
ಬಾಂಗ್ಲಾದೇಶ್ ವಿರುದ್ಧದ ಟಿ20 ಸರಣಿಗಾಗಿ ಪಾಕಿಸ್ತಾನ್ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರ ಈ ತಂಡದಲ್ಲಿ ಪಾಕ್ ತಂಡದ ಮಾಜಿ ನಾಯಕ ಬಾಬರ್ ಆಝಂಗೆ ಸ್ಥಾನ ನೀಡಲಾಗಿಲ್ಲ ಎಂಬುದು ವಿಶೇಷ. ಹಾಗೆಯೇ ಮೊಹಮ್ಮದ್ ರಿಝ್ವಾನ್ ಅವರನ್ನು ಕೂಡ ಕೈ ಬಿಡಲಾಗಿದೆ. ಇದರ ಜೊತೆ ತಂಡದ ಪ್ರಮುಖ ವೇಗಿಯಾಗಿ ಗುರುತಿಸಿಕೊಂಡಿದ್ದ ಶಾಹೀನ್ ಅಫ್ರಿದಿ ಕೂಡ ಟಿ20 ತಂಡದಿಂದ ಹೊರಬಿದ್ದಿದ್ದಾರೆ.
ಚಾಂಪಿಯನ್ಸ್ ಟ್ರೋಫಿಯಲ್ಲಿನ ಕಳಪೆ ಪ್ರದರ್ಶನದ ಕಾರಣದಿಂದಾಗಿ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಪ್ರಮುಖ ಆಟಗಾರರನ್ನು ಮುಂಬರುವ ಟೂರ್ನಿಗೆ ಆಯ್ಕೆ ಮಾಡಿಲ್ಲ ಎಂದು ತಿಳಿದು ಬಂದಿದೆ. ಈ ಮೂಲಕ ಬಾಂಗ್ಲಾದೇಶ್ ವಿರುದ್ಧದ ಸರಣಿಗೆ ಯುವ ಪಡೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಇನ್ನು ಈ ಯುವ ಪಡೆಯನ್ನು ಮುನ್ನಡೆಸಲಿರುವುದು ಸಲ್ಮಾನ್ ಅಲಿ ಅಘಾ. ಹಾಗೆಯೇ ತಂಡದಲ್ಲಿ ಸ್ಟಾರ್ ಬ್ಯಾಟರ್ಗಳಾಗಿ ಫಖರ್ ಝಮಾನ್, ಸೈಮ್ ಅಯ್ಯೂಬ್, ಖುಷ್ದಿಲ್ ಶಾ ಕಾಣಿಸಿಕೊಂಡಿದ್ದಾರೆ. ಇವರ ಜೊತೆಗೆ ವಿಕೆಟ್ ಕೀಪರ್ಗಳಾಗಿ ಮೊಹಮ್ಮದ್ ಹ್ಯಾರಿಸ್ ಹಾಗೂ ಸಾಹಿಬ್ಝಾದ ಫರ್ಹಾನ್ ಆಯ್ಕೆಯಾಗಿದ್ದಾರೆ.
ಅದೇ ರೀತಿ ವೇಗಿಗಳಾಗಿ ಆಯ್ಕೆಯಾಗಿರುವುದು ಅಬ್ಬಾಸ್ ಅಫ್ರಿದಿ, ಫಹೀಮ್ ಅಶ್ರಫ್ ಹಾಗೂ ಮೊಹಮ್ಮದ್ ಹ್ಯಾರಿಸ್. ಇವರೊಂದಿಗೆ ಯುವ ಸ್ಪಿನ್ನರ್ ಸುಫಿಯಾನ್ ಮುಖೀಮ್ ಕೂಡ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅದರಂತೆ ಪಾಕಿಸ್ತಾನ್ ಟಿ20 ತಂಡ ಈ ಕೆಳಗಿನಂತಿದೆ…
ಪಾಕಿಸ್ತಾನ್ ಟಿ20 ತಂಡ: ಸಲ್ಮಾನ್ ಅಲಿ ಅಘಾ (ನಾಯಕ), ಅಬ್ರಾರ್ ಅಹ್ಮದ್, ಅಹ್ಮದ್ ದಾನಿಯಾಲ್, ಫಹೀಮ್ ಅಶ್ರಫ್, ಫಖರ್ ಝಮಾನ್, ಹಸನ್ ನವಾಝ್, ಹುಸೇನ್ ತಲತ್, ಖುಷ್ದಿಲ್ ಶಾ, ಅಬ್ಬಾಸ್ ಅಫ್ರಿದಿ, ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಝ್, ಸೈಮ್ ಅಯ್ಯೂಬ್, ಸುಫಿಯಾನ್ ಮುಖೀಮ್, ಸಲ್ಮಾನ್ ಮಿರ್ಝ, ಸಾಹಿಬ್ಝಾದ ಫರ್ಹಾನ್.
ಇದನ್ನೂ ಓದಿ: 29 ಸಿಕ್ಸ್, 30 ಫೋರ್: ವೈಭವ್ ಆರ್ಭಟಕ್ಕೆ ಗಿಲ್ ದಾಖಲೆ ಧೂಳೀಪಟ
ಬಾಂಗ್ಲಾದೇಶ್ ಹಾಗೂ ಪಾಕಿಸ್ತಾನ್ ನಡುವಣ ಟಿ20 ಸರಣಿಯು ಜುಲೈ 20 ರಿಂದ ಶುರುವಾಗಲಿದೆ. ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ ಆಯೋಜಿಸುತ್ತಿರುವ ಈ ಸರಣಿಯ ಎಲ್ಲಾ ಪಂದ್ಯಗಳು ಮಿರ್ಪುರ್ನ ಶೇರ್-ಎ-ಬಾಂಗ್ಲಾ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಜರುಗಲಿದೆ.