37 ವರ್ಷಗಳ ನಂತರ ಕ್ರಿಕೆಟ್ ಇತಿಹಾಸದಲ್ಲೇ ಐತಿಹಾಸಿಕ ಗೆಲುವು ದಾಖಲಿಸಿದ ಬಾಂಗ್ಲಾ ತಂಡ

|

Updated on: Mar 24, 2023 | 6:47 PM

ಬಾಂಗ್ಲಾದೇಶ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 10 ವಿಕೆಟ್​ಗಳ ಗೆಲುವಿನ ಸಾಧನೆ ಮಾಡಿರುವುದು ಇದೇ ಮೊದಲು.

37 ವರ್ಷಗಳ ನಂತರ ಕ್ರಿಕೆಟ್ ಇತಿಹಾಸದಲ್ಲೇ ಐತಿಹಾಸಿಕ ಗೆಲುವು ದಾಖಲಿಸಿದ ಬಾಂಗ್ಲಾ ತಂಡ
ಬಾಂಗ್ಲಾದೇಶ ಕ್ರಿಕೆಟ್ ತಂಡ
Follow us on

ತನ್ನ ಹೆಸರಲ್ಲಿ ಒಂದೇ ಒಂದು ಐಸಿಸಿ ಟ್ರೋಫಿಯನ್ನು (ICC trophy) ಗೆದ್ದಿಲ್ಲದೆ ಬಾಂಗ್ಲಾದೇಶ ತಂಡ ಕಳೆದ ಕೆಲವು ವರ್ಷಗಳಲ್ಲಿ ಸಾಕಷ್ಟು ಸುಧಾರಣೆಯನ್ನು ಕಂಡಿದೆ. ಬಲಿಷ್ಠ ತಂಡಗಳನ್ನು ಮಣಿಸಿರುವ ಬಾಂಗ್ಲಾ ತಂಡ ಇದೀಗ ಕ್ರಿಕೆಟ್ ಲೋಕದಲ್ಲಿ ಹತ್ತು ಹಲವು ದಾಖಲೆಗಳನ್ನು ನಿರ್ಮಿಸುತ್ತಿದೆ. ಇದೀಗ ಐರ್ಲೆಂಡ್ ವಿರುದ್ಧ ಏಕದಿನ ಸರಣಿ ಆಡುತ್ತಿರುವ ಬಾಂಗ್ಲಾದೇಶ ತಂಡ ಕ್ರಿಕೆಟ್ ಇತಿಹಾಸದಲ್ಲಿ ಐತಿಹಾಸಿಕ ಸಾಧನೆ ಮಾಡಿದೆ. 1986ರಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿರುವ ಬಾಂಗ್ಲಾದೇಶ ಐರ್ಲೆಂಡ್ ವಿರುದ್ಧ (Bangladesh vs Ireland) ಭರ್ಜರಿ ಜಯ ಸಾಧಿಸಿದೆ. ಅಂದರೆ ಬರೋಬ್ಬರಿ 37 ವರ್ಷಗಳ ನಂತರ ಮೊದಲ ಬಾರಿಗೆ ಏಕದಿನದಲ್ಲಿ 10 ವಿಕೆಟ್‌ಗಳ ಜಯ ಸಾಧಿಸಿದೆ.

ಐರ್ಲೆಂಡ್ ವಿರುದ್ಧದ ಮೂರನೇ ಪಂದ್ಯದಲ್ಲಿ ಬಾಂಗ್ಲಾದೇಶ 10 ವಿಕೆಟ್‌ಗಳ ಜಯ ಸಾಧಿಸಿದ್ದು, ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ಗೆದ್ದಿದ್ದರೆ, ಎರಡನೇ ಪಂದ್ಯ ಮಳೆ ಇಂದ ರದ್ದಾಗಿತ್ತು. ಇದೀಗ ಮೂರನೇ ಪಂದ್ಯವನ್ನು ಬಾಂಗ್ಲಾದೇಶ ಗೆದ್ದು 2-0 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿದೆ.

ಯುವ ಆಟಗಾರರು, ಮೂಕ ಪ್ರಾಣಿಗಳಿಗಾಗಿ ಮಹತ್ವದ ಕೆಲಸಕ್ಕೆ ಮುಂದಾದ ಕೊಹ್ಲಿ- ಅನುಷ್ಕಾ

101 ರನ್‌ಗಳಿಗೆ ಆಲೌಟ್

ಈ ಪಂದ್ಯದಲ್ಲಿ ಐರ್ಲೆಂಡ್ ನಾಯಕ ಆಂಡ್ರ್ಯೂ ಬಾಲ್ಬರ್ನಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ ಐರ್ಲೆಂಡ್ 28.1 ಓವರ್‌ಗಳಲ್ಲಿ 101 ರನ್‌ಗಳಿಗೆ ಆಲೌಟ್ ಆಯಿತು. ತಂಡದ ಒಂಬತ್ತು ಆಟಗಾರರು ಎರಡಂಕಿ ಮೊತ್ತವನ್ನು ತಲುಪಲು ಸಾಧ್ಯವಾಗಲಿಲ್ಲ. ಬಾಂಗ್ಲಾ ಪರ ಹಸನ್ ಮಹಮೂದ್ 5, ತಸ್ಕಿನ್ ಅಹ್ಮದ್ 3 ಹಾಗೂ ಎಬಾದತ್ ಹುಸೇನ್ ಎರಡು ವಿಕೆಟ್ ಪಡೆದರು. 102 ರನ್‌ಗಳ ಗುರಿ ಬೆನ್ನಟ್ಟಿದ ಬಾಂಗ್ಲಾ ತಂಡದ ಆರಂಭಿರಾದ ತಮೀಮ್ ಇಕ್ಬಾಲ್ ಮತ್ತು ಲಿಟನ್ ದಾಸ್ ಉತ್ತಮ ಆರಂಭ ನೀಡಿದರು. ತಮೀಮ್ 41 ಎಸೆತಗಳಲ್ಲಿ ಅಜೇಯ 41 ರನ್ ಮತ್ತು ಲಿಟನ್ ದಾಸ್ 38 ಎಸೆತಗಳಲ್ಲಿ 10 ಬೌಂಡರಿಗಳ ಸಹಾಯದಿಂದ ಅಜೇಯ 51 ರನ್ ಗಳಿಸಿದರು.

ಹೀಗಾಗಿ ಬಾಂಗ್ಲಾದೇಶ ತಂಡ ಕೇವಲ 13.1 ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ ಗೆಲುವಿನ ಗುರಿ ತಲುಪಿತು. ಬಾಂಗ್ಲಾದೇಶ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 10 ವಿಕೆಟ್​ಗಳ ಗೆಲುವಿನ ಸಾಧನೆ ಮಾಡಿರುವುದು ಇದೇ ಮೊದಲು. ಅಲ್ಲದೆ ಈ ಹಿಂದೆ ಇಂಗ್ಲೆಂಡ್ ವಿರುದ್ಧ ಬಾಂಗ್ಲಾದೇಶ ಟಿ20ಯಲ್ಲಿ ಕ್ಲೀನ್ ಸ್ವೀಪ್ ಮಾಡಿತ್ತು. ಮೊದಲ ಪಂದ್ಯವನ್ನು 6 ವಿಕೆಟ್‌ಗಳಿಂದ, ಎರಡನೇ ಪಂದ್ಯವನ್ನು 4 ವಿಕೆಟ್‌ಗಳಿಂದ ಮತ್ತು ಮೂರನೇ ಪಂದ್ಯವನ್ನು 16 ರನ್‌ಗಳಿಂದ ಗೆದ್ದ ಬಾಂಗ್ಲಾದೇಶ ಬಲಿಷ್ಟ ಇಂಗ್ಲೆಂಡ್ ತಂಡವನ್ನು 3-0 ಅಂತರದಲ್ಲಿ ಸೋಲಿಸಿತ್ತು.

ಉಭಯ ತಂಡಗಳು ಹೀಗಿದ್ದವು

ಐರ್ಲೆಂಡ್ ತಂಡ – ಸ್ಟೀಫನ್ ಡೊಹೆನಿ, ಪಾಲ್ ಸ್ಟಿರ್ಲಿಂಗ್, ಆಂಡ್ರ್ಯೂ ಬಾಲ್ಬಿರ್ನಿ (ನಾಯಕ), ಹ್ಯಾರಿ ಟೆಕ್ಟರ್, ಲೋರ್ಕನ್ ಟಕರ್, ಕರ್ಟಿಸ್ ಕ್ಯಾಂಪ್ಫರ್, ಜಾರ್ಜ್ ಡಾಕ್ರೆಲ್, ಆಂಡಿ ಮೆಕ್‌ಬ್ರಿಯನ್, ಮಾರ್ಕ್ ಅಡೇರ್, ಗ್ರಹಾಂ ಹ್ಯೂಮ್, ಮ್ಯಾಥ್ಯೂ ಹಂಫ್ರೀಸ್

ಬಾಂಗ್ಲಾದೇಶ ತಂಡ – ತಮೀಮ್ ಇಕ್ಬಾಲ್ (ನಾಯಕ), ಲಿಟನ್ ದಾಸ್, ನಜ್ಮುಲ್ ಹೊಸೈನ್ ಶಾಂಟೊ, ಮುಶ್ಫಿಕರ್ ರಹೀಮ್, ಶಕೀಬ್ ಅಲ್ ಹಸನ್, ತೌಹೀದ್, ಮೆಹಿದಿ ಹಸನ್, ತಸ್ಕಿನ್ ಅಹ್ಮದ್, ಹಸನ್ ಮುಹಮ್ಮದ್, ಎಬಾದತ್ ಹೊಸೈನ್, ನಸುಮ್ ಅಹ್ಮದ್.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:47 pm, Fri, 24 March 23