ಏಕದಿನ ವಿಶ್ವಕಪ್ಗಾಗಿ ಭಾರತಕ್ಕೆ ಬರಲು ಪಾಕಿಸ್ತಾನ್ ತಂಡ ಸಜ್ಜಾಗಿದೆ. ಮಂಗಳವಾರ ಮಧ್ಯರಾತ್ರಿ ದುಬೈನಿಂದ ಪಾಕ್ ತಂಡ ಹೊರಡಲಿದ್ದು, ಬುಧವಾರ ಹೈದಾರಾಬಾದ್ಗೆ ತಲುಪಲಿದ್ದಾರೆ. ಇದಕ್ಕೂ ಮುನ್ನ ಪಾಕ್ ತಂಡದ ನಾಯಕ ಬಾಬರ್ ಆಝಂ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಈ ವೇಳೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಅದರಲ್ಲೂ ಏಷ್ಯಾಕಪ್ ಬೆನ್ನಲ್ಲೇ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಪಾಕಿಸ್ತಾನ್ ತಂಡದ ಡ್ರೆಸ್ಸಿಂಗ್ ರೂಮ್ ಜಗಳದ ಬಗ್ಗೆ ಮೊದಲ ಬಾರಿಗೆ ಮೌನ ಮುರಿದ್ದಾರೆ.
ಈ ಬಗ್ಗೆ ಮಾತನಾಡಿದ ಬಾಬರ್ ಆಝಂ, ಪಾಕ್ ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಕೇವಲ ವದಂತಿ. ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ತಂಡದ ಪ್ರದರ್ಶನ ನಿರಾಶಾದಾಯಕವಾಗಿತ್ತು ನಿಜ. ಆದರೆ ಇದರ ನಂತರ ಪಾಕಿಸ್ತಾನ್ ತಂಡದಲ್ಲಿ ಒಡಕು ಉಂಟಾಗಿದೆ. ಆಟಗಾರರು ಪರಸ್ಪರ ಜಗಳವಾಡಿದ್ದಾರೆ ಎಂಬುದು ಕೇವಲ ಸುಳ್ಳು ಸುದ್ದಿಗಳು.
ಮಾಧ್ಯಮಗಳು ನಮ್ಮ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸುತ್ತವೆ. ಪಾಕಿಸ್ತಾನಿ ಆಟಗಾರರಲ್ಲಿ ಯಾವುದೇ ವೈಮನಸ್ಸಿಲ್ಲ. ಆಟಗಾರರ ನಡುವೆ ಜಗಳ ಕೂಡ ಆಗಿಲ್ಲ. ಎಲ್ಲಾ ಆಟಗಾರರು ಪರಸ್ಪರ ಪ್ರೀತಿಯಿಂದ ಒಂದೇ ಕುಟುಂಬದಂತಿದ್ದಾರೆ. ಇದಾಗ್ಯೂ ಸುಳ್ಳು ಸುದ್ದಿಗಳನ್ನು ಹರಿಬಿಡಲಾಗುತ್ತಿದೆ ಎಂದು ಬಾಬರ್ ಆಝಂ ತಿಳಿಸಿದರು.
ಇದೇ ವೇಳೆ ಈ ಬಾರಿಯ ಏಕದಿನ ವಿಶ್ವಕಪ್ನಲ್ಲಿ ಪಾಕ್ ತಂಡವು ಟಾಪ್-4 ನಲ್ಲಿ ಕಾಣಿಸಿಕೊಳ್ಳಲಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಬಾಬರ್, ಅಗ್ರ ನಾಲ್ಕು ಎಂಬುದು ತುಂಬಾ ದೂರ. ನಾವು ನಂಬರ್ 1 ಆಗುತ್ತೇವೆ. ವಿಶ್ವಕಪ್ ಗೆಲ್ಲುವ ಸಂಪೂರ್ಣ ವಿಶ್ವಾಸವಿದೆ ಎಂದು ಪಾಕಿಸ್ತಾನ್ ತಂಡದ ನಾಯಕ ತಿಳಿಸಿದ್ದಾರೆ.
ಪಾಕ್ ತಂಡದ ಎಲ್ಲಾ 15 ಆಟಗಾರರ ಮೇಲೆ ನನಗೆ ವಿಶ್ವಾಸವಿದೆ. ತನಗಿಂತ ಆಟಗಾರರ ಮೇಲೆ ನನಗೆ ಹೆಚ್ಚಿನ ವಿಶ್ವಾಸವಿದೆ ಎಂದು ಬಾಬರ್ ಆಝಂ ಹೇಳಿದ್ದಾರೆ. ಏಕೆಂದರೆ ಆಟಗಾರರು ನಿರಂತರವಾಗಿ ತಂಡವನ್ನು ಪಂದ್ಯಗಳನ್ನು ಗೆಲ್ಲುವಂತೆ ಮಾಡಿದ್ದಾರೆ. ಹೀಗಾಗಿಯೇ ಪಾಕಿಸ್ತಾನ್ ತಂಡ ಎಲ್ಲೆಡೆ ಗೆದ್ದು ನಂಬರ್ 1 ಸ್ಥಾನಕ್ಕೇರಿದೆ. ಹೀಗಾಗಿ ಈ ತಂಡದ ಮೇಲೆ ಸಂಪೂರ್ಣ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ನಂಬರ್ 1 ಪಟ್ಟಕ್ಕಾಗಿ ಏಕದಿನ ವಿಶ್ವಕಪ್ನಲ್ಲಿ ಬಾಬರ್-ಶುಭ್ಮನ್ ನಡುವೆ ಪೈಪೋಟಿ