ಕ್ರಿಕೆಟ್ನಲ್ಲಿ ಸಾಮಾನ್ಯವಾಗಿ ಒಂದು ತಂಡ ಸದಾ ಗೆಲುವಿನ ಟ್ರ್ಯಾಕ್ನಲ್ಲಿದ್ದರೆ ಆ ತಂಡದ ಬಗ್ಗೆ ವಿವಾದಗಳು ಹುಟ್ಟಿಕೊಳ್ಳುವುದು ತೀರ ಕಡಿಮೆ. ಆದರೆ ಅದೇ ತಂಡ ಸತತ ಸೋಲುಗಳಲ್ಲಿ ಮುಳುಗಿದರೆ ಮಾತ್ರ ತಂಡದ ಆಟಗಾರರಿಂದ ಹಿಡಿದು, ನಾಯಕನ ತಪ್ಪುಗಳನ್ನು ಸಹ ಇಂಚಿಂಚು ಬಿಡದೆ ಜಾಲಾಡಲಾಗುತ್ತದೆ. ಈಗ ಅಂತಹದ್ದೇ ಪರಿಸ್ಥಿತಿ ಪಾಕ್ ತಂಡಕ್ಕೆ ಎದುರಾಗಿದೆ. ವಿಶ್ವಕಪ್ ಆರಂಭಕ್ಕೂ ಮುನ್ನ ನ್ಯೂಜಿಲೆಂಡ್ನಲ್ಲಿ ತ್ರಿಕೋನ ಸರಣಿ ಗೆದ್ದಿದ್ದ ಬಾಬರ್ (Babar Azam) ಪಡೆ ಟಿ20 ವಿಶ್ವಕಪ್ (T20 World Cup) ಗೆಲ್ಲುವ ಆತ್ಮವಿಶ್ವಾಸದಲ್ಲಿ ಚುಟುಕು ಸಮರಕ್ಕೆ ಕಾಲಿಟ್ಟಿತ್ತು. ಆದರೆ ಈ ಟೂರ್ನಿಯಲ್ಲಿ ಈ ತಂಡ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಸೋತಿದ್ದ ಪಾಕಿಸ್ತಾನ (Pakistan) ತನ್ನ ಎರಡನೇ ಪಂದ್ಯದಲ್ಲಿ ಜಿಂಬಾಬ್ವೆ ಎದುರು ಮುಗ್ಗರಿಸಿದೆ. ಈ ಮೂಲಕ ಈ ಟೂರ್ನಿಯಲ್ಲಿ ತನ್ನ ಪ್ರಯಾಣವನ್ನು ಭಾಗಶಃ ಮುಗಿಸಿದೆ. ಹೀಗಾಗಿ ಈಗ ಬಾಬರ್ ಪಡೆಯ ಪ್ರದರ್ಶನದ ಪೋಸ್ಟ್ ಮಾರ್ಟಂ ನಡೆಯುತ್ತಿದ್ದು, ಇದರಲ್ಲಿ ತಂಡದ ನಾಯಕನ ನಾಯಕತ್ವದ ಬಗ್ಗೆ ಹಲವರು ಪ್ರಶ್ನೆಗಳನ್ನು ಎತ್ತುದ್ದಿದ್ದಾರೆ.
ಬಾಬರ್ ಅಜಮ್ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ನಾಯಕನಾಗಿ ಅವರು ತೆಗೆದುಕೊಂಡಿರುವ ಕೆಲವು ನಿರ್ಧಾರಗಳಿಂದ ಪಾಕ್ ತಂಡ ಸೋಲಿನ ಸುಳಿಗೆ ಸಿಲುಕಿದೆ ಎಂಬುದು ಹಲವರ ವಾದವಾಗಿದೆ.
ಇದಕ್ಕೆ ಕೈಗನ್ನಡಿಯಂತೆ ಈ ಹಿಂದೆ, ತಮ್ಮ ತಂಡದ ನ್ಯೂನತೆಗಳನ್ನು ಸರಿಪಡಿಸುವಂತೆ ಪಾಕಿಸ್ತಾನದ ಹಲವು ಮಾಜಿ ಅನುಭವಿ ಆಟಗಾರರು ಬಾಬರ್ ಅಜಮ್ ಅವರಿಗೆ ಸಲಹೆ ನೀಡಿದ್ದರು. ಏಷ್ಯಾಕಪ್ 2022 ರಲ್ಲಿ ಪಾಕ್ ತಂಡದ ಪ್ರದರ್ಶನ ನೋಡಿದ್ದ ಮಾಜಿ ಅನುಭವಿ ಆಟಗಾರರು ಈ ತಂಡದ ದೌರ್ಬಲ್ಯಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾತನಾಡುತ್ತಾ, ಇವುಗಳನ್ನು ಸರಿಪಡಿಸಿಕೊಳ್ಳುವಂತೆ ಬಾಬರ್ ಅಜಮ್‌ಗೆ ನಿರಂತರವಾಗಿ ಸಲಹೆ ನೀಡುತ್ತಿದ್ದರು. ಆದರೆ ಪಾಕ್ ನಾಯಕನ ಕಿವಿಗಳು ಇದಕ್ಕೆ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ಪರಿಣಿತರು ನೀಡಿದ ಈ 4 ನ್ಯೂನತೆಗಳನ್ನು ಬಾಬರ್ ಸರಿಪಡಿಸಿಕೊಂಡಿದ್ದರೆ, ಪಾಕ್ ತಂಡಕ್ಕೆ ಈ ಸ್ಥಿತಿ ಬರುತ್ತಿರಲಿಲ್ಲ ಎಂಬುದು ಹಲವರ ಮಾತಾಗಿದೆ.
ಓಪನಿಂಗ್ ಪೇರ್ ಬದಲಾಗಲಿಲ್ಲ
ಪಾಕಿಸ್ತಾನದ ಹಲವು ಮಾಜಿ ಅನುಭವಿ ಆಟಗಾರರು ಬಾಬರ್ ಅಜಮ್ ಓಪನ್ ಮಾಡಬಾರದು ಎಂದು ನಿರಂತರವಾಗಿ ಹೇಳುತ್ತ ಬರುತ್ತಿದ್ದಾರೆ. ಬಾಬರ್, ಮೊಹಮ್ಮದ್ ರಿಜ್ವಾನ್ ಜೊತೆಗೂಡಿ ಆರಂಭಿಕರಾಗಿ ಕಣಕ್ಕಿಳಿದು ರನ್ಗಳನ್ನಂತೂ ಗಳಿಸುತ್ತಿದ್ದಾರೆ. ಆದರೆ ಅವರ ರನ್ ರೇಟ್ ಮೇಲೇಳುತ್ತಿಲ್ಲ ಎಂದು ಪರಿಣಿತರು ಆರೋಪಿಸಿದ್ದರು. ಆದರೆ ಬಾಬರ್ ಯಾರ ಮಾತನ್ನೂ ಕೇಳಲಿಲ್ಲ. ಈ ಹಿಂದೆ ಟಿ20ಯಲ್ಲಿ ಬಾಬರ್ ಅಜಮ್, ಫಖರ್ ಜಮಾನ್ ಜೊತೆ ಓಪನಿಂಗ್ ಮಾಡಿದಾಗ ಅವರ ಬ್ಯಾಟಿಂಗ್ ಸರಾಸರಿ 57 ಆಗಿತ್ತು. ಆದರೆ ರಿಜ್ವಾನ್ ಜೊತೆ ಓಪನ್ ಮಾಡಿದಾಗ ಅವರ ಸರಾಸರಿ ಕೇವಲ 32 ಆಗಿದೆ. ಹೀಗಾಗಿ ಈ ಓಪನಿಂಗ್ ಪೇರ್ ಬದಲಾಗಬೇಕು ಎಂದು ಮಾಜಿ ಆಟಗಾರರು ಹೇಳಿದ್ದರೂ ಬಾಬರ್, ರಿಜ್ವಾನ್ ಜೊತೆಯೇ ಆರಂಭಿಕರಾಗಿ ಕಣಕ್ಕಿಳಿಯಲಾರಂಭಿಸಿದರು.
ಇದನ್ನೂ ಓದಿ: ಎರಡು ಪಂದ್ಯಗಳನ್ನು ಸೋತಿರುವ ಪಾಕ್ ತಂಡಕ್ಕೆ ಈಗಲೂ ಇದೆ ಸೇಮಿಸ್ಗೇರುವ ಅವಕಾಶ..!
ಬಾಬರ್ ಕಳಪೆ ನಾಯಕತ್ವ
ಬಾಬರ್ ಅಜಮ್ ಅವರ ಕಳಪೆ ನಾಯಕತ್ವವೂ ಪಾಕಿಸ್ತಾನದ ಸೋಲಿಗೆ ಪ್ರಮುಖ ಕಾರಣವಾಗಿದೆ. ಬಾಬರ್ ಉತ್ತಮ ಬ್ಯಾಟ್ಸ್‌ಮನ್ ಆಗಿದ್ದರೂ, ನಾಯಕನಾಗಿ ಆಟ ನಡೆಸುವ ಅವರ ಚಿಂತನೆಯನ್ನು ನಿರಂತರವಾಗಿ ಪ್ರಶ್ನಿಸಲಾಗುತ್ತಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಟೀಂ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ಬಾಬರ್, ಸ್ಪಿನ್ನರ್ಗೆ ಕೊನೆಯ ಓವರ್ ಬೌಲಿಂಗ್ ನೀಡಿದರು. ಇದರಿಂದ ತಂಡ ಸೋಲಬೇಕಾಯಿತು.ಏಷ್ಯಾಕಪ್ನಲ್ಲೂ ಇದೇ ರೀತಿಯ ತಪ್ಪನ್ನು ಬಾಬರ್ ಮಾಡಿದ್ದರು. ಇಷ್ಟೆಲ್ಲಾ ಆದರೂ ಅವರು ಮಾಡಿದ ತಪ್ಪಿನಿಂದ ಪಾಠ ಕಲಿಯಲಿಲ್ಲ.
ಮಧ್ಯಮ ಕ್ರಮಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ
ಪಾಕಿಸ್ತಾನದ ಮಧ್ಯಮ ಕ್ರಮಾಂಕದ ಬಗ್ಗೆ ಬಹಳ ಹಿಂದಿನಿಂದಲೂ ಪ್ರಶ್ನೆಗಳು ಉದ್ಭವಿಸಿವೆ. ತಂಡದ ಮಧ್ಯಮ ಕ್ರಮಾಂಕದಲ್ಲಿ ಅನುಭವಿ ಆಟಗಾರರ ಕೊರತೆ ಸಾಕಷ್ಟಿದೆ. ಆದರೆ ಇದರ ಹೊರತಾಗಿಯೂ ಬಾಬರ್ ತನ್ನ ನಿಲುವನ್ನು ಬದಲಾಯಿಸಲಿಲ್ಲ. ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಹೈದರ್ ಅಲಿ ಅವರಿಗೆ ಆಗಾಗ್ಗೆ ಅವಕಾಶಗಳನ್ನು ನೀಡಿದರು. ಆದರೆ ಈ ಆಟಗಾರರು ಫ್ಲಾಪ್ ಎಂಬುದು ಸಾಬೀತಾಯಿತು. ಇದರ ಹೊರತಾಗಿಯೂ ಮಧ್ಯಮ ಕ್ರಮಾಂಕವನ್ನು ಬದಲಾಯಿಸುವ ಬಗ್ಗೆ ಬಾಬರ್ ಒಂದು ಕ್ಷಣವೂ ಯೋಚಿಸಲಿಲ್ಲ.
ತಂಡದಲ್ಲಿ ಸ್ನೇಹಿತರಿಗೆ ಅವಕಾಶ?
ಇಮಾದ್ ವಾಸಿಂ, ಶೋಯೆಬ್ ಮಲಿಕ್ ಅವರಂತಹ ಆಟಗಾರರು ಫಿಟ್ ಆಗಿದ್ದರೂ ತಂಡದಿಂದ ಹೊರಗುಳಿಯಬೇಕಾಯಿತು. ಇಬ್ಬರೂ ಆಟಗಾರರು ಸಹ ಉತ್ತಮ ಫಾರ್ಮ್ನಲ್ಲಿದ್ದರೂ ಸಹ ಅವರಿಗೆ ತಂಡದಲ್ಲಿ ಅವಕಾಶ ಸಿಗಲಿಲ್ಲ. ಇದಕ್ಕೆ ಈ ಇಬ್ಬರು ಆಟಗಾರರ ಜೊತೆ ಬಾಬರ್ ಅಜಮ್ ಸಂಬಂಧ ಚೆನ್ನಾಗಿಲ್ಲ ಹೀಗಾಗಿ ತಂಡದಿಂದ ಹೊರಗುಳಿದಿದ್ದಾರೆ ಎಂದು ಪಾಕ್ ಮಾಧ್ಯಮಗಳಲ್ಲಿ ಹೇಳಲಾಗುತ್ತಿದೆ. ಒಟ್ಟಿನಲ್ಲಿ ಬಾಬರ್ ತನ್ನ ಸ್ನೇಹಿತರಿಗಾಗಿ ಅನುಭವಿ ಹಾಗೂ ಇನ್ ಫಾರ್ಮ್ ಆಟಗಾರರನ್ನು ಕಡೆಗಣಿಸಿದ್ದು ಪಾಕ್ ತಂಡದ ಕಳಪೆ ಪ್ರದರ್ಶನಕ್ಕೆ ಕಾರಣವಾಗಿರುವುದು ಸ್ಪಷ್ಟವಾಗಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:33 pm, Fri, 28 October 22