ಜಸ್ಪ್ರೀತ್ ಬುಮ್ರಾ ಇಲ್ಲದಿದ್ದಾಗ ಗೆಲ್ಲುವ ಟೀಮ್ ಇಂಡಿಯಾ: ಅಚ್ಚರಿ ಅನಿಸಿದರೂ ಇದುವೇ ಸತ್ಯ
India vs England: ಭಾರತ ಮತ್ತು ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯವು ಗುರುವಾರದಿಂದ (ಜುಲೈ 10) ಶುರುವಾಗಲಿದೆ. ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಕಣಕ್ಕಿಳಿಯಲಿದ್ದಾರೆ. ಇದಕ್ಕೂ ಮುನ್ನ ನಡೆದ ಎಡ್ಜ್ಬಾಸ್ಟನ್ ಟೆಸ್ಟ್ ಪಂದ್ಯದ ವೇಳೆ ಬುಮ್ರಾ ವಿಶ್ರಾಂತಿ ಪಡೆದುಕೊಂಡಿದ್ದರು.

ಹೆಡಿಂಗ್ಲೆ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ಸೋತಿದ್ದ ಟೀಮ್ ಇಂಡಿಯಾ ಎಡ್ಜ್ಬಾಸ್ಟನ್ನಲ್ಲಿ ಅಮೋಘ ಗೆಲುವು ದಾಖಲಿಸಿದೆ. ಈ ಐತಿಹಾಸಿಕ ಗೆಲುವು ದಕ್ಕಿರುವುದು ಜಸ್ಪ್ರೀತ್ ಬುಮ್ರಾ ಇಲ್ಲದೇ ಎಂಬುದು ವಿಶೇಷ. ಅಂದರೆ ಭಾರತ ತಂಡದ ಪ್ರಮುಖ ವೇಗಿ ಕಣಕ್ಕಿಳಿಯದಿದ್ದರೂ ಟೀಮ್ ಇಂಡಿಯಾ ಬರೋಬ್ಬರಿ 336 ರನ್ಗಳ ಭರ್ಜರಿ ಜಯ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಹೀಗೆ ಬುಮ್ರಾ ಇಲ್ಲದಿದ್ದರೂ ಭಾರತ ತಂಡ ಗೆಲ್ಲುತ್ತಿರುವುದು ಇದೇ ಮೊದಲೇನಲ್ಲ. ಅದರಲ್ಲೂ ಯಾರ್ಕರ್ ಸ್ಪೆಷಲಿಸ್ಟ್ ಆಡುವ ಬಳಗದಲ್ಲಿ ಕಾಣಿಸಿಕೊಳ್ಳದಿದ್ದಾಗ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡುತ್ತಾ ಬಂದಿದೆ. ಇದಕ್ಕೆ ಸಾಕ್ಷಿ ಈ ಅಂಕಿ ಅಂಶಗಳು.
ಜಸ್ಪ್ರೀತ್ ಬುಮ್ರಾ ಟೀಮ್ ಇಂಡಿಯಾ ಪರ ಈವರೆಗೆ 46 ಟೆಸ್ಟ್ ಪಂದ್ಯಗಳನ್ನಾಡಿದೆ. ಈ ವೇಳೆ ಟೀಮ್ ಇಂಡಿಯಾ ಗೆದ್ದಿರುವುದು 20 ಮ್ಯಾಚ್ಗಳಲ್ಲಿ ಮಾತ್ರ. ಅಲ್ಲದೆ 5 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. ಇನ್ನುಳಿದ 22 ಪಂದ್ಯಗಳಲ್ಲಿ ಭಾರತ ತಂಡ ಸೋತಿದೆ. ಅಂದರೆ ಜಸ್ಪ್ರೀತ್ ಬುಮ್ರಾ ಕಣಕ್ಕಿಳಿದ 46 ಮ್ಯಾಚ್ಗಳಲ್ಲಿ ಟೀಮ್ ಇಂಡಿಯಾ 22 ಪಂದ್ಯಗಳಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ.
ಇತ್ತ ಜಸ್ಪ್ರೀತ್ ಬುಮ್ರಾ ಟೆಸ್ಟ್ ಕ್ರಿಕೆಟ್ಗೆ ಎಂಟ್ರಿ ಕೊಟ್ಟ ಬಳಿಕ ಟೀಮ್ ಇಂಡಿಯಾ ಅವರಿಲ್ಲದೆ 27 ಟೆಸ್ಟ್ ಪಂದ್ಯಗಳನ್ನಾಡಿದೆ. ಈ ವೇಳೆ ಭಾರತ ತಂಡ ಬರೋಬ್ಬರಿ 19 ಮ್ಯಾಚ್ಗಳಲ್ಲಿ ಗೆಲುವು ದಾಖಲಿಸಿರುವುದು ವಿಶೇಷ. ಇನ್ನುಳಿದ 3 ಮ್ಯಾಚ್ಗಳನ್ನು ಡ್ರಾನಲ್ಲಿ ಅಂತ್ಯಗೊಳಿಸಿದೆ. ಅಂದರೆ ಬುಮ್ರಾ ಇಲ್ಲದಿದ್ದಾಗ ಟೀಮ್ ಇಂಡಿಯಾ ಸೋತಿರುವುದು ಕೇವಲ 7 ಪಂದ್ಯಗಳಲ್ಲಿ ಮಾತ್ರ.
ಇಲ್ಲಿ ಒಟ್ಟಾರೆ ಅಂಕಿ ಅಂಶಗಳನ್ನು ಗಮನಿಸಿದರೆ, ಜಸ್ಪ್ರೀತ್ ಬುಮ್ರಾ ಇಲ್ಲದಿರುವಾಗ ಟೀಮ್ ಇಂಡಿಯಾ ಗೆದ್ದಿರುವುದೇ ಹೆಚ್ಚು. ಬುಮ್ರಾ ಕಣಕ್ಕಿಳಿದ ಭಾರತ ತಂಡವು ಶೇ 43 ರಷ್ಟು ಟೆಸ್ಟ್ ಪಂದ್ಯಗಳನ್ನು ಮಾತ್ರ ಗೆದ್ದುಕೊಂಡಿದೆ. ಅವರ ಅನುಪಸ್ಥಿತಿಯ ನಡುವೆ ಟೀಮ್ ಇಂಡಿಯಾ ಶೇ.70 ರಷ್ಟು ಪಂದ್ಯಗಳಲ್ಲಿ ವಿಜಯ ಸಾಧಿಸಿದೆ.
ಅಂದರೆ ಇಲ್ಲಿ ಟೀಮ್ ಇಂಡಿಯಾ ಪಾಲಿಗೆ ಜಸ್ಪ್ರೀತ್ ಬುಮ್ರಾ ಅನಿವಾರ್ಯವಲ್ಲ ಎಂಬುದು ಸ್ಪಷ್ಟ. ಇದಕ್ಕೆ ತಾಜಾ ಸಾಕ್ಷಿ ಎಡ್ಜ್ಬಾಸ್ಟನ್ ಟೆಸ್ಟ್ ಪಂದ್ಯದಲ್ಲಿನ ಫಲಿತಾಂಶ. ಇದಾಗ್ಯೂ ಭಾರತದ ಬೌಲಿಂಗ್ ವಿಭಾಗ ಮತ್ತಷ್ಟು ಬಲಿಷ್ಠವಾಗಬೇಕಿದ್ದರೆ ಬುಮ್ರಾ ಅವರ ಅವಶ್ಯಕತೆಯಂತು ಇದೆ. ಆದರೆ ಇಲ್ಲಿ ಜಸ್ಪ್ರೀತ್ ಕಣಕ್ಕಿಳಿದಾಗ ಉಳಿದ ಬೌಲರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರುತ್ತಿಲ್ಲ ಎಂಬುದೇ ಸತ್ಯ.
ಈ ಒಂದು ತಪ್ಪನ್ನು ಟೀಮ್ ಇಂಡಿಯಾ ಸರಿಪಡಿಸಿಕೊಂಡರೆ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತ ತಂಡದ ಗೆಲುವಿನ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬಹುದು. ಅದರಲ್ಲೂ ಇದೀಗ ಟೀಮ್ ಇಂಡಿಯಾ ಕ್ರಿಕೆಟ್ ಕಾಶಿಯಲ್ಲಿ ಕಣಕ್ಕಿಳಿಯಲು ಸಜ್ಜಾಗುತ್ತಿದೆ. ಈ ಬಾರಿ ಲಾರ್ಡ್ಸ್ ಮೈದಾನದಲ್ಲಿ ಭಾರತ ತಂಡದ ಬೌಲಿಂಗ್ ವಿಭಾಗವನ್ನು ಮುನ್ನಡೆಸುವುದು ಜಸ್ಪ್ರೀತ್ ಬುಮ್ರಾ.
ಬುಮ್ರಾ ಜೊತೆ ಮೊಹಮ್ಮದ್ ಸಿರಾಜ್ ಹಾಗೂ ಆಕಾಶ್ ದೀಪ್ ಕೂಡ ದಾಳಿ ಸಂಘಟಿಸಲಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ಇದೇ ಮೊದಲ ಬಾರಿಗೆ ಲಾರ್ಡ್ಸ್ ಮೈದಾನದಲ್ಲಿ ಬ್ಯಾಕ್ ಟು ಬ್ಯಾಕ್ ಇಂಗ್ಲೆಂಡ್ ತಂಡಕ್ಕೆ ಸೋಲುಣಿಸಲಿದೆಯಾ ಕಾದು ನೋಡಬೇಕಿದೆ.
ಇದನ್ನೂ ಓದಿ: 29 ಸಿಕ್ಸ್, 30 ಫೋರ್: ವೈಭವ್ ಆರ್ಭಟಕ್ಕೆ ಗಿಲ್ ದಾಖಲೆ ಧೂಳೀಪಟ
ಅಂದಹಾಗೆ 2021 ರಲ್ಲಿ ಲಾರ್ಡ್ಸ್ ಮೈದಾನದಲ್ಲಿ ಕೊನೆಯ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ತಂಡವನ್ನು 151 ರನ್ಗಳಿಂದ ಮಣಿಸಿತ್ತು. ಈ ವೇಳೆ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದ್ದು ಮೊಹಮ್ಮದ್ ಸಿರಾಜ್. ಇದೀಗ ಬುಮ್ರಾ ಜೊತೆಗೂಡಿ ಸಿರಾಜ್ ಹಾಗೂ ಆಕಾಶ್ ದೀಪ್ ದಾಳಿ ಸಂಘಟಿಸಲಿದ್ದಾರೆ. ಹೀಗಾಗಿ ಈ ಬಾರಿ ಕೂಡ ಭಾರತ ತಂಡದಿಂದ ಭರ್ಜರಿ ಜಯವನ್ನು ನಿರೀಕ್ಷಿಸಬಹುದು.
Published On - 10:31 am, Wed, 9 July 25
