ಕ್ರಿಕೆಟ್ ಕಾಶಿಯಲ್ಲಿ ಟೀಮ್ ಇಂಡಿಯಾ ಗೆದ್ದಿದ್ದು ಕೇವಲ 3 ಬಾರಿ ಮಾತ್ರ, ಆದರೆ…
England vs India Test: ಭಾರತದ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಮ್ಯಾಚ್ನಲ್ಲಿ ಆತಿಥೇಯ ಇಂಗ್ಲೆಂಡ್ ತಂಡವು ಭರ್ಜರಿ ಗೆಲುವು ದಾಖಲಿಸಿತ್ತು. ಇನ್ನು ಎಡ್ಜ್ಬಾಸ್ಟನ್ನಲ್ಲಿ ಜರುಗಿದ ದ್ವಿತೀಯ ಪಂದ್ಯದಲ್ಲಿ ಆಂಗ್ಲರನ್ನು ಬಗ್ಗು ಬಡಿಯುವ ಮೂಲಕ ಟೀಮ್ ಇಂಡಿಯಾ ಹೊಸ ಇತಿಹಾಸ ನಿರ್ಮಿಸಿದೆ. ಇದೀಗ ಉಭಯ ತಂಡಗಳು ಮೂರನೇ ಪಂದ್ಯಕ್ಕಾಗಿ ಸಜ್ಜಾಗುತ್ತಿದೆ.

ಭಾರತ ಮತ್ತು ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯವು ಜುಲೈ 10 ರಿಂದ ಶುರುವಾಗಲಿದೆ. ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯವು ಉಭಯ ತಂಡಗಳ ಪಾಲಿಗೆ ತುಂಬಾ ಮಹತ್ವದ್ದು. ಏಕೆಂದರೆ ಈ ಮ್ಯಾಚ್ನಲ್ಲಿ ಗೆಲ್ಲುವ ತಂಡ ಸರಣಿಯಲ್ಲಿ ಮುನ್ನಡೆ ಸಾಧಿಸಲಿದ್ದಾರೆ. ಇದಕ್ಕೂ ಮುನ್ನ ಹೆಡಿಂಗ್ಲೆ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವು 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತ್ತು. ಇನ್ನು ಎಡ್ಜ್ಬಾಸ್ಟನ್ ಸ್ಟೇಡಿಯಂನಲ್ಲಿ ನಡೆದ ದ್ವಿತೀಯ ಪಂದ್ಯದಲ್ಲಿ ಆಂಗ್ಲರನ್ನು 336 ರನ್ಗಳಿಸಿ ಸೋಲಿಸಿ ಟೀಮ್ ಇಂಡಿಯಾ ಹೊಸ ಇತಿಹಾಸ ಬರೆದಿದ್ದರು. ಇದೀಗ ಉಭಯ ತಂಡಗಳು ಮೂರನೇ ಹಣಾಹಣಿಗೆ ಸಜ್ಜಾಗುತ್ತಿದೆ.
ಇತ್ತ ಈ ಬಾರಿ ಲಾರ್ಡ್ಸ್ ಮೈದಾನದಲ್ಲಿ ಪಂದ್ಯ ನಡೆಯುತ್ತಿರುವುದರಿಂದ ಗೆಲುವು ನಮ್ಮದೇ ಎಂಬ ವಿಶ್ವಾಸದಲ್ಲಿದ್ದಾರೆ ಆಂಗ್ಲರು. ಏಕೆಂದರೆ ಈ ಮೈದಾನದಲ್ಲಿ ಟೀಮ್ ಇಂಡಿಯಾ ಗೆದ್ದಿರುವುದು ಕೇವಲ ಮೂರು ಬಾರಿ ಮಾತ್ರ. 1932 ರಿಂದ ಟೀಮ್ ಇಂಡಿಯಾ ಲಾರ್ಡ್ಸ್ ಮೈದಾನದಲ್ಲಿ ಟೆಸ್ಟ್ ಪಂದ್ಯವಾಡುತ್ತಿದೆ. ಅಂದಿನಿಂದ ಇಂದಿನವರೆಗೆ ಕೇವಲ 3 ಬಾರಿ ಮಾತ್ರ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಲಾರ್ಡ್ಸ್ ಮೈದಾನದಲ್ಲಿನ ಟೀಮ್ ಇಂಡಿಯಾ ರೆಕಾರ್ಡ್ಸ್:
ಲಾರ್ಡ್ಸ್ ಮೈದಾನದಲ್ಲಿ ಟೀಮ್ ಇಂಡಿಯಾ ಈವರೆಗೆ 19 ಪಂದ್ಯಗಳನ್ನಾಡಿದೆ. ಈ ವೇಳೆ 3 ಪಂದ್ಯಗಳಲ್ಲಿ ಜಯ ಸಾಧಿಸಿದರೆ, 4 ಮ್ಯಾಚ್ಗಳನ್ನು ಡ್ರಾನಲ್ಲಿ ಅಂತ್ಯಗೊಳಿಸಿದೆ. ಇನ್ನುಳಿದ 12 ಪಂದ್ಯಗಳಲ್ಲೂ ಭಾರತ ತಂಡ ಪರಾಜಯಗೊಂಡಿದೆ. ಈ ಅಂಕಿ ಅಂಶಗಳ ಪ್ರಕಾರ ಲಾರ್ಡ್ಸ್ ಮೈದಾನದಲ್ಲಿ ಇಂಗ್ಲೆಂಡ್ ಗೆಲ್ಲುವ ಫೇವರೇಟ್ ಆಗಿ ಗುರುತಿಸಿಕೊಂಡಿದೆ. ಆದರೆ….
ಆದರೆ, ಲಾರ್ಡ್ಸ್ ಮೈದಾನದಲ್ಲಿ ಆಡಿದ ಕೊನೆಯ ಮೂರು ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾ 2 ರಲ್ಲಿ ಗೆಲುವು ದಾಖಲಿಸಿದೆ ಎಂಬುದು ಇಲ್ಲಿ ಉಲ್ಲೇಖಾರ್ಹ. ಹೀಗಾಗಿ ಈ ಬಾರಿ ಕೂಡ ಭಾರತೀಯ ಪಡೆಯಿಂದ ಭರ್ಜರಿ ಪ್ರದರ್ಶನವನ್ನು ನಿರೀಕ್ಷಿಸಬಹುದು. ಅದರಲ್ಲೂ 2021 ರಲ್ಲಿ ಲಾರ್ಡ್ಸ್ ಮೈದಾನದಲ್ಲಿ ಇಂಗ್ಲೆಂಡ್ ತಂಡವನ್ನು 151 ರನ್ಗಳಿಂದ ಮಣಿಸಿ ಇತಿಹಾಸ ಬರೆದಿತ್ತು.
ಅಂದು ಟೀಮ್ ಇಂಡಿಯಾ ಪರ ಭರ್ಜರಿ ಪ್ರದರ್ಶನ ನೀಡಿದ್ದು ಕೆಎಲ್ ರಾಹುಲ್ ಹಾಗೂ ಮೊಹಮ್ಮದ್ ಸಿರಾಜ್. ರಾಹುಲ್ 134 ರನ್ ಬಾರಿಸಿದರೆ, ಮೊಹಮ್ಮದ್ ಸಿರಾಜ್ 8 ವಿಕೆಟ್ ಕಬಳಿಸಿ ಐತಿಹಾಸಿಕ ಗೆಲುವು ತಂದು ಕೊಟ್ಟಿದ್ದರು. ಇದೀಗ ರಾಹುಲ್ ಹಾಗೂ ಸಿರಾಜ್ ಉತ್ತಮ ಫಾರ್ಮ್ನಲ್ಲಿದ್ದಾರೆ.
ಈ ಬಾರಿಯ ಸರಣಿಯ ಮೊದಲ ಪಂದ್ಯದಲ್ಲಿ ರಾಹುಲ್ ಶತಕ ಬಾರಿಸಿ ಮಿಂಚಿದರೆ, ಮೊಹಮ್ಮದ್ ಸಿರಾಜ್ ಎಡ್ಜ್ಬಾಸ್ಟನ್ ಟೆಸ್ಟ್ನಲ್ಲಿ 7 ವಿಕೆಟ್ ಕಬಳಿಸಿದ್ದಾರೆ. ಹೀಗಾಗಿ ಇವರಿಬ್ಬರಿಂದ ಲಾರ್ಡ್ಸ್ ಮೈದಾನದಲ್ಲಿ ಉತ್ತಮ ಪ್ರದರ್ಶನ ನಿರೀಕ್ಷಿಸಬಹುದು. ಈ ಮೂಲಕ ಮತ್ತೊಮ್ಮೆ ಕ್ರಿಕೆಟ್ ಕಾಶಿಯಲ್ಲಿ ಟೀಮ್ ಇಂಡಿಯಾ ಭಾರತದ ಕೀರ್ತಿ ಪಾತಾಕೆಯನ್ನು ಮುಗಿಲೆತ್ತರಕ್ಕೇರಿಸುವುದನ್ನು ಎದುರು ನೋಡಬಹುದು.
ಲಾರ್ಡ್ಸ್ ಟೆಸ್ಟ್ನಲ್ಲಿ ಟೀಮ್ ಇಂಡಿಯಾ ವಿಜಯ ಸಾಧಿಸಿದ್ದು ಯಾವಾಗ?
- 1986: ಕಪಿಲ್ ದೇವ್ ನಾಯಕತ್ವದ ಟೀಮ್ ಇಂಡಿಯಾ ಇಂಗ್ಲೆಂಡ್ ತಂಡವನ್ನು 5 ವಿಕೆಟ್ಗಳಿಂದ ಮಣಿಸಿ ಲಾರ್ಡ್ಸ್ ಮೈದಾನದಲ್ಲಿ ಚೊಚ್ಚಲ ಗೆಲುವು ದಾಖಲಿಸಿತ್ತು.
- 2014: ಮಹೇಂದ್ರ ಸಿಂಗ್ ಧೋನಿ ಮುಂದಾಳತ್ವದ ಭಾರತ ತಂಡವು ಆಂಗ್ಲರನ್ನು 95 ರನ್ಗಳಿಂದ ಸೋಲಿಸಿದ್ದರು.
- 2021: ವಿರಾಟ್ ಕೊಹ್ಲಿ ಸಾರಥ್ಯದ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡುವ ಮೂಲಕ ಇಂಗ್ಲೆಂಡ್ ತಂಡವನ್ನು 151 ರನ್ಗಳಿಂದ ಹೀನಾಯವಾಗಿ ಸೋಲಿಸಿತ್ತು.
ಇದನ್ನೂ ಓದಿ: ಒಂದೇ ತಂಡದ ಪರ ಕಣಕ್ಕಿಳಿಯಲಿದ್ದಾರೆ ಸ್ಯಾಮ್ಸನ್ ಬ್ರದರ್ಸ್
ಇದೀಗ ಶುಭ್ಮನ್ ಗಿಲ್ ಮುಂದಾಳತ್ವದಲ್ಲಿ ಯಂಗ್ ಇಂಡಿಯಾ ಲಾರ್ಡ್ಸ್ ಮೈದಾನದಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ. ಈ ಮೂಲಕ ಕ್ರಿಕೆಟ್ ಕಾಶಿಯಲ್ಲಿ ಭಾರತ ತಂಡಕ್ಕೆ ನಾಲ್ಕನೇ ಗೆಲುವು ತಂದು ಕೊಡಲಿದ್ದಾರಾ ಕಾದು ನೋಡಬೇಕಿದೆ.
