
ಭಾರತದಲ್ಲಿ ನಡೆಯಲಿರುವ ಬಾಂಗ್ಲಾದೇಶ್ ತಂಡದ ಟಿ20 ವಿಶ್ವಕಪ್ ಪಂದ್ಯಗಳನ್ನು ಸ್ಥಳಾಂತರಿಸುವಂತೆ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ಮನವಿ ಮಾಡಲಿದೆ. ಇಂಡಿಯನ್ ಪ್ರೀಮಿಯರ್ ಲೀಗ್ನಿಂದ ಬಾಂಗ್ಲಾ ಆಟಗಾರ ಮುಸ್ತಫಿಝುರ್ ರೆಹಮಾನ್ ಅವರನ್ನು ಹೊರಗಿಟ್ಟ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದ್ದು, ಹೀಗಾಗಿ ಬಾಂಗ್ಲಾದೇಶ್ ತಂಡದ ಟಿ20 ವಿಶ್ವಕಪ್ ಪಂದ್ಯಗಳು ಭಾರತದಲ್ಲಿ ನಡೆಯುವುದು ಅನುಮಾನ.
ಈ ಬಗ್ಗೆ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಪ್ರತಿಕ್ರಿಯಿಸಿರುವ ಬಾಂಗ್ಲಾದೇಶದ ಕ್ರೀಡಾ ಸಲಹೆಗಾರ ಆಸಿಫ್ ನಜ್ರುಲ್, ಬಾಂಗ್ಲಾ ತಂಡದ ಪಂದ್ಯಗಳಿಗೆ ಪರ್ಯಾಯ ಸ್ಥಳವಾಗಿ ಶ್ರೀಲಂಕಾವನ್ನು ಪ್ರಸ್ತಾಪಿಸಲು ಮಧ್ಯಂತರ ಸರ್ಕಾರವು ಬಿಸಿಬಿಗೆ ನಿರ್ದೇಶನ ನೀಡಿದೆ ಎಂದು ತಿಳಿಸಿದ್ದಾರೆ.
ಬಾಂಗ್ಲಾದೇಶ್, ಬಾಂಗ್ಲಾದೇಶ್ ಕ್ರಿಕೆಟ್ ಅಥವಾ ಬಾಂಗ್ಲಾದೇಶ್ ಕ್ರಿಕೆಟಿಗರ ಅವಮಾನವನ್ನು ನಾವು ಸಹಿಸುವುದಿಲ್ಲ. ತೀವ್ರವಾದಿ ಕೋಮುವಾದಿ ಶಕ್ತಿಗಳಿಗೆ ಮಣಿದು, ಭಾರತೀಯ ಕ್ರಿಕೆಟ್ ಮಂಡಳಿಯು ಬಾಂಗ್ಲಾದೇಶದ ಕ್ರಿಕೆಟಿಗ ಮುಸ್ತಾಫಿಝುರ್ ರೆಹಮಾನ್ ಅವರನ್ನು ತಂಡದಿಂದ ಕೈಬಿಡುವಂತೆ ಕೋಲ್ಕತ್ತಾ ನೈಟ್ ರೈಡರ್ಸ್‌ಗೆ ನಿರ್ದೇಶನ ನೀಡಿದೆ. ಇದನ್ನು ನಾನು ಬಲವಾಗಿ ಖಂಡಿಸುತ್ತೇನೆ ಮತ್ತು ಪ್ರತಿಭಟಿಸುತ್ತೇನೆ ಎಂದು ಆಸಿಫ್ ನಜ್ರುಲ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಕ್ರೀಡಾ ಸಚಿವಾಲಯದ ಉಸ್ತುವಾರಿ ಸಚಿವನಾಗಿ, ಇಡೀ ವಿಷಯವನ್ನು ವಿವರಿಸಿ ಐಸಿಸಿಗೆ ಪತ್ರ ಬರೆಯುವಂತೆ ನಾನು ಕ್ರಿಕೆಟ್ ಮಂಡಳಿಗೆ ಸೂಚಿಸಿದ್ದೇನೆ. ಬಾಂಗ್ಲಾದೇಶದ ಕ್ರಿಕೆಟಿಗನೊಬ್ಬ ಮಾನ್ಯ ಒಪ್ಪಂದವನ್ನು ಹೊಂದಿದ್ದರೂ ಭಾರತದಲ್ಲಿ ಆಡಲು ಸಾಧ್ಯವಾಗದಿದ್ದರೆ, ಬಾಂಗ್ಲಾದೇಶ್ ತನ್ನ ಇಡೀ ಕ್ರಿಕೆಟ್ ತಂಡವು ವಿಶ್ವಕಪ್ ಆಡಲು ಭಾರತಕ್ಕೆ ಪ್ರಯಾಣಿಸುವುದು ಸುರಕ್ಷಿತವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಮಂಡಳಿಯು ಸ್ಪಷ್ಟವಾಗಿ ಹೇಳಬೇಕು. ಬಾಂಗ್ಲಾದೇಶದ ವಿಶ್ವಕಪ್ ಪಂದ್ಯಗಳನ್ನು ಶ್ರೀಲಂಕಾದಲ್ಲಿ ನಡೆಸುವಂತೆ ಔಪಚಾರಿಕವಾಗಿ ವಿನಂತಿಸುವಂತೆ ನಾನು ಮಂಡಳಿಗೆ ನಿರ್ದೇಶನ ನೀಡಿದ್ದೇನೆ” ಎಂದು ಆಸಿಫ್ ನಜ್ರುಲ್ ಹೇಳಿದ್ದಾರೆ.
ಅಷ್ಟೇ ಅಲ್ಲದೆ ಬಾಂಗ್ಲಾದೇಶದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ನ ಪಂದ್ಯಗಳ ಪ್ರಸಾರವನ್ನು ನಿಲ್ಲಿಸುವಂತೆ ನಾನು ಮಾಹಿತಿ ಮತ್ತು ಪ್ರಸಾರ ಸಚಿವರನ್ನು ವಿನಂತಿಸಿದ್ದೇನೆ. ಯಾವುದೇ ಸಂದರ್ಭದಲ್ಲೂ ಬಾಂಗ್ಲಾದೇಶ್, ಬಾಂಗ್ಲಾದೇಶ್ ಕ್ರಿಕೆಟ್ ಅಥವಾ ಬಾಂಗ್ಲಾದೇಶ ಕ್ರಿಕೆಟಿಗರ ಅವಮಾನವನ್ನು ನಾವು ಸಹಿಸುವುದಿಲ್ಲ. ಗುಲಾಮಗಿರಿಯ ದಿನಗಳು ಮುಗಿದಿವೆ” ಎಂದು ಆಸಿಫ್ ನಜ್ರುಲ್ ಹೇಳಿದ್ದಾರೆ.
ಕ್ರೀಡಾ ಸಚಿವಾಲಯದ ಉಸ್ತುವಾರಿ ಸಚಿವನಾಗಿರುವ ಆಸಿಫ್ ನಜ್ರುಲ್ ಅವರ ನಿರ್ದೇಶನದ ಬೆನ್ನಲ್ಲೇ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ ತನ್ನ ಪಂದ್ಯಗಳನ್ನು ಭಾರತದಿಂದ ಸ್ಥಳಾಂತರಿಸುವಂತೆ ಐಸಿಸಿಗೆ ಪತ್ರ ಬರೆಯಲು ಮುಂದಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಟೀಮ್ ಇಂಡಿಯಾದಿಂದ ಮೂವರು ಆಟಗಾರರು ಔಟ್
ಹೀಗಾಗಿ ಮುಂಬರುವ ಟಿ20 ವಿಶ್ವಕಪ್ನಲ್ಲಿ ಬಾಂಗ್ಲಾದೇಶ್ ತಂಡವು ತನ್ನೆಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡುವ ಸಾಧ್ಯತೆಯಿದೆ. ಈಗಾಗಲೇ ಪಾಕಿಸ್ತಾನದ ಪಂದ್ಯಗಳಿಗೆ ಶ್ರೀಲಂಕಾದ ಮೈದಾನಗಳನ್ನು ನಿಗದಿ ಮಾಡಲಾಗಿದ್ದು, ಅದೇ ರೀತಿ ಬಾಂಗ್ಲಾ ತಂಡದ ಮ್ಯಾಚ್ಗಳಿಗೂ ಶ್ರೀಲಂಕಾ ಆತಿಥ್ಯವಹಿಸಬಹುದು.