
ಏಷ್ಯಾಕಪ್‌ಗಾಗಿ (Asia Cup 2025) ಪಾಕಿಸ್ತಾನ ತಂಡದಲ್ಲಿ ಬಾಬರ್ ಆಝಂ (Babar Azam) ಸ್ಥಾನ ಪಡೆಯದಿರಬಹುದು. ಆದರೆ, ಪಾಕಿಸ್ತಾನದಲ್ಲಿ ನಡೆದ ಪಂದ್ಯದಲ್ಲಿ ಬಾಬರ್ ಏಕಾಂಗಿಯಾಗಿ ತಮ್ಮ ತಂಡವನ್ನು ಗೆಲುವಿನತ್ತ ಕೊಂಡೊಯ್ದಿದ್ದಾರೆ. ವಾಸ್ತವವಾಗಿ ಪಾಕಿಸ್ತಾನದಲ್ಲಿ ಪೇಶಾವರ್ ಝಲ್ಮಿ ಮತ್ತು ಲೆಜೆಂಡ್ಸ್ XI ತಂಡಗಳ ನಡುವೆ ವಿಶೇಷ ಉದ್ದೇಶಕ್ಕಾಗಿ ಪಂದ್ಯವನ್ನು ಆಡಲಾಯಿತು. ಖೈಬರ್ ಪಖ್ತುನ್ಖ್ವಾ ಕ್ರೀಡಾ ಇಲಾಖೆ ಮತ್ತು ಸ್ಥಳೀಯ ಸರ್ಕಾರ ಆಯೋಜಿಸಿದ್ದ ತಲಾ 15 ಓವರ್‌ಗಳ ಪಂದ್ಯದ ಉದ್ದೇಶ ಪ್ರವಾಹ ಸಂತ್ರಸ್ತರಿಗೆ ಆರ್ಥಿಕ ನೆರವು ಸಂಗ್ರಹಿಸುವುದಾಗಿತ್ತು. ಈ ಪಂದ್ಯದಲ್ಲಿ, ಬಾಬರ್ ಆಝಂ ಪೇಶಾವರ್ ಝಲ್ಮಿ ತಂಡದ ನಾಯಕರಾಗಿದ್ದರೆ, ಇಂಜಮಾಮ್ ಉಲ್ ಹಕ್ ಲೆಜೆಂಡ್ಸ್ XI ತಂಡದ ನಾಯಕರಾಗಿದ್ದರು.
ಈ ಪಂದ್ಯದಲ್ಲಿ ಪೇಶಾವರ್ ಝಲ್ಮಿ ತಂಡ ಮೊದಲು ಬ್ಯಾಟ್ ಮಾಡಿ 14.4 ಓವರ್‌ಗಳಲ್ಲಿ 144 ರನ್ ಗಳಿಸಿತು. ತಂಡದ ನಾಯಕ ಬಾಬರ್ ಆಝಂ ಪೇಶಾವರ್ ಝಲ್ಮಿ ಪರ ಅತಿ ಹೆಚ್ಚು ರನ್ ಗಳಿಸಿದರು. ಆರಂಭಿಕನಾಗಿ ಬಂದ ಬಾಬರ್, ಶೋಯೆಬ್ ಅಖ್ತರ್ ಮತ್ತು ವಕಾರ್ ಯೂನಸ್‌ರಂತಹ ಲೆಜೆಂಡರಿ ವೇಗಿಗಳ ಮುಂದೆ ಅಮೋಘವಾಗಿ ಬ್ಯಾಟ್ ಬೀಸಿದರು.
ಬಾಬರ್ ತಮ್ಮ ಇನ್ನಿಂಗ್ಸ್‌ನಲ್ಲಿ ಕೇವಲ 23 ಎಸೆತಗಳನ್ನು ಎದುರಿಸಿ 41 ರನ್ ಗಳಿಸಿದರು. ಈ ಮೂಲಕ, ಪೇಶಾವರ್ ಝಲ್ಮಿ ತಂಡವು ಲೆಜೆಂಡ್ಸ್ XI ತಂಡಕ್ಕೆ 145 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ಲೆಜೆಂಡ್ಸ್ XI ತಂಡವು 6 ವಿಕೆಟ್‌ಗಳಿಗೆ 138 ರನ್‌ಗಳನ್ನು ಮಾತ್ರ ಗಳಿಸಿ ಕೇವಲ 6 ರನ್‌ಗಳಿಂದ ಪಂದ್ಯವನ್ನು ಸೋತಿತು. ಲೆಜೆಂಡ್ಸ್ XI ತಂಡದ ಸೋಲಿಗೆ ಪ್ರಮುಖ ಕಾರಣ ಅದರ ಅಗ್ರ 6 ಬ್ಯಾಟ್ಸ್‌ಮನ್‌ಗಳ ವೈಫಲ್ಯ.
ಲೆಜೆಂಡ್ಸ್ XI ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ತಂಡದ ನಾಯಕ ಇಂಜಮಾಮ್-ಉಲ್-ಹಕ್. ಇಂಜಮಾಮ್ 23 ಎಸೆತಗಳಲ್ಲಿ 200 ಸ್ಟ್ರೈಕ್ ರೇಟ್‌ನಲ್ಲಿ ಅಜೇಯ 46 ರನ್ ಗಳಿಸಿದರು. ಅದೇ ಸಮಯದಲ್ಲಿ, ಅಜರ್ ಮಹಮೂದ್ 15 ಎಸೆತಗಳಲ್ಲಿ 200 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ ಅಜೇಯ 34 ರನ್ ಗಳಿಸಿದರು. ಆದಾಗ್ಯೂ, ಇವರಿಬ್ಬರಿಗೂ ತಂಡಕ್ಕೆ ಗೆಲುವು ತಂದುಕೊಡಲು ಸಾಕಾಗಲಿಲ್ಲ.
ಪೇಶಾವರ್ ಝಲ್ಮಿ ಪರ ಬ್ಯಾಟಿಂಗ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬಾಬರ್ ಬೌಲಿಂಗ್‌ನಲ್ಲೂ ತಮ್ಮ ಕರಾಮತ್ತು ತೋರಿದರು. ಬಾಬರ್ 3 ಓವರ್ ಬೌಲ್ ಮಾಡಿ 21 ರನ್‌ಗಳಿಗೆ 2 ವಿಕೆಟ್‌ಗಳನ್ನು ಪಡೆದರು. ಈ ಎರಡೂ ವಿಕೆಟ್‌ಗಳು ಲೆಜೆಂಡ್ಸ್ XI ತಂಡದ ಇಬ್ಬರು ಸ್ಟಾರ್ ಬ್ಯಾಟ್ಸ್‌ಮನ್‌ಗಳದ ಅಜರ್ ಅಲಿ ಮತ್ತು ಯೂನಿಸ್ ಖಾನ್ ಅವರದ್ದಾಗಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:47 pm, Sun, 31 August 25