ನಂಬರ್ 1 ಪಟ್ಟಕ್ಕಾಗಿ ಏಕದಿನ ವಿಶ್ವಕಪ್ನಲ್ಲಿ ಬಾಬರ್-ಶುಭ್ಮನ್ ನಡುವೆ ಪೈಪೋಟಿ
Babar Azam vs Shubman Gill: ಬಾಬರ್-ಶುಭ್ಮನ್ ಗಿಲ್ ನಡುವೆ ಯಾರು ನಂಬರ್ 1 ಎಂಬುದರ ಸ್ಪಷ್ಟ ಚಿತ್ರಣ ಭಾರತ-ಪಾಕಿಸ್ತಾನ್ ನಡುವಿನ ಪಂದ್ಯದ ಬಳಿಕ ದೊರೆಯಲಿದೆ. ಏಕೆಂದರೆ ಪಾಕಿಸ್ತಾನ್ ತಂಡವು ಅಕ್ಟೋಬರ್ 6 ರಂದು ನೆದರ್ಲೆಂಡ್ಸ್ ವಿರುದ್ದ ತನ್ನ ಮೊದಲ ಪಂದ್ಯವನ್ನಾಡಲಿದೆ.
ಈ ಬಾರಿಯ ಏಕದಿನ ವಿಶ್ವಕಪ್ನಲ್ಲಿ ಬಾಬರ್ ಆಝಂ ಹಾಗೂ ಶುಭ್ಮನ್ ಗಿಲ್ ನಡುವೆ ನಂಬರ್ 1 ಪಟ್ಟಕ್ಕಾಗಿ ಭರ್ಜರಿ ಪೈಪೋಟಿ ಕಂಡು ಬರಲಿದೆ. ಏಕೆಂದರೆ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಪಾಕ್ ತಂಡದ ನಾಯಕ ಬಾಬರ್ ಅಗ್ರಸ್ಥಾನದಲ್ಲಿದ್ದರೆ, ಟೀಮ್ ಇಂಡಿಯಾ ಆರಂಭಿಕ ಶುಭ್ಮನ್ ಗಿಲ್ ದ್ವಿತೀಯ ಸ್ಥಾನದಲ್ಲಿದ್ದಾರೆ. ಆದರೆ ಮೊದಲೆರಡು ಸ್ಥಾನಗಳ ನಡುವಣ ರೇಟಿಂಗ್ ಪಾಯಿಂಟ್ಸ್ ವ್ಯತ್ಯಾಸ ಕೇವಲ 43 ಅಂಕಗಳು ಮಾತ್ರ.
ಪ್ರಸ್ತುತ ಏಕದಿನ ಬ್ಯಾಟರ್ಗಳ ಶ್ರೇಯಾಂಕ ಪಟ್ಟಿಯಲ್ಲಿ 857 ರೇಟಿಂಗ್ನೊಂದಿಗೆ ಬಾಬರ್ ಆಝಂ ಮೊದಲ ಸ್ಥಾನದಲ್ಲಿದ್ದಾರೆ. ಇನ್ನು ದ್ವಿತೀಯ ಸ್ಥಾನದಲ್ಲಿರುವ ಶುಭ್ಮನ್ ಗಿಲ್ 814 ರೇಟಿಂಗ್ ಹೊಂದಿದ್ದಾರೆ. ಅತ್ತ ಏಕದಿನ ವಿಶ್ವಕಪ್ನ ಮೊದಲ ಸುತ್ತಿನಲ್ಲಿ ಪ್ರತಿ ತಂಡಗಳು ಒಟ್ಟು 9 ಪಂದ್ಯಗಳನ್ನಾಡಲಿದೆ. ಹೀಗಾಗಿ ಏಕದಿನ ವಿಶ್ವಕಪ್ ಮುಕ್ತಾಯದ ವೇಳೆಗೆ ಯಾರು ನಂಬರ್ 1 ಎಂಬುದು ಕೂಡ ನಿರ್ಧಾರವಾಗಲಿದೆ.
ಶುಭ್ಮನ್ಗೆ ಉತ್ತಮ ಅವಕಾಶ:
ಏಕದಿನ ವಿಶ್ವಕಪ್ ಮೂಲಕ ಏಕದಿನ ಬ್ಯಾಟರ್ಗಳ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ಶುಭ್ಮನ್ ಗಿಲ್ಗೆ ಅತ್ಯುತ್ತಮ ಅವಕಾಶವಿದೆ. ಏಕೆಂದರೆ ಈ ಬಾರಿಯ ವಿಶ್ವಕಪ್ ನಡೆಯುತ್ತಿರುವುದು ಭಾರತದಲ್ಲಿ. ಅದರಲ್ಲೂ ತವರು ಮೈದಾನದಲ್ಲಿ ಅಬ್ಬರಿಸುವ ಗಿಲ್ ಮೊದಲ ಪಂದ್ಯದಲ್ಲೇ 22+ ಸ್ಕೋರ್ಗಳಿಸಿದರೆ ಬಾಬರ್ ಆಝಂ ದ್ವಿತೀಯ ಸ್ಥಾನಕ್ಕಿಳಿಯಬಹುದು.
ಇದಾಗ್ಯೂ ಏಕದಿನ ವಿಶ್ವಕಪ್ ಮೊದಲೆರಡು ಪಂದ್ಯಗಳು ಶುಭ್ಮನ್ ಗಿಲ್ ಪಾಲಿಗೆ ನಿರ್ಣಾಯಕ. ಏಕೆಂದರೆ ಅತ್ತ ಬಾಬರ್ ಆಝಂ ಮೊದಲ ಎರಡು ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರೆ ಅಗ್ರಸ್ಥಾನ ಕಾಯ್ದುಕೊಳ್ಳಬಹುದು.
ಅಕ್ಟೋಬರ್ 14 ರ ಬಳಿಕ ಸ್ಪಷ್ಟ ಚಿತ್ರಣ:
ಶುಭ್ಮನ್ ಗಿಲ್ ಮೊದಲ ಪಂದ್ಯದಲ್ಲೇ 22 ಕ್ಕಿಂತ ಹೆಚ್ಚು ರನ್ ಕಲೆಹಾಕಿದರೆ ಅಗ್ರಸ್ಥಾನಕ್ಕೇರುವ ಅವಕಾಶ ಹೊಂದಿದ್ದಾರೆ. ಆದರೆ ಇದು ಖಾಯಂ ಆಗಿರುವ ಸಾಧ್ಯತೆಯಿದೆ. ಹೀಗಾಗಿ ಇಬ್ಬರ ನಡುವೆ ಯಾರು ನಂಬರ್ 1 ಎಂಬುದರ ಸ್ಪಷ್ಟ ಚಿತ್ರಣ ಭಾರತ-ಪಾಕಿಸ್ತಾನ್ ನಡುವಿನ ಪಂದ್ಯದ ಬಳಿಕ ದೊರೆಯಲಿದೆ. ಏಕೆಂದರೆ ಪಾಕಿಸ್ತಾನ್ ತಂಡವು ಅಕ್ಟೋಬರ್ 6 ರಂದು ನೆದರ್ಲೆಂಡ್ಸ್ ವಿರುದ್ದ ತನ್ನ ಮೊದಲ ಪಂದ್ಯವನ್ನಾಡಲಿದೆ.
ಇತ್ತ ಟೀಮ್ ಇಂಡಿಯಾ ಅಕ್ಟೋಬರ್ 8 ರಂದು ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯುವ ಮೂಲಕ ಏಕದಿನ ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಇನ್ನು ಪಾಕ್ ತಂಡ ತನ್ನ 2ನೇ ಪಂದ್ಯವನ್ನು ಅಕ್ಟೋಬರ್ 10 ರಂದು ಶ್ರೀಲಂಕಾ ವಿರುದ್ಧ ಆಡಲಿದೆ. ಇನ್ನು ಭಾರತ ತಂಡವು ಅಕ್ಟೋಬರ್ 11 ರಂದು ಅಫ್ಘಾನಿಸ್ತಾನ್ ವಿರುದ್ಧ ತನ್ನ 2ನೇ ಪಂದ್ಯವನ್ನಾಡಲಿದೆ.
ಅಂದರೆ ಈ ಎರಡು ಪಂದ್ಯಗಳ ಮೂಲಕ ಬಾಬರ್ ಆಝಂ ಅಗ್ರಸ್ಥಾನವನ್ನು ಕಾಯ್ದುಕೊಳ್ಳಬಹುದು. ಅತ್ತ ಭಾರತ ತಂಡದ ಮೊದಲೆರಡು ಪಂದ್ಯಗಳಲ್ಲಿ ಮಿಂಚುವ ಮೂಲಕ ಶುಭ್ಮನ್ ಗಿಲ್ಗೂ ಅಗ್ರಸ್ಥಾನಕ್ಕೇರುವ ಅವಕಾಶವಿದೆ.
ಒಂದು ವೇಳೆ ಇಬ್ಬರು ಆಟಗಾರರು ತಮ್ಮ ಮೊದಲೆರಡು ಪಂದ್ಯಗಳಲ್ಲಿ ಮಿಂಚಿದರೆ ಶ್ರೇಯಾಂಕ ಪಟ್ಟಿ ಯಥಾಸ್ಥಿತಿಯಲ್ಲೇ ಮುಂದುವರೆಯಲಿದೆ. ಇದಾಗ್ಯೂ ಅಕ್ಟೋಬರ್ 14 ರಂದು ಮೂರನೇ ಪಂದ್ಯದಲ್ಲಿ ಭಾರತ-ಪಾಕಿಸ್ತಾನ್ ಮುಖಾಮುಖಿಯಾಗಲಿದೆ.
ಈ ಪಂದ್ಯದಲ್ಲಿ ಮಿಂಚುವ ಆಟಗಾರ ಏಕದಿನ ಬ್ಯಾಟರ್ಗಳ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವುದು ಬಹುತೇಕ ಖಚಿತ ಎನ್ನಬಹುದು. ಏಕೆಂದರೆ ಪ್ರತಿ ಬುಧವಾರ ಐಸಿಸಿ ಶ್ರೇಯಾಂಕ ಪಟ್ಟಿಗಳನ್ನು ಅಪ್ಡೇಟ್ ಮಾಡುತ್ತದೆ. ಭಾರತ ಮತ್ತು ಪಾಕಿಸ್ತಾನದ ಪಂದ್ಯದ ಬಳಿಕ ಅಕ್ಟೋಬರ್ 18 ರಂದು ಶ್ರೇಯಾಂಕ ಪಟ್ಟಿ ಅಪ್ಡೇಟ್ ಆಗಲಿದೆ. ಇದರ ನಡುವೆ ಭಾರತ ಹಾಗೂ ಪಾಕಿಸ್ತಾನ್ ತಂಡಗಳಿಗೆ ಯಾವುದೇ ಪಂದ್ಯವಿಲ್ಲ.
ಇದನ್ನೂ ಓದಿ: ODI World Cup 2023 Schedule: ಏಕದಿನ ವಿಶ್ವಕಪ್ನ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ
ಹೀಗಾಗಿ ಅಕ್ಟೋಬರ್ 14 ರಂದು ನಡೆಯಲಿರುವ ಇಂಡೊ-ಪಾಕ್ ಕ್ರಿಕೆಟ್ ಕದನದ ಬಳಿಕ ಏಕದಿನ ಕ್ರಿಕೆಟ್ನ ನಂಬರ್ 1 ಬ್ಯಾಟರ್ ಯಾರು ಎಂಬುದರ ಸ್ಪಷ್ಟ ಚಿತ್ರಣವಂತು ಸಿಗಲಿದೆ. ಇದಾಗ್ಯೂ ಈ ಟೂರ್ನಿಯುದ್ದಕ್ಕೂ ಬಾಬರ್ ಹಾಗೂ ಶುಭ್ಮನ್ ಗಿಲ್ ನಡುವೆ ಅಗ್ರಸ್ಥಾನಕ್ಕಾಗಿ ಪೈಪೋಟಿ ಕಂಡು ಬಂದರೂ ಅಚ್ಚರಿಪಡಬೇಕಿಲ್ಲ.
Published On - 3:59 pm, Tue, 26 September 23