸಿಡಿಸಿದ್ದು ಮೂವರು ಬ್ಯಾಟರ್ಗಳು ಮಾತ್ರ..!
ಮೂರನೇ ಏಕದಿನ ಪಂದ್ಯ ಯಾವಾಗ?
ಭಾರತ ಮತ್ತು ಆಸ್ಟ್ರೇಲಿಯಾ ನಡುವಣ 3 ಪಂದ್ಯಗಳ ಏಕದಿನ ಸರಣಿಯನ್ನು ಟೀಮ್ ಇಂಡಿಯಾ ಈಗಾಗಲೇ 2-0 ಅಂತರದಿಂದ ವಶಪಡಿಸಿಕೊಂಡಿದೆ. ಇನ್ನು ಭಾರತ ತಂಡದ ಪಾಲಿಗೆ ಔಪಚಾರಿಕವಾಗಿರುವ ಮೂರನೇ ಪಂದ್ಯವು ಸೆಪ್ಟೆಂಬರ್ 27 ರಂದು ರಾಜ್ಕೋಟ್ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಇರಾದೆಯಲ್ಲಿದೆ ಟೀಮ್ ಇಂಡಿಯಾ.