ಕ್ರೀಡಾಭಿಮಾನಿಗಳು ಎದುರು ನೋಡುತ್ತಿರುವ ಟಿ20 ವಿಶ್ವಕಪ್ (T20 World Cup 2021) ಟೂರ್ನಿಯ ಸೂಪರ್ 12 (Super 12) ಹಂತದ ಪಂದ್ಯಗಳಿಗೆ ಇಂದು ಚಾಲನೆ ಸಿಗಲಿದೆ. ಆದರೆ, ಇಡೀ ವಿಶ್ವ ಕ್ರಿಕೆಟ್ನ ಕಣ್ಣು ಅಕ್ಟೋಬರ್ 24 ರಂದು ನಡೆಯಲಿರುವ ಸಾಂಪ್ರದಾಯಿಕ ಎದುರಾಳಿ ಭಾರತ ಹಾಗೂ ಪಾಕಿಸ್ತಾನ (India vs Pakistan) ನಡುವಿನ ಪಂದ್ಯದ ಮೇಲೆ ನೆಟ್ಟಿದೆ. ಹೌದು, ಇಂಡೋ-ಪಾಕ್ (Indo-Pak) ಕ್ರಿಕೆಟ್ ಕದನ ಎಂದರೆ ಅದೊಂದು ನಿಜವಾದ ಯುದ್ಧದಂತೆ. ಇಲ್ಲಿ ಯಾರೇ ಗೆದ್ದರೂ ಅಥವಾ ಯಾರೇ ಸೋತರು ಪರಿಣಾಮ ಮಾತ್ರ ತೀವ್ರವಾಗಿರುತ್ತದೆ. ಗೆದ್ದರೆ ವಿಶ್ವಕಪ್ ಟ್ರೋಫಿ ಗೆದ್ದಷ್ಟೇ ಸಂಭ್ರಮ. ಈ ಸಂಭ್ರಮವನ್ನು ಇದುವರೆಗೆ ಭಾರತವೇ ಆಚರಿಸಿದೆ. ವಿಶ್ವಕಪ್‌ನಲ್ಲಿ ಪಾಕ್ ವಿರುದ್ಧ ಭಾರತ ಎಂದಿಗೂ ಸೋತಿಲ್ಲ. ಏಕದಿನ ವಿಶ್ವಕಪ್‌ನಲ್ಲಿ ಏಳು ಹಾಗೂ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಐದು ಜಯ ಸೇರಿದಂತೆ ಒಟ್ಟು 12 ಬಾರಿ ಗೆಲುವು ದಾಖಲಿಸಿದೆ. ಆದರೆ, ಈ ಬಾರಿ ಹೀಗೆ ಆಗುವುದಿಲ್ಲ ಎಂದು ಪಾಕಿಸ್ತಾನ ತಂಡದ ನಾಯಕ ಬಾಬರ್ ಆಜಮ್ (Babar Azam) ಹೇಳಿದ್ದಾರೆ.
‘ಹಳೆಯ ಕತೆ ಮುಗಿದು ಹೋಗಿದೆ. ಹಿಂದಿನ ಸೋಲು-ಗೆಲುವು ಈಗ ಲೆಕ್ಕಕ್ಕೆ ಬರಲ್ಲ. ಇದರ ಬಗ್ಗೆ ಯೋಚಿಸುವ ಬದಲು ಭವಿಷ್ಯದ ಬಗ್ಗೆ ಯೋಚಿಸುತ್ತಿದ್ದೇವೆ. ಭಾರತ ವಿರುದ್ಧದ ಪಂದ್ಯಕ್ಕೆ ನಾವು ಉತ್ತಮವಾಗಿ ತಯಾರಿ ನಡೆಸಿದ್ದೇವೆ ಹಾಗೂ ಉತ್ತಮ ಕ್ರಿಕೆಟ್ ಆಡುತ್ತೇವೆಂಬ ಬಗ್ಗೆ ನಂಬಿಕೆ ಇದೆ. ದೊಡ್ಡ ಟೂರ್ನಿಗೆ ನೀವು ತೆರಳಿದಾಗ, ನಿಮ್ಮ ಮೇಲಿನ ನಂಬಿಕೆ ಹಾಗೂ ತಂಡದ ಆಟಗಾರರಲ್ಲಿನ ವಿಶ್ವಾಸ ಪ್ರಮುಖ ಸಂಗತಿಯಾಗಿರುತ್ತದೆ. ಒಂದು ತಂಡವಾಗಿ ನಮ್ಮ ವಿಶ್ವಾಸ ಹಾಗೂ ಮನೋಸ್ಥೈರ್ಯ ಅಗ್ರ ಸ್ಥಾನದಲ್ಲಿದೆ’ ಎಂದು ಬಾಬರ್ ಹೇಳಿದ್ದಾರೆ.
‘ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಣ ಪಂದ್ಯ ಎಂದಮೇಲೆ ಅಲ್ಲಿ ಎರಡೂ ತಂಡಗಳ ಆಟಗಾರರ ಮೇಲೆ ಹೆಚ್ಚಿನ ಒತ್ತಡವಿರುವುದು ನಿಜ . ಆದರೆ, ನಾವು ಕ್ರಿಕೆಟ್ ಆಡುವ ಬಗ್ಗೆ ಹೆಚ್ಚಿನ ಗಮನವನ್ನು ಕೇಂದ್ರಿಕರಿಸುತ್ತೇವೆ. ಶಾಂತ ಸ್ವಭಾವದಿಂದ ಇರುವ ಮೂಲಕ ಆಡುವ ಕಡೆಗೆ ಗಮನ ಹರಿಸುತ್ತೇವೆ. ಯುಎಇ ಪರಿಸ್ಥಿತಿಗಳಲ್ಲಿ ಆಡಿರುವ ಹೆಚ್ಚಿನ ಅನುಭವವನ್ನು ಪಾಕಿಸ್ತಾನ ಹೊಂದಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಒಂದು ಹೆಜ್ಜೆ ಮುಂದಿದ್ದು, ಭಾರತ ವಿರುದ್ಧ ಮುಂದಿನ ಪಂದ್ಯದಲ್ಲಿ ಗೆಲುವು ಪಡೆಯಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಭಾರತ ಹಾಗೂ ಪಾಕಿಸ್ತಾನ ತಂಡಗಳನ್ನು ಕ್ರಮವಾಗಿ ವಿರಾಟ್ ಕೊಹ್ಲಿ ಹಾಗೂ ಬಾಬರ್ ಆಜಮ್ ಮುನ್ನಡೆಸುತ್ತಿದ್ದಾರೆ. ಹೀಗಾಗಿ ಈ ಪಂದ್ಯ ಒಂದು ಕೈ ಹೆಚ್ಚೇ ರೋಚಕತೆ ಸೃಷ್ಟಿಸಿದೆ. ಅಕ್ಟೋಬರ್ 24 ಭಾನುವಾರದಂದು ಈ ಪಂದ್ಯ ನಡೆಯಲಿದ್ದು, ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಈ ಹೈವೋಲ್ಟೆಜ್ ಮ್ಯಾಚ್ಗೆ ಸಾಕ್ಷಿಯಾಗಲಿದೆ. ಭಾರತೀಯ ಕಾಲಮಾನದ ಪ್ರಕಾರ ಪಂದ್ಯ ಸಂಜೆ 7:30ಕ್ಕೆ ನಡೆಯಲಿದೆ.
VVS Laxman: ಪಾಕ್ ವಿರುದ್ಧದ ಪಂದ್ಯದಿಂದ ಕಿಶನ್, ಅಶ್ವಿನ್, ಶಮಿ ಔಟ್: ಇಲ್ಲಿದೆ ವಿವಿಎಸ್ ಲಕ್ಷ್ಮಣ್ ಪ್ಲೇಯಿಂಗ್ XI
West Indies vs England: ಇಂದಿನಿಂದ ಸೂಪರ್ 12 ಹಂತ: ಚಾಂಪಿಯನ್ ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ಮುಖಾಮುಖಿ
(Babar Azam said before India vs Pakistan ICC Mens T20 World Cup Match Past is gone we are not thinking about it)