29 ಸಿಕ್ಸ್, 30 ಫೋರ್: ವೈಭವ್ ಆರ್ಭಟಕ್ಕೆ ಗಿಲ್ ದಾಖಲೆ ಧೂಳೀಪಟ
Vaibhav Suryavanshi: ಇಂಗ್ಲೆಂಡ್ ವಿರುದ್ಧ ಯೂತ್ ಒಡಿಐ ಸರಣಿಯಲ್ಲಿ ಟೀಮ್ ಇಂಡಿಯಾದ ಯುವ ದಾಂಡಿಗ ವೈಭವ್ ಸೂರ್ಯವಂಶಿ ಅಕ್ಷರಶಃ ಅಬ್ಬರಿಸಿದ್ದಾರೆ. ಈ ಅಬ್ಬರದೊಂದಿಗೆ 5 ಪಂದ್ಯಗಳಲ್ಲಿ ವೈಭವ್ ಬಾರಿಸಿದ ಸಿಕ್ಸರ್ಗಳ ಸಂಖ್ಯೆ ಬರೋಬ್ಬರಿ 29, ಹಾಗೆಯೇ 30 ಫೋರ್ಗಳನ್ನು ಸಹ ಸಿಡಿಸಿದ್ದಾರೆ. ಈ ಮೂಲಕ 5 ಇನಿಂಗ್ಸ್ಗಳಿಂದ ಕಲೆಹಾಕಿದ್ದು 355 ರನ್ಗಳು. ಈ ರನ್ ರಾಶಿಯೊಂದಿಗೆ ವೈಭವ್ ಸೂರ್ಯವಂಶಿ ವಿಶೇಷ ದಾಖಲೆಯನ್ನು ಸಹ ನಿರ್ಮಿಸಿದ್ದಾರೆ.
Updated on: Jul 09, 2025 | 8:30 AM

ಇಂಗ್ಲೆಂಡ್ ಅಂಡರ್-19 ತಂಡದ ವಿರುದ್ಧದ ಸರಣಿಯಲ್ಲಿ ಭಾರತ ಅಂಡರ್-19 ತಂಡದ ಯುವ ದಾಂಡಿಗ ವೈಭವ್ ಸೂರ್ಯವಂಶಿ (Vaibhav Suryavanshi) ಭರ್ಜರಿ ಪ್ರದರ್ಶನ ನೀಡಿದ್ದಾರೆ. ಈ ಅಮೋಘ ಬ್ಯಾಟಿಂಗ್ ಪ್ರದರ್ಶನದೊಂದಿಗೆ ವೈಭವ್ ಹೊಸ ದಾಖಲೆಯನ್ನು ಸಹ ಬರೆದಿದ್ದಾರೆ. ಅದು ಕೂಡ 8 ವರ್ಷಗಳ ಹಿಂದೆ ಶುಭ್ಮನ್ ಗಿಲ್ (Shubman Gill) ಬರೆದಿದ್ದ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.

ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಈ ಸರಣಿಯಲ್ಲಿ ಮೊದಲ ಮ್ಯಾಚ್ನಲ್ಲಿ ವೈಭವ್ ಸೂರ್ಯವಂಶಿ 19 ಎಸೆತಗಳಲ್ಲಿ 48 ರನ್ ಬಾರಿಸಿದ್ದರು. ಇನ್ನು ದ್ವಿತೀಯ ಪಂದ್ಯದಲ್ಲಿ 34 ಎಸೆತಗಳಲ್ಲಿ 45 ರನ್ ಚಚ್ಚಿದ್ದರು. ಮೂರನೇ ಮ್ಯಾಚ್ನಲ್ಲಿ ವೈಭವ್ ಬ್ಯಾಟ್ನಿಂದ 31 ಎಸೆತಗಳಲ್ಲಿ 86 ರನ್ಗಳು ಮೂಡಿಬಂದಿದ್ದವು.

ಇನ್ನು ನಾಲ್ಕನೇ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ 78 ಎಸೆತಗಳಲ್ಲಿ 143 ರನ್ಗಳ ಭರ್ಜರಿ ಶತಕ ಸಿಡಿಸಿ ಅಬ್ಬರಿಸಿದ್ದರು. ಹಾಗೆಯೇ ಕೊನೆಯ ಪಂದ್ಯದಲ್ಲಿ 42 ಎಸೆತಗಳಲ್ಲಿ 33 ರನ್ ಬಾರಿಸಿದ್ದಾರೆ. ಈ ಮೂಲಕ 5 ಪಂದ್ಯಗಳಿಂದ ವೈಭವ್ ಸೂರ್ಯವಂಶಿ ಬರೋಬ್ಬರಿ 355 ರನ್ ಕಲೆಹಾಕಿದ್ದಾರೆ. ಈ ಮೂಲಕ ಯೂತ್ ಏಕದಿನ ಸರಣಿಯಲ್ಲಿ ಅತ್ಯಧಿಕ ರನ್ ಕಲೆಹಾಕಿದ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಈ ದಾಖಲೆ ಶುಭ್ಮನ್ ಗಿಲ್ ಹೆಸರಿನಲ್ಲಿತ್ತು. 2017 ರಲ್ಲಿ ಇಂಗ್ಲೆಂಡ್ ವಿರುದ್ಧದ ಅಂಡರ್ 19 ಏಕದಿನ ಸರಣಿಯಲ್ಲಿ ಗಿಲ್ 351 ರನ್ ಬಾರಿಸಿ ದಾಖಲೆ ನಿರ್ಮಿಸಿದ್ದರು. ಎಂಟು ವರ್ಷಗಳಿಂದ ಗಿಲ್ ಹೆಸರಿನಲ್ಲಿದ್ದ ಈ ದಾಖಲೆಯನ್ನು ಅಳಿಸಿ ಹಾಕುವಲ್ಲಿ ಕೊನೆಗೂ ವೈಭವ್ ಸೂರ್ಯವಂಶಿ ಯಶಸ್ವಿಯಾಗಿದ್ದಾರೆ.

ಇಂಗ್ಲೆಂಡ್ ವಿರುದ್ಧ ಯೂತ್ ಏಕದಿನ ಸರಣಿಯಲ್ಲಿ ಪರಾಕ್ರಮ ಮೆರೆದ 14 ವರ್ಷದ ವೈಭವ್ ಸೂರ್ಯವಂಶಿ 5 ಇನಿಂಗ್ಸ್ಗಳಿಂದ ಬರೋಬ್ಬರಿ 355 ರನ್ ಕಲೆಹಾಕಿದ್ದಾರೆ. ಅದು ಕೂಡ 174 ರ ಸ್ಟ್ರೈಕ್ ರೇಟ್ನಲ್ಲಿ. ಈ ಮೂಲಕ ಯೂತ್ ಒಡಿಐ ಸರಣಿಯಲ್ಲಿ ಅತ್ಯಧಿಕ ರನ್ ಕಲೆಹಾಕಿದ ಭಾರತೀಯ ಬ್ಯಾಟರ್ ಎಂಬ ದಾಖಲೆಯನ್ನು ವೈಭವ್ ಸೂರ್ಯವಂಶಿ ತಮ್ಮದಾಗಿಸಿಕೊಂಡಿದ್ದಾರೆ.
