T20 World Cup 2022: ಟಿ20 ವಿಶ್ವಕಪ್ನ 24ನೇ ಪಂದ್ಯದಲ್ಲಿ ಬಲಿಷ್ಠ ಪಾಕಿಸ್ತಾನ್ (Pakistan vs Zimbabwe) ತಂಡಕ್ಕೆ ಸೋಲುಣಿಸಿ ಜಿಂಬಾಬ್ವೆ ತಂಡವು ಹೊಸ ಇತಿಹಾಸ ಬರೆದಿದೆ. ಪರ್ತ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ರಣರೋಚಕ ಪಂದ್ಯದಲ್ಲಿ ಜಿಂಬಾಬ್ವೆ ತಂಡವು 1 ರನ್ಗಳ ರೋಚಕ ಜಯ ಸಾಧಿಸಿತು. ಇತ್ತ ಐತಿಹಾಸಿಕ ಗೆಲುವು ದಕ್ಕುತ್ತಿದ್ದಂತೆ ಜಿಂಬಾಬ್ವೆ ತಂಡದ ಆಟಗಾರರು ಮೈದಾನದಲ್ಲಿ ಕುಣಿದು ಕುಪ್ಪಳಿಸಿದರು. ಆದರೆ ಅತ್ತ ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಜಂ ಡಗೌಟ್ನಲ್ಲಿ ಭಾವುಕರಾಗಿ ಕಂಡು ಬಂದರು. ಅಲ್ಲದೆ ಪಾಕ್ ನಾಯಕ ಕಣ್ಣು ಒರೆಸುತ್ತಿರುವ ಫೋಟೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಏಕೆಂದರೆ ಈ ಬಾರಿ ಟಿ20 ವಿಶ್ವಕಪ್ ಗೆಲ್ಲುವ ಹುಮ್ಮಸ್ಸಿನೊಂದಿಗೆ ಆಗಮಿಸಿದ್ದ ಪಾಕಿಸ್ತಾನ್ ತಂಡವು ಆಡಿದ ಮೊದಲ ಎರಡು ಪಂದ್ಯಗಳಲ್ಲಿ ಸೋತಿದೆ. ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಸೋತರೆ, 2ನೇ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಶರಣಾಗಿದೆ. ಹೀಗಾಗಿ ಸೆಮಿಫೈನಲ್ಗೇರುವುದು ಕಷ್ಟಸಾಧ್ಯ ಎಂದೇ ಹೇಳಬಹುದು.
ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಜಿಂಬಾಬ್ವೆ ತಂಡವು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಮಧುವರೆ ಹಾಗೂ ನಾಯಕ ಕ್ರೇಗ್ ಇರ್ವಿನ್ ಮೊದಲ ವಿಕೆಟ್ಗೆ 42 ರನ್ಗಳ ಜೊತೆಯಾಟವಾಡಿದರು. ಆದರೆ ಈ ವೇಳೆ ಕ್ರೇಗ್ (19) ಔಟಾದರೆ, ಇದರ ಬೆನ್ನಲ್ಲೇ ಮಧುವರೆ (17) ವಿಕೆಟ್ ಒಪ್ಪಿಸಿದರು.
ಆ ಬಳಿಕ ನಾಟಕೀಯ ಕುಸಿತಕ್ಕೆ ಒಳಗಾಗಿದ್ದ ಜಿಂಬಾಬ್ವೆ ತಂಡಕ್ಕೆ ಆಸರೆಯಾಗಿದ್ದು ಸೀನ್ ವಿಲಿಯಮ್ಸ್. 31 ರನ್ ಬಾರಿಸುವ ಮೂಲಕ ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್ ಕಚ್ಚಿ ನಿಲ್ಲುವ ಮೂಲಕ ತಂಡವನ್ನು ದಿಢೀರ್ ಕುಸಿತದಿಂದ ಪಾರು ಮಾಡಿದರು. ಇದಾಗ್ಯೂ ಮತ್ತೊಮ್ಮೆ ಕುಸಿತಕ್ಕೊಳಗಾದ ಜಿಂಬಾಬ್ವೆ ತಂಡವು 100 ರನ್ಗಳ ಒಳಗೆ ಆಲೌಟ್ ಆಗುವ ಭೀತಿ ಎದುರಿಸಿತ್ತು.
ಆದರೆ ಅಂತಿಮ ಹಂತದಲ್ಲಿ ಬ್ರಾಡ್ ಇವನ್ಸ್ 15 ಎಸೆತಗಳಲ್ಲಿ 19 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು ನೂರರ ಗಡಿದಾಟಿಸಿದರು. ಅದರಂತೆ ನಿಗದಿತ 20 ಓವರ್ಗಳಲ್ಲಿ ಜಿಂಬಾಬ್ವೆ ತಂಡವು 8 ವಿಕೆಟ್ ನಷ್ಟಕ್ಕೆ 130 ರನ್ ಕಲೆಹಾಕಿತು. ಪಾಕ್ ಪರ ಮೊಹಮ್ಮದ್ ವಾಸಿಂ ಜೂನಿಯರ್ 4 ಓವರ್ಗಳಲ್ಲಿ 24 ರನ್ ನೀಡಿ 4 ವಿಕೆಟ್ ಕಬಳಿಸಿ ಮಿಂಚಿದರು.
ಇನ್ನು 131 ರನ್ಗಳ ಸುಲಭ ಗುರಿ ಬೆನ್ನತ್ತಿದ ಪಾಕಿಸ್ತಾನ್ ತಂಡದ ಆರಂಭಿಕರನ್ನು ಕಾಡುವಲ್ಲಿ ಜಿಂಬಾಬ್ವೆ ವೇಗಿಗಳು ಯಶಸ್ವಿಯಾದರು. ಅದರಂತೆ ಪವರ್ಪ್ಲೇನಲ್ಲಿ ಬಾಬರ್ ಆಜಂ (4) ವಿಕೆಟ್ ಪಡೆಯುವ ಮೂಲಕ ಬ್ರಾಡ್ ಇವನ್ಸ್ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಮೊಹಮ್ಮದ್ ರಿಜ್ವಾನ್ (14) ಕೂಡ ವಿಕೆಟ್ ಒಪ್ಪಿಸಿದರು. ಅಷ್ಟೇ ಅಲ್ಲದೆ ಮೊದಲ 6 ಓವರ್ಗಳಲ್ಲಿ ನೀಡಿದ್ದು ಕೇವಲ 28 ರನ್ಗಳು ಮಾತ್ರ. ಆ ಬಳಿಕ ಬಂದ ಇಫ್ತಿಕರ್ ಕೇವಲ 5 ರನ್ಗಳಿಗೆ ಇನಿಂಗ್ಸ್ ಅಂತ್ಯಗೊಳಿಸಿದರು. ಈ ಹಂತದಲ್ಲಿ ಜೊತೆಯಾದ ಶಾನ್ ಮಸೂದ್ ಹಾಗೂ ಶಾದಾಬ್ ಖಾನ್ ಉತ್ತಮ ಜೊತೆಯಾಟವಾಡಿದರು.
ಸಿಕಂದರ್ ರಾಝ ಮ್ಯಾಜಿಕ್:
ಈ ವೇಳೆ ದಾಳಿಗಿಳಿದ ಸಿಕಂದರ್ ರಾಝ ಶಾದಾಬ್ (17) ವಿಕೆಟ್ ಪಡೆಯುವ ಮೂಲಕ ಮಹತ್ವದ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಹೈದರ್ ಅಲಿಯನ್ನೂ ಕೂಡ ಎಲ್ಬಿ ಬಲೆಗೆ ಬೀಳಿಸಿದ ಸಿಕಂದರ್ ರಾಝ ಜಿಂಬಾಬ್ವೆ ಆಟಗಾರರಿಗೆ ಗೆಲ್ಲುವ ಹುಮ್ಮಸ್ಸು ಮೂಡಿಸಿದರು. ಇದಾಗ್ಯೂ ಪಾಕಿಸ್ತಾನ್ ತಂಡವು ಎಚ್ಚರಿಕೆ ಆಟ ಪ್ರದರ್ಶಿಸಿದರು. 15 ಓವರ್ಗಳಲ್ಲಿ 90 ರ ಗಡಿದಾಟಿದ್ದ ಪಾಕ್ ತಂಡವು ಗೆಲ್ಲುವ ವಿಶ್ವಾಸದಲ್ಲಿತ್ತು.
ಈ ವೇಳೆ ಮತ್ತೆ ದಾಳಿಗಿಳಿದ ಸಿಕಂದರ್ ರಾಝ ಶಾನ್ ಮಸೂದ್ (44) ಅವರ ಮಹತ್ವದ ವಿಕೆಟ್ ಪಡೆದು ಪಂದ್ಯದ ಚಿತ್ರಣ ಬದಲಿಸಿದರು. ಪರಿಣಾಮ ಕೊನೆಯ 2 ಓವರ್ಗಳಲ್ಲಿ ಪಾಕಿಸ್ತಾನ್ ತಂಡಕ್ಕೆ 22 ರನ್ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ಮೊಹಮ್ಮದ್ ನವಾಜ್ ನಗ್ವಾರ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದರು. ಅಲ್ಲದೆ 19ನೇ ಓವರ್ನಲ್ಲಿ 11 ರನ್ ಕಲೆಹಾಕಿದರು.
ಪರಿಣಾಮ ಅಂತಿಮ 6 ಎಸೆತಗಳಲ್ಲಿ 11 ರನ್ಗಳ ಅವಶ್ಯಕತೆಯಿತ್ತು. ಬ್ರಾಡ್ ಇವನ್ಸ್ ಎಸೆದ ಈ ಓವರ್ನ ಮೊದಲ ಎಸೆತದಲ್ಲಿ ನವಾಜ್ ಭರ್ಜರಿ ಹೊಡೆತ ಬಾರಿಸಿದರು. ಆದರೆ ಅತ್ಯುತ್ತಮ ಫೀಲ್ಡಿಂಗ್ ಮೂಲಕ ಜಿಂಬಾಬ್ವೆ ಫೀಲ್ಡರ್ ಫೋರ್ ತಡೆದರು. ಇದಾಗ್ಯೂ 3 ರನ್ ಓಡಿದರು. 2ನೇ ಎಸೆತದಲ್ಲಿ ವಾಸಿಂ ಫೋರ್ ಬಾರಿಸುವ ಮೂಲಕ ಗೆಲ್ಲುವ ಭರವಸೆ ಹೆಚ್ಚಿಸಿದರು. ಅದರಂತೆ ಕೊನೆಯ 3 ಎಸೆತಗಳಲ್ಲಿ 4 ರನ್ ಬೇಕಿತ್ತು. ಈ ವೇಳೆ ವಾಸಿಂ 1 ರನ್ ಕಲೆಹಾಕಿದರು. ಇನ್ನು 4ನೇ ಎಸೆತದಲ್ಲಿ ನವಾಜ್ ಯಾವುದೇ ರನ್ ತೆಗೆಯಲು ಸಾಧ್ಯವಾಗಿಲ್ಲ. 5ನೇ ಎಸೆತದಲ್ಲಿ ಕ್ಯಾಚ್ ನೀಡುವ ಮೂಲಕ ನವಾಜ್ ಹೊರನಡೆದರು.
ಅದರಂತೆ ಅಂತಿಮ ಎಸೆತದಲ್ಲಿ ಪಾಕಿಸ್ತಾನ್ ತಂಡಕ್ಕೆ 3 ರನ್ ಬೇಕಿತ್ತು. ಈ ವೇಳೆ ಬೌಂಡರಿ ಲೈನ್ನತ್ತ ಬಾರಿಸಿದ ಶಾಹೀನ್ ಅಫ್ರಿದಿ 2 ರನ್ ಓಡುವ ಯತ್ನ ಮಾಡಿದರೂ, ವಿಕೆಟ್ ಕೀಪರ್ ಕಡೆಯಿಂದ ರನೌಟ್ ಆದರು. ಅದರಂತೆ ಜಿಂಬಾಬ್ವೆ ತಂಡವು 1 ರನ್ಗಳ ರೋಚಕ ಜಯ ಸಾಧಿಸಿ ಹೊಸ ಇತಿಹಾಸ ಬರೆಯಿತು.
#PAKvsZIM
Pakistan has qualified for Karachi airport. ??.
Zimbabwe gave them tickets.
Nawaz, shadab khan, crease, #PAKvsZIM #T20WC2022 #T20worldcup22
Babar Azam, rizwan pic.twitter.com/k3hV0V7loh— Abdul Salam?? (@AbdulSalamveer) October 27, 2022
ಜಿಂಬಾಬ್ವೆ ಪರ 4 ಓವರ್ಗಳಲ್ಲಿ ಕೇವಲ 25 ರನ್ ನೀಡಿ ಮಹತ್ವದ 3 ವಿಕೆಟ್ ಕಬಳಿಸಿದ ಸಿಕಂದರ್ ರಾಝ ಗೆಲುವಿನ ರೂವಾರಿಯಾದರು. ಅಲ್ಲದೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಕೂಡ ಅವರಿಗೆ ಒಲಿಯಿತು. ಅಂದಹಾಗೆ ಟಿ20 ವಿಶ್ವಕಪ್ ಇತಿಹಾಸದಲ್ಲೇ ಪಾಕಿಸ್ತಾನ್ ವಿರುದ್ಧ ಜಿಂಬಾಬ್ವೆ ತಂಡದ ಮೊದಲ ಗೆಲುವು ಎಂಬುದು ವಿಶೇಷ.