IND vs BAN: ಬಾಂಗ್ಲಾದೇಶ್ ವಿರುದ್ಧ ಗೆದ್ದು ಬೀಗಿದ ಟೀಮ್ ಇಂಡಿಯಾ

| Updated By: ಝಾಹಿರ್ ಯೂಸುಫ್

Updated on: Apr 29, 2024 | 12:40 PM

Bangladesh Women vs India Women: ಬಾಂಗ್ಲಾದೇಶ್ ಮಹಿಳಾ ತಂಡದ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಟೀಮ್ ಇಂಡಿಯಾ ಶುಭಾರಂಭ ಮಾಡಿದೆ. ಸಿಲ್ಹೆಟ್​ನಲ್ಲಿ ನಡೆದ ಈ ಪಂದ್ಯದಲ್ಲಿ ಆತಿಥೇಯರನ್ನು 45 ರನ್​ಗಳಿಂದ ಸೋಲಿಸಿ ಟೀಮ್ ಇಂಡಿಯಾ ವನಿತೆಯರು ಗೆಲುವಿನ ನಗೆ ಬೀರಿದ್ದಾರೆ.

IND vs BAN: ಬಾಂಗ್ಲಾದೇಶ್ ವಿರುದ್ಧ ಗೆದ್ದು ಬೀಗಿದ ಟೀಮ್ ಇಂಡಿಯಾ
Team India
Follow us on

ಬಾಂಗ್ಲಾದೇಶ್ ಮಹಿಳಾ ತಂಡದ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ಮಹಿಳಾ ತಂಡ ಭರ್ಜರಿ ಜಯ ಸಾಧಿಸಿದೆ. ಸಿಲ್ಹೆಟ್​ನ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ (Team India) ಬ್ಯಾಟಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ (9) 3ನೇ ಓವರ್​ನಲ್ಲಿ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಜೊತೆಗೂಡಿದ ಶಫಾಲಿ ವರ್ಮಾ (31) ಹಾಗೂ ಯಾಸ್ತಿಕಾ ಭಾಟಿಯಾ (36) ಉತ್ತಮ ಜೊತೆಯಾಟ ಪ್ರದರ್ಶಿಸಿದರು.

ಇನ್ನು ನಾಯಕಿ ಹರ್ಮನ್​ಪ್ರೀತ್ ಕೌರ್ 30 ರನ್​ಗಳ ಕೊಡುಗೆ ನೀಡಿದರೆ, ರಿಚಾ ಘೋಷ್ 23 ರನ್​ ಬಾರಿಸಿದರು. ಈ ಮೂಲಕ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 145 ರನ್ ಕಲೆಹಾಕಿತು.

148 ರನ್​ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಬಾಂಗ್ಲಾದೇಶ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ರೇಣುಕಾ ಸಿಂಗ್ ಯಶಸ್ವಿಯಾದರು. ಮೊದಲ ಓವರ್​ನ 3ನೇ ಎಸೆತದಲ್ಲಿ ದಿಲಾರಾ (4) ವಿಕೆಟ್ ಪಡೆದರೆ, 5ನೇ ಓವರ್​ನಲ್ಲಿ ಸೋಭಾನ ಮೊಸ್ತರಿ (6) ಅನ್ನು ಕ್ಲೀನ್ ಬೌಲ್ಡ್ ಮಾಡಿದರು. ಇದರ ಬೆನ್ನಲ್ಲೇ ಮುರ್ಷಿದಾ ಖಾತುನ್ (13) ಗೆ ದೀಪ್ತಿ ಶರ್ಮಾ ಪೆವಿಲಿಯನ್ ಹಾದಿ ತೋರಿಸಿದರು.

ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಏಕಾಂಗಿ ಹೋರಾಟ ನಡೆಸಿದ ನಿಗರ್ ಸುಲ್ತಾನ 48 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ 51 ರನ್ ಬಾರಿಸಿದರು. ಈ ಹಂತದಲ್ಲಿ ದಾಳಿಗಿಳಿದ ಪೂಜಾ ವಸ್ತ್ರಾಕರ್, ನೀಗರ್ ಸುಲ್ತಾನ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ಆ ಬಳಿಕ ಟೀಮ್ ಇಂಡಿಯಾ ಬೌಲರ್​ಗಳು ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಪರಿಣಾಮ ಬಾಂಗ್ಲಾದೇಶ್ ತಂಡವು 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 101 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಟೀಮ್ ಇಂಡಿಯಾ 44 ರನ್​ಗಳ ಜಯ ಸಾಧಿಸಿದೆ. ಟೀಮ್ ಇಂಡಿಯಾ ಪರ ರೇಣುಕಾ ಸಿಂಗ್ 3 ವಿಕೆಟ್ ಕಬಳಿಸಿದರೆ, ಪೂಜಾ ವಸ್ತ್ರಾಕರ್ 2 ವಿಕೆಟ್ ಪಡೆದು ಮಿಂಚಿದರು. ಇನ್ನು ಈ ಗೆಲುವಿನೊಂದಿಗೆ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.

ಬಾಂಗ್ಲಾದೇಶ್ ಪ್ಲೇಯಿಂಗ್ 11: ದಿಲಾರಾ ಅಕ್ಟರ್ , ಮುರ್ಷಿದಾ ಖಾತುನ್ , ಶೋರ್ನಾ ಅಕ್ಟರ್ , ನಿಗರ್ ಸುಲ್ತಾನಾ (ನಾಯಕಿ) , ಫಾಹಿಮಾ ಖಾತುನ್ , ರಬೇಯಾ ಖಾನ್ , ಸೋಭಾನಾ ಮೊಸ್ಟರಿ , ನಹಿದಾ ಅಕ್ಟರ್ , ಸುಲ್ತಾನಾ ಖಾತುನ್ , ಮಾರುಫಾ ಅಕ್ಟರ್ , ಫರಿಹಾ ತ್ರಿಸ್ನಾ.

ಇದನ್ನೂ ಓದಿ: IPL 2024: ಟೀಮ್ ಇಂಡಿಯಾದ ವಿಶ್ವ ದಾಖಲೆ ಮುರಿದ CSK

ಭಾರತ ಪ್ಲೇಯಿಂಗ್ 11: ಸ್ಮೃತಿ ಮಂಧಾನ , ಶಫಾಲಿ ವರ್ಮಾ , ಯಾಸ್ತಿಕಾ ಭಾಟಿಯಾ , ದೀಪ್ತಿ ಶರ್ಮಾ , ಹರ್ಮನ್‌ಪ್ರೀತ್ ಕೌರ್ (ನಾಯಕಿ) , ಎಸ್​ ಸಜನಾ , ರಿಚಾ ಘೋಷ್ (ವಿಕೆಟ್ ಕೀಪರ್) , ಪೂಜಾ ವಸ್ತ್ರಾಕರ್ , ಶ್ರೇಯಾಂಕಾ ಪಾಟೀಲ್ , ರೇಣುಕಾ ಠಾಕೂರ್ ಸಿಂಗ್ , ರಾಧಾ ಯಾದವ್.

 

Published On - 12:40 pm, Mon, 29 April 24