
Bangladesh vs Afghanistan, 2nd T20I: ಸಿಲ್ಹೆಟ್ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಅಫ್ಘಾನಿಸ್ತಾನ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಆತಿಥೇಯ ಬಾಂಗ್ಲಾದೇಶ್ ತಂಡವು ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಬಾಂಗ್ಲಾದೇಶ್ ಸರಣಿ ಗೆದ್ದುಕೊಂಡಿದೆ. ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾ ತಂಡದ ನಾಯಕ ಶಕೀಬ್ ಅಲ್ ಹಸನ್ ಬೌಲಿಂಗ್ ಆಯ್ದುಕೊಂಡಿದ್ದರು.
ಆದರೆ ಪಂದ್ಯದ ಆರಂಭದಲ್ಲೇ ಮಳೆ ಶುರುವಾಗಿದ್ದರಿಂದ ತಲಾ 17 ಓವರ್ಗಳಿಗೆ ಪಂದ್ಯವನ್ನು ಸೀಮಿತಗೊಳಿಸಲಾಯಿತು. ಅದರಂತೆ ಮೊದಲ ಇನಿಂಗ್ಸ್ ಆಡಿದ ಅಫ್ಘಾನಿಸ್ತಾನ್ ಪರ ಪ್ರಮುಖ ಬ್ಯಾಟರ್ಗಳು ವಿಫಲರಾದರು.
ಇದಾಗ್ಯೂ ಇಬ್ರಾಹಿಂ ಝದ್ರಾನ್ (22), ಅಜ್ಮತುಲ್ಲಾ (25) ಹಾಗೂ ಕರೀಮ್ ಜನತ್ 20 ರನ್ಗಳಿಸುವ ಮೂಲಕ ತಂಡದ ಮೊತ್ತವನ್ನು 17 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 116 ಕ್ಕೆ ತಂದು ನಿಲ್ಲಿಸಿದರು.
117 ರನ್ಗಳ ಗುರಿ ಪಡೆದ ಬಾಂಗ್ಲಾದೇಶ್ ತಂಡಕ್ಕೆ ಲಿಟ್ಟನ್ ದಾಸ್ (35) ಹಾಗೂ ಅಫೀಫ್ ಹೊಸೈನ್ (24) ಉತ್ತಮ ಆರಂಭ ಒದಗಿಸಿದ್ದರು. ಇನ್ನು ತೌಹಿದ್ ಹೃದಯ್ 19 ರನ್ಗಳ ಕಾಣಿಕೆ ನೀಡಿದರೆ, ನಾಯಕ ಶಕೀಬ್ ಅಲ್ ಹಸನ್ ಅಜೇಯ 18 ರನ್ ಬಾರಿಸಿದರು. ಈ ಮೂಲಕ 16.1 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 119 ರನ್ಗಳಿಸಿ ಬಾಂಗ್ಲಾದೇಶ್ ತಂಡವು ಜಯ ಸಾಧಿಸಿತು.
ಈ ಗೆಲುವಿನೊಂದಿಗೆ 2 ಪಂದ್ಯಗಳ ಸರಣಿಯನ್ನು ಬಾಂಗ್ಲಾದೇಶ್ 2-0 ಅಂತರದಿಂದ ಗೆದ್ದುಕೊಂಡಿದೆ. ಇದಕ್ಕೂ ಮುನ್ನ ಮೊದಲ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶ್ 2 ವಿಕೆಟ್ಗಳ ಜಯ ಸಾಧಿಸಿತ್ತು.
ಬಾಂಗ್ಲಾದೇಶ್ ಪ್ಲೇಯಿಂಗ್ 11: ಲಿಟ್ಟನ್ ದಾಸ್ (ವಿಕೆಟ್ ಕೀಪರ್) , ಅಫೀಫ್ ಹೊಸೈನ್ , ಶಾಕಿಬ್ ಅಲ್ ಹಸನ್ (ನಾಯಕ) , ತೌಹಿದ್ ಹೃದಯ್ , ನಜ್ಮುಲ್ ಹೊಸೈನ್ ಶಾಂಟೋ , ಶಮೀಮ್ ಹೊಸೈನ್ , ಮೆಹಿದಿ ಹಸನ್ ಮಿರಾಜ್ , ತಸ್ಕಿನ್ ಅಹ್ಮದ್ , ನಸುಮ್ ಅಹ್ಮದ್ , ಹಸನ್ ಮಹ್ಮದ್ , ರಹ್ ಮುಸ್ತಾಫ್ ಝುರ್.
ಅಫ್ಘಾನಿಸ್ತಾನ್ ಪ್ಲೇಯಿಂಗ್ 11: ಹಝರತುಲ್ಲಾ ಝಜೈ , ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್) , ಇಬ್ರಾಹಿಂ ಝದ್ರಾನ್ , ಕರೀಮ್ ಜನತ್ , ಮೊಹಮ್ಮದ್ ನಬಿ , ನಜೀಬುಲ್ಲಾ ಝದ್ರಾನ್ , ಅಜ್ಮತುಲ್ಲಾ ಒಮರ್ಜಾಯ್ , ರಶೀದ್ ಖಾನ್ (ನಾಯಕ) , ಮುಜೀಬ್ ಉರ್ ರಹಮಾನ್ , ವಫಾದರ್ ಮೊಮಂಡ್ , ಫಜಲ್ಹಕ್ ಫಾರೂಖಿ.
ಇದನ್ನೂ ಓದಿ: IPL 2024: RCB ತಂಡಕ್ಕೆ ಮೇಜರ್ ಸರ್ಜರಿ: ಕೋಚ್ಗೆ ಗೇಟ್ ಪಾಸ್..?
ಸೇಡು ತೀರಿಸಿಕೊಂಡ ಬಾಂಗ್ಲಾ ಹುಲಿಗಳು:
ಟಿ20 ಸರಣಿಯನ್ನು ಗೆಲ್ಲುವ ಮೂಲಕ ಬಾಂಗ್ಲಾದೇಶ್ ಏಕದಿನ ಸರಣಿ ಸೋಲಿನ ಸೇಡನ್ನು ತೀರಿಸಿಕೊಂಡಿದೆ. ಈ ಸರಣಿಗೂ ಮುನ್ನ ನಡೆದ 3 ಪಂದ್ಯಗಳ ಏಕದಿನ ಸರಣಿಯನ್ನು ಅಫ್ಘಾನಿಸ್ತಾನ್ ತಂಡವು 2-1 ಅಂತರದಿಂದ ಗೆದ್ದುಕೊಂಡಿತ್ತು. ಇದೀಗ ಟಿ20 ಸರಣಿಯಲ್ಲಿ ಜಯ ಸಾಧಿಸಿ ಬಾಂಗ್ಲಾದೇಶ್ ತಂಡವು ಲೆಕ್ಕ ಚುಕ್ತಾ ಮಾಡಿಕೊಂಡಿದೆ.