ಮಿರ್ಪುರ್ನಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ್-ನ್ಯೂಝಿಲೆಂಡ್ ನಡುವಣ 2ನೇ ಟೆಸ್ಟ್ ಪಂದ್ಯದ ಮೊದಲ ದಿನವೇ 15 ವಿಕೆಟ್ಗಳು ಪತನವಾಗಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ್ ತಂಡದ ನಾಯಕ ನಜ್ಜುಲ್ ಹೊಸೈನ್ ಶಾಂಟೊ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ತೆಗೆದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ.
ಆರಂಭಿಕರಾದ ಹಸನ್ ಜಾಯ್ (14) ಹಾಗೂ ಝಾಕಿರ್ ಹಸನ್ (8) ಬೇಗನೆ ವಿಕೆಟ್ ಒಪ್ಪಿಸಿದ್ದರು. ಆ ಬಳಿಕ ಬಂದ ನಾಯಕ ನಜ್ಮುಲ್ ಹೊಸೈನ್ ಶಾಂಟೊ (5) ಹಾಗೂ ಮೊಯಿನುಲ್ ಹಕ್ (5) ಕ್ರೀಸ್ ಕಚ್ಚಿ ನಿಲ್ಲುವಲ್ಲಿ ವಿಫಲರಾದರು. ಇನ್ನು 35 ರನ್ ಬಾರಿಸಿದ್ದ ಮುಶ್ಫಿಕುರ್ ರಹೀಮ್ ಚೆಂಡನ್ನು ಕೈಯಿಂದ ತಡೆಯುವ ಮೂಲಕ ಔಟಾದರು.
ಇದಾದ ಬಳಿಕ ಶಹಾದತ್ ಹೊಸೈನ್ 31 ರನ್ಗಳಿಸಿದ್ದು ಬಿಟ್ಟರೆ ಉಳಿದ ಆಟಗಾರರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ 66.2 ಓವರ್ಗಳಲ್ಲಿ 172 ರನ್ಗಳಿಸಿ ಬಾಂಗ್ಲಾದೇಶ್ ತಂಡವು ಆಲೌಟ್ ಆಯಿತು. ನ್ಯೂಝಿಲೆಂಡ್ ಪರ ಮಿಚೆಲ್ ಸ್ಯಾಂಟ್ನರ್ ಹಾಗೂ ಗ್ಲೆನ್ ಫಿಲಿಪ್ಸ್ ತಲಾ 3 ವಿಕೆಟ್ ಕಬಳಿಸಿ ಮಿಂಚಿದರು.
ಇದಾದ ಬಳಿಕ ಮೊದಲ ಇನಿಂಗ್ಸ್ ಆರಂಭಿಸಿದ ನ್ಯೂಝಿಲೆಂಡ್ ಬ್ಯಾಟರ್ಗಳು ಸ್ಪಿನ್ನರ್ಗಳ ದಾಳಿಯಿಂದ ಕಂಗೆಟ್ಟರು. ಆರಂಭಿಕ ಆಟಗಾರರ ಟಾಮ್ ಲ್ಯಾಥಮ್ (4) ಹಾಗೂ ಡೆವೊನ್ ಕಾನ್ವೆ (11) ತೈಜುಲ್ ಇಸ್ಲಾಂ ಹಾಗೂ ಮೆಹದಿ ಹಸನ್ಗೆ ವಿಕೆಟ್ ಒಪ್ಪಿಸಿದರು.
ಆ ಬಳಿಕ ಕಣಕ್ಕಿಳಿದ ಕೇನ್ ವಿಲಿಯಮ್ಸನ್ (13) ಅವರನ್ನು ಸ್ಪಿನ್ ಬಲೆಗೆ ಬೀಳಿಸುವಲ್ಲಿ ಮೆಹದಿ ಹಸನ್ ಯಶಸ್ವಿಯಾದರು. ಇದರ ಬೆನ್ನಲ್ಲೇ ಹೆನ್ರಿ ನಿಕೋಲ್ಸ್ (1) ತೈಜುಲ್ ಎಸೆತದಲ್ಲಿ ಔಟಾದರು. ಇನ್ನು ವಿಕೆಟ್ ಕೀಪರ್ ಬ್ಯಾಟರ್ ಟಾಮ್ ಬ್ಲಂಡೆಲ್ (0) ಮೆಹದಿ ಹಸನ್ ಎಸೆತ ಸ್ಪಿನ್ಗೆ ಎಲ್ಬಿಡಬ್ಲ್ಯೂ ಆಗಿ ನಿರ್ಗಮಿಸಿದರು. ಇತ್ತ ಕೇವಲ 46 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಡೇರಿಲ್ ಮಿಚೆಲ್ (12) ಹಾಗೂ ಗ್ಲೆನ್ ಫಿಲಿಪ್ಸ್ (5) ಆಸರೆಯಾಗಿ ನಿಂತಿದ್ದಾರೆ.
ಅದರಂತೆ ಮೊದಲ ದಿನದಾಟದ ಮುಕ್ತಾಯದ ವೇಳೆ ನ್ಯೂಝಿಲೆಂಡ್ ತಂಡವು ಕೇವಲ 55 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿದೆ. ಅಂದರೆ ಬಾಂಗ್ಲಾದೇಶ್-ನ್ಯೂಝಿಲೆಂಡ್ ನಡುವಣ ಟೆಸ್ಟ್ ಪಂದ್ಯದ ಮೊದಲ ದಿನವೇ ಒಟ್ಟು 15 ವಿಕೆಟ್ಗಳು ಪತನವಾಗಿದೆ.
ಬಾಂಗ್ಲಾದೇಶ್ ಪ್ಲೇಯಿಂಗ್ 11: ಮಹ್ಮುದುಲ್ ಹಸನ್ ಜಾಯ್ , ಝಾಕಿರ್ ಹಸನ್ , ನಜ್ಮುಲ್ ಹೊಸೈನ್ ಶಾಂಟೊ (ನಾಯಕ) , ಮೊಮಿನುಲ್ ಹಕ್ , ಮುಶ್ಫಿಕರ್ ರಹೀಮ್ , ಶಾಹದತ್ ಹೊಸೈನ್ , ಮೆಹಿದಿ ಹಸನ್ ಮಿರಾಜ್ , ನೂರುಲ್ ಹಸನ್ (ವಿಕೆಟ್ ಕೀಪರ್) , ನಯೀಮ್ ಹಸನ್ , ತೈಜುಲ್ ಇಸ್ಲಾಂ , ಶೋರಿಫುಲ್ ಇಸ್ಲಾಂ.
ಇದನ್ನೂ ಓದಿ: VIDEO: ಚೆಂಡನ್ನು ಮುಟ್ಟಿ ಔಟಾದ ಮುಶ್ಫಿಕುರ್ ರಹೀಮ್
ನ್ಯೂಝಿಲೆಂಡ್ ಪ್ಲೇಯಿಂಗ್ 11: ಟಾಮ್ ಲ್ಯಾಥಮ್ , ಡೆವೊನ್ ಕಾನ್ವೇ , ಕೇನ್ ವಿಲಿಯಮ್ಸನ್ , ಹೆನ್ರಿ ನಿಕೋಲ್ಸ್ , ಡೇರಿಲ್ ಮಿಚೆಲ್ , ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್) , ಗ್ಲೆನ್ ಫಿಲಿಪ್ಸ್ , ಮಿಚೆಲ್ ಸ್ಯಾಂಟ್ನರ್ , ಕೈಲ್ ಜೇಮಿಸನ್ , ಟಿಮ್ ಸೌಥಿ (ನಾಯಕ) , ಅಜಾಜ್ ಪಟೇಲ್.