ಏಷ್ಯನ್ ಗೇಮ್ಸ್​: ಚಿನ್ನದ ಪದಕ ಗೆದ್ದ ಟೀಮ್ ಇಂಡಿಯಾ

Asian Games: ಟೀಮ್ ಇಂಡಿಯಾ ನೀಡಿದ 117 ರನ್​ಗಳ ಸುಲಭ ಗುರಿ ಬೆನ್ನತ್ತದ ಶ್ರೀಲಂಕಾ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಟಿಟಾಸ್ ಸಾಧು ಯಶಸ್ವಿಯಾದರು. 2ನೇ ಓವರ್​ನಲ್ಲಿ 2 ವಿಕೆಟ್ ಕಬಳಿಸಿ ಸಾಧು ಆ ಬಳಿಕ ಅಪಾಯಕಾರಿ ಬ್ಯಾಟರ್ ಚಮೇರಿ ಅಟ್ಟಾಪಟ್ಟು (12) ವಿಕೆಟ್ ಉರುಳಿಸಿದರು.

ಏಷ್ಯನ್ ಗೇಮ್ಸ್​: ಚಿನ್ನದ ಪದಕ ಗೆದ್ದ ಟೀಮ್ ಇಂಡಿಯಾ
Team India
Follow us
TV9 Web
| Updated By: ಝಾಹಿರ್ ಯೂಸುಫ್

Updated on:Sep 25, 2023 | 3:01 PM

ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್​ನಲ್ಲಿ ಟೀಮ್ ಇಂಡಿಯಾ ಮಹಿಳಾ ತಂಡ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಪಿಂಗ್‌ಫೆಂಗ್ ಕ್ಯಾಂಪಸ್ ಕ್ರಿಕೆಟ್ ಫೀಲ್ಡ್​ ಮೈದಾನದಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 19 ರನ್​ಗಳಿಂದ ಸೋಲುಣಿಸುವ ಮೂಲಕ ಭಾರತೀಯ ವನಿತೆಯರು ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕಿ ಹರ್ಮನ್​ಪ್ರೀತ್ ಕೌರ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಭಾರತ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಯುವ ಸ್ಪೋಟಕ ಆಟಗಾರ್ತಿ ಶಫಾಲಿ ವರ್ಮಾ ಕೇವಲ 9 ರನ್​ಗಳಿಸಿ ನಿರ್ಗಮಿಸಿದ್ದರು. ಈ ಹಂತದಲ್ಲಿ ಜೊತೆಗೂಡಿದ ಸ್ಮೃತಿ ಮಂಧಾನ ಹಾಗೂ ಜೆಮಿಮಾ ರೋಡ್ರಿಗಸ್ ಉತ್ತಮ ಜೊತೆಯಾಟ ಪ್ರದರ್ಶಿಸಿದರು.

ಮೂರನೇ ವಿಕೆಟ್​ಗೆ 73 ರನ್​ಗಳ ಜೊತೆಯಾಟವಾಡಿದ ಬಳಿಕ ಸ್ಮೃತಿ ಮಂಧಾನ (46) ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ವಿಕೆಟ್ ಕೀಪರ್ ರಿಚಾ ಘೋಷ್ (9) ಕೂಡ ಔಟಾದರು. ಇನ್ನು ನಾಯಕಿ ಹರ್ಮನ್​ಪ್ರೀತ್ ಕೌರ್ ಕೇವಲ 2 ರನ್​ಗಳಿಸಿ ನಿರ್ಗಮಿಸಿದರು.

ದಿಢೀರ್ ಕುಸಿತಕ್ಕೊಳಾದ ತಂಡಕ್ಕೆ  ಎಚ್ಚರಿಕೆಯ ಬ್ಯಾಟಿಂಗ್ ಮೂಲಕ ಜೆಮಿಮಾ ಆಸರೆಯಾದರು. ಅಲ್ಲದೆ ತಂಡದ ಮೊತ್ತವನ್ನು 100 ರ ಗಡಿದಾಟಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.  42 ರನ್​ಗಳಿಸಿದ್ದ ಜೆಮಿಮಾ ರೋಡ್ರಿಗಸ್ 19ನೇ ಓವರ್​ನಲ್ಲಿ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಟೀಮ್ ಇಂಡಿಯಾ 7 ವಿಕೆಟ್ ನಷ್ಟಕ್ಕೆ 20 ಓವರ್​ಗಳಲ್ಲಿ 116 ರನ್ ಕಲೆಹಾಕಿತು.

117 ರನ್​ಗಳ ಸುಲಭ ಗುರಿ ಬೆನ್ನತ್ತದ ಶ್ರೀಲಂಕಾ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಟಿಟಾಸ್ ಸಾಧು ಯಶಸ್ವಿಯಾದರು. 2ನೇ ಓವರ್​ನಲ್ಲಿ 2 ವಿಕೆಟ್ ಕಬಳಿಸಿ ಸಾಧು ಆ ಬಳಿಕ ಅಪಾಯಕಾರಿ ಬ್ಯಾಟರ್ ಚಾಮರಿ ಅಟ್ಟಾಪಟ್ಟು (12) ವಿಕೆಟ್ ಉರುಳಿಸಿದರು.

ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದ ಹಾಸಿನಿ ಪೆರೇರಾ (25) ಹಾಗೂ ನೀಲಾಕ್ಷಿ ಡಿಸಿಲ್ವಾ (23) ತಂಡಕ್ಕೆ ಗೆಲುವು ತಂದುಕೊಡುವ ಭರವಸೆ ಮೂಡಿಸಿದ್ದರು. ಈ ಹಂತದಲ್ಲಿ ರಾಜೇಶ್ವರ ಗಾಯಕ್ವಾಡ್ ಹಾಸಿನಿ ವಿಕೆಟ್ ಪಡೆದರೆ, ಪೂಜಾ ವಸ್ತ್ರಾಕರ್ ನೀಲಾಕ್ಷಿಗೆ ಪೆವಿಲಿಯನ್ ಹಾದಿ ತೊರಿಸಿದರು.

ಈ ಎರಡು ವಿಕೆಟ್ ಸಿಗುತ್ತಿದ್ದಂತೆ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಟೀಮ್ ಇಂಡಿಯಾ ಬೌಲರ್​ಗಳು ಶ್ರೀಲಂಕಾ ತಂಡದ ರನ್ ಗತಿಯನ್ನು ನಿಯಂತ್ರಿಸಿದರು. ಅಲ್ಲದೆ 20 ಓವರ್​ಗಳಲ್ಲಿ 8 ವಿಕೆಟ್​ ಕಬಳಿಸಿ 97 ರನ್​ಗಳಿಗೆ ಶ್ರೀಲಂಕಾ ತಂಡವನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಟೀಮ್ ಇಂಡಿಯಾ ಫೈನಲ್ ಪಂದ್ಯದಲ್ಲಿ 16 ರನ್​ಗಳ ರೋಚಕ ಜಯ ಸಾಧಿಸಿತು.

ಈ ಗೆಲುವಿನೊಂದಿಗೆ ಭಾರತೀಯ ವನಿತೆಯರು ಏಷ್ಯನ್ ಗೇಮ್ಸ್​ನಲ್ಲಿ ಚಿನ್ನದ ಪದಕಕ್ಕೆ ಕೊರೊಳೊಡ್ಡಿದ್ದಾರೆ. ಅತ್ತ ರನ್ನರ್ ಅಪ್ ಆಗಿ ಶ್ರೀಲಂಕಾ ತಂಡ ಬೆಳ್ಳಿ ಪದಕ ಗೆದ್ದರೆ, 3ನೇ ಸ್ಥಾನ ಪಡೆದಿರುವ ಬಾಂಗ್ಲಾದೇಶ್ ಮಹಿಳಾ ತಂಡ ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದೆ.

ಟೀಮ್ ಇಂಡಿಯಾ ಪ್ಲೇಯಿಂಗ್ 11: ಸ್ಮೃತಿ ಮಂಧಾನ , ಶಫಾಲಿ ವರ್ಮಾ , ಜೆಮಿಮಾ ರೋಡ್ರಿಗಸ್ , ಹರ್ಮನ್‌ಪ್ರೀತ್ ಕೌರ್ (ನಾಯಕಿ) , ರಿಚಾ ಘೋಷ್ (ವಿಕೆಟ್ ಕೀಪರ್) , ದೀಪ್ತಿ ಶರ್ಮಾ , ದೇವಿಕಾ ವೈದ್ಯ , ಅಮಂಜೋತ್ ಕೌರ್ , ಪೂಜಾ ವಸ್ತ್ರಾಕರ್ , ಟೈಟಾಸ್ ಸಾಧು , ರಾಜೇಶ್ವರಿ ಗಾಯಕ್ವಾಡ್.

ಇದನ್ನೂ ಓದಿ: ಏಷ್ಯನ್ ಗೇಮ್ಸ್​: ಬರೋಬ್ಬರಿ 16 ಗೋಲು ಬಾರಿಸಿ ಅಮೋಘ ಗೆಲುವು ದಾಖಲಿಸಿದ ಭಾರತ

ಶ್ರೀಲಂಕಾ ಪ್ಲೇಯಿಂಗ್ 11: ಚಾಮರಿ ಅಟ್ಟಾಪಟ್ಟು (ನಾಯಕಿ) , ಅನುಷ್ಕಾ ಸಂಜೀವನಿ (ವಿಕೆಟ್ ಕೀಪರ್) , ವಿಶ್ಮಿ ಗುಣರತ್ನೆ , ನೀಲಾಕ್ಷಿ ಡಿ ಸಿಲ್ವಾ , ಹಾಸಿನಿ ಪೆರೇರಾ , ಓಷದಿ ರಣಸಿಂಗ್ , ಇನೋಕಾ ರಣವೀರ , ಕವಿಶಾ ದಿಲ್ಹಾರಿ , ಉದೇಶಿಕಾ ಪ್ರಬೋಧನಿ , ಸುಗಂಧಿಕಾ ಪ್ರಿಯಾಶಿ ಕುಮಾರಿ.

Published On - 2:42 pm, Mon, 25 September 23