ಇತ್ತೀಚೆಗಷ್ಟೇ ಬಾಂಗ್ಲಾದೇಶ ತಂಡ ಪಾಕಿಸ್ತಾನ ವಿರುದ್ಧ ಐತಿಹಾಸಿಕ ಟೆಸ್ಟ್ ಸರಣಿ ಗೆದ್ದುಕೊಂಡು ತನ್ನ ದೇಶಕ್ಕೆ ವಾಪಸ್ಸಾಗಿದೆ. ಆದರೆ ಈ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ತಂಡದ ಮಾಜಿ ನಾಯಕ ಶಕೀಬ್ ಅಲ್ ಹಸನ್ ಮಾತ್ರ ತನ್ನ ತಾಯ್ನಾಡಿಗೆ ತೆರಳುವ ಬದಲು ಇಂಗ್ಲೆಂಡಿಗೆ ಹಾರಿದ್ದಾರೆ ಎಂದು ವರದಿಯಾಗಿದೆ. ವಾಸ್ತವವಾಗಿ ಶಕೀಬ್ ವಿರುದ್ಧ ಬಾಂಗ್ಲಾದೇಶದಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಹೀಗಾಗಿ ಎರಡನೇ ಟೆಸ್ಟ್‌ಗೂ ಮುನ್ನ ಅವರನ್ನು ತಂಡದಿಂದ ಕೈಬಿಡುವ ಭೀತಿ ಎದುರಾಗಿತ್ತು. ಆದಾಗ್ಯೂ, ಅವರ ಪ್ರಾಮುಖ್ಯತೆಯನ್ನು ಪರಿಗಣಿಸಿ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಸರಣಿಯ ನಂತರ ಕ್ರಮ ತೆಗೆದುಕೊಳ್ಳುವ ಬಗ್ಗೆ ಚಿಂತನೆ ನಡೆಸಿತ್ತು. ಇದೀಗ ಸರಣಿ ಮುಗಿದಿದ್ದು, ಶಕೀಬ್ ತನ್ನ ದೇಶಕ್ಕೆ ತೆರಳುವ ಬದಲು ಇಂಗ್ಲೆಂಡ್‌ಗೆ ತೆರಳಿದ್ದಾರೆ. ಕೊಲೆ ಪ್ರಕರಣದಲ್ಲಿ ಜೈಲು ಸೇರುವ ಭೀತಿಯಿಂದ ಶಕೀಬ್ ಇಂಗ್ಲೆಂಡಿಗೆ ಓಡಿ ಹೋಗಿದ್ದಾರಾ ಎಂಬ ಪ್ರಶ್ನೆಗಳು ಮೂಡುತ್ತಿವೆ.
ಬಾಂಗ್ಲಾದೇಶ ತಂಡ ಪಾಕಿಸ್ತಾನವನ್ನು ಸೋಲಿಸಿ ಸಂಭ್ರಮಾಚರಣೆಯಲ್ಲಿ ನಿರತವಾಗಿದೆ, ಆದರೆ ಶಕೀಬ್ ಅಲ್ ಹಸನ್ ಮಾತ್ರ ಇಂಗ್ಲೆಂಡ್‌ಗೆ ತೆರಳಿದ್ದಾರೆ. ಅಲ್ಲಿ ಇಂಗ್ಲೆಂಡ್‌ನ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲಿದ್ದಾರೆ. ಆ ಬಳಿಕ ಟೆಸ್ಟ್ ಸರಣಿಗೂ ಮುನ್ನ ನೇರವಾಗಿ ಭಾರತದಲ್ಲಿ ಬಾಂಗ್ಲಾದೇಶ ತಂಡವನ್ನು ಸೇರಿಕೊಳ್ಳಲಿದ್ದಾರೆ. ಶಕೀಬ್ ತನ್ನ ವಿರುದ್ಧ ಬಾಂಗ್ಲಾದೇಶದಲ್ಲಿ ಬಾಕಿ ಇರುವ ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗುವ ಭಯದಿಂದ ಇಂಗ್ಲೆಂಡ್‌ಗೆ ಓಡಿಹೋಗಿದ್ದಾರೋ, ಇಲ್ಲವೋ ಎಂಬುದು ಖಚಿತವಾಗಿಲ್ಲ.
ಇನ್ನು ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನವನ್ನು ಸೋಲಿಸಿದ ನಂತರ, ಬಾಂಗ್ಲಾದೇಶ ಆಟಗಾರರ ಆತ್ಮವಿಶ್ವಾಸ ಉತ್ತುಂಗದಲ್ಲಿದೆ. ಈ ಬಗ್ಗೆ ಮಾತನಾಡಿದ ಬಾಂಗ್ಲಾದೇಶದ ನಾಯಕ ನಜ್ಮುಲ್ ಹಸನ್ ಶಾಂಟೊ, ಯಾವುದೇ ತಂಡವನ್ನು ಸೋಲಿಸುವ ಸಾಮರ್ಥ್ಯವನ್ನು ಇದೀಗ ನಮ್ಮ ತಂಡ ಹೊಂದಿದೆ ಎಂದು ಹೇಳಿದರು. ಹಾಗೆಯೇ ಸೆಪ್ಟೆಂಬರ್ 19 ರಿಂದ ನಡೆಯಲಿರುವ ಭಾರತ ವಿರುದ್ಧದ ಟೆಸ್ಟ್ ಸರಣಿಯನ್ನು ಉಲ್ಲೇಖಿಸಿದ ಶಾಂಟೊ, ಪಾಕಿಸ್ತಾನದಂತೆ ಈ ಸರಣಿಯಲ್ಲೂ ಶಕೀಬ್ ಅನುಭವದ ಅಗತ್ಯವಿದೆ ಮತ್ತು ಇದು ಅವರಿಗೂ ತಿಳಿದಿದೆ. ಬಹುಶಃ ಅದಕ್ಕಾಗಿಯೇ ಅವರು ವಿಶ್ರಾಂತಿ ಪಡೆಯುವ ಬದಲು ಇಂಗ್ಲೆಂಡ್‌ನಲ್ಲಿ ಅಭ್ಯಾಸ ಮಾಡಲು ನಿರ್ಧರಿಸಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಶಕೀಬ್ ಅಲ್ ಹಸನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಅಭಿಪ್ರಾಯ ಹಂಚಿಕೊಂಡ ಶಾಂಟೊ, ‘ಶಕೀಬ್ ಪ್ರಕರಣವು ಪ್ರತ್ಯೇಕ ವಿಷಯವಾಗಿದೆ. ತಂಡದ ಪ್ರತಿಯೊಬ್ಬ ಆಟಗಾರನೂ ಅವರೊಂದಿಗಿದ್ದಾರೆ. ಶಕೀಬ್ ಅವರು ಈ ಆಟದ ಬಗ್ಗೆ ತುಂಬಾ ಉತ್ಸಾಹವನ್ನು ಹೊಂದಿದ್ದಾರೆ. ಅವರು ಯಾವಾಗಲೂ ತಂಡದ ಬಗ್ಗೆ ಮೊದಲು ಯೋಚಿಸುತ್ತಾರೆ. ಈ ವಿಚಾರವಾಗಿ ಮುಖ್ಯ ಸಲಹೆಗಾರರು ಆಟಗಾರರ ಜತೆ ಮಾತುಕತೆ ನಡೆಸಿದರೆ ಎಲ್ಲರೂ ಶಕೀಬ್ ಅವರನ್ನು ಬೆಂಬಲಿಸುತ್ತಾರೆ ಎಂದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ