PAK vs BAN: ಪಾಕ್ ಪಡೆಯನ್ನು ಬಗ್ಗು ಬಡಿದು ಟೆಸ್ಟ್ ಸರಣಿ ಗೆದ್ದ ಬಾಂಗ್ಲಾದೇಶ್

|

Updated on: Sep 03, 2024 | 3:26 PM

Pakistan vs Bangladesh: ಪಾಕಿಸ್ತಾನ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಬಾಂಗ್ಲಾದೇಶ್ ತಂಡವು 10 ವಿಕೆಟ್​ಗಳಿಂದ ಗೆದ್ದುಕೊಂಡಿತ್ತು. ಇದೀಗ 2ನೇ ಟೆಸ್ಟ್ ಪಂದ್ಯದಲ್ಲಿ 6 ವಿಕೆಟ್​ಗಳ ಜಯ ಸಾಧಿಸುವ ಮೂಲಕ ಸರಣಿಯನ್ನು ವಶಪಡಿಸಿಕೊಂಡಿದೆ. ಈ ಮೂಲಕ ಬಾಂಗ್ಲಾ ಪಡೆಯು ಪಾಕಿಸ್ತಾನದಲ್ಲಿ ಐತಿಹಾಸಿಕ ಗೆಲುವು ಸಾಧಿಸಿದೆ.

PAK vs BAN: ಪಾಕ್ ಪಡೆಯನ್ನು ಬಗ್ಗು ಬಡಿದು ಟೆಸ್ಟ್ ಸರಣಿ ಗೆದ್ದ ಬಾಂಗ್ಲಾದೇಶ್
Bangladesh
Follow us on

ರಾವಲ್ಪಿಂಡಿಯಲ್ಲಿ ನಡೆದ ಪಾಕಿಸ್ತಾನ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ್ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಬಾಂಗ್ಲಾದೇಶ್ ತಂಡ 2-0 ಅಂತರದಿಂದ ವಶಪಡಿಸಿಕೊಂಡಿದೆ. ವಿಶೇಷ ಎಂದರೆ ಇದು ಪಾಕಿಸ್ತಾನ್ ವಿರುದ್ಧದ ಬಾಂಗ್ಲಾ ತಂಡದ ಮೊದಲ ಸರಣಿ ಗೆಲುವು.

ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ್ ತಂಡವು ಬೌಲಿಂಗ್ ಆಯ್ದುಕೊಂಡಿತ್ತು. ಅದರಂತೆ ಪ್ರಥಮ ಇನಿಂಗ್ಸ್ ಆರಂಭಿಸಿದ ಮೊದಲ ಇನಿಂಗ್ಸ್​ನಲ್ಲಿ 274 ರನ್​ಗಳನ್ನು ಪೇರಿಸಿ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಬಾಂಗ್ಲಾದೇಶ್ ತಂಡವು ಲಿಟ್ಟನ್ ದಾಸ್ (138) ಶತಕದ ನೆರವಿನಿಂದ 262 ರನ್​ಗಳಿಸಿ ಆಲೌಟ್ ಆಗಿದೆ.

ಪಾಕ್ ಪಡೆಗೆ ಅಲ್ಪ ಮುನ್ನಡೆ:

ಮೊದಲ ಇನಿಂಗ್ಸ್​ನಲ್ಲಿ 12 ರನ್​ಗಳ ಮುನ್ನಡೆ ಪಡೆದ ಪಾಕಿಸ್ತಾನ್ ತಂಡವು ದ್ವಿತೀಯ ಇನಿಂಗ್ಸ್​ನಲ್ಲಿ ಅತ್ಯಂತ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿತು. ಬಾಂಗ್ಲಾ ವೇಗಿಗಳ ಮಾರಕ ದಾಳಿ ಮುಂದೆ ಕ್ರೀಸ್ ಕಚ್ಚಿ ನಿಲ್ಲಲು ಪರದಾಡಿದ ಪಾಕ್​ ಬ್ಯಾಟರ್​ಗಳು ಪೆವಿಲಿಯನ್ ಪರೇಡ್ ನಡೆಸಿದರು. ಪರಿಣಾಮ ಕೇವಲ 172 ರನ್​ಗಳಿಗೆ ಪಾಕಿಸ್ತಾನ್ ತಂಡವು ಆಲೌಟ್ ಆಯಿತು. ಬಾಂಗ್ಲಾದೇಶ್ ಪರ ಯುವ ವೇಗಿ ಹಸನ್ ಮಹಮೂದ್ 43 ರನ್ ನೀಡಿ 5 ವಿಕೆಟ್ ಕಬಳಿಸಿದರೆ, ನಹೀದ್ ರಾಣ 44 ರನ್​ ಬಿಟ್ಟು ಕೊಟ್ಟು 4 ವಿಕೆಟ್ ಕಬಳಿಸಿ ಮಿಂಚಿದರು.

185 ರನ್​ಗಳ ಗುರಿ:

ಮೊದಲ ಇನಿಂಗ್ಸ್​ನ ಅಲ್ಪ ಹಿನ್ನಡೆಯೊಂದಿಗೆ ಬಾಂಗ್ಲಾದೇಶ್ ತಂಡವು ದ್ವಿತೀಯ ಇನಿಂಗ್ಸ್​ನಲ್ಲಿ 185 ರನ್​ಗಳ ಗುರಿ ಪಡೆಯಿತು. ಅದರಂತೆ ನಾಲ್ಕನೇ ದಿನದಾಟದ ಅಂತ್ಯದಲ್ಲಿ ಬಾಂಗ್ಲಾದೇಶ್ ಆರಂಭಿಕರು 42 ರನ್ ಕಲೆಹಾಕಿದ್ದರು.

ಇನ್ನು ಐದನೇ ದಿನದಾಟದಲ್ಲಿ ಉತ್ತಮ ಬ್ಯಾಟಿಂಗ್ ಮುಂದುವರೆಸಿದ ಝಕೀರ್ ಹಸನ್ 40 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಮತ್ತೋರ್ವ ಆರಂಭಿಕ ಶದ್ಮಾನ್ ಇಸ್ಲಾಂ 24 ರನ್​ಗಳಿಸಿ ಇನಿಂಗ್ಸ್ ಅಂತ್ಯಗೊಳಿಸಿದರು.

ಈ ಹಂತದಲ್ಲಿ ಜೊತೆಯಾದ ನಾಯಕ ನಜ್ಮುಲ್ ಹೊಸೈನ್ ಶಾಂತೊ ಹಾಗೂ ಮೊಮಿನುಲ್ ಹಕ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು. ಅಲ್ಲದೆ 3ನೇ ವಿಕೆಟ್​ಗೆ ಅರ್ಧಶತಕದ ಜೊತೆಯಾಟವಾಡಿ ಶಾಂತೊ (38) ಔಟಾದರು. ಇದರ ಬೆನ್ನಲ್ಲೇ ಮೊಮಿನುಲ್ (34) ಕೂಡ ಒಪ್ಪಿಸಿದರು.

ಈ ವೇಳೆ ಕಣಕ್ಕಿಳಿದ ಅನುಭವಿ ಆಟಗಾರರಾದ ಶಕೀಬ್ ಅಲ್ ಹಸನ್ ಹಾಗೂ ಮುಶ್ಫಿಕುರ್ ರಹೀಮ್ ಎಚ್ಚರಿಕೆಯ ಆಟದೊಂದಿಗೆ ಬಾಂಗ್ಲಾದೇಶ್ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಮೂಲಕ ಬಾಂಗ್ಲಾದೇಶ್ ತಂಡವು 4 ವಿಕೆಟ್ ನಷ್ಟಕ್ಕೆ 185 ರನ್ ಬಾರಿಸಿ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

10ನೇ ಟೆಸ್ಟ್ ಸರಣಿ ಗೆಲುವು:

ಬಾಂಗ್ಲಾದೇಶ್ ತಂಡವು ಈವರೆಗೆ 144 ಟೆಸ್ಟ್ ಪಂದ್ಯಗಳನ್ನಾಡಿದೆ. ಈ ವೇಳೆ ಗೆದ್ದಿರುವುದು ಕೇವಲ 10 ಟೆಸ್ಟ್ ಸರಣಿಗಳನ್ನು ಮಾತ್ರ ಎಂಬುದು ವಿಶೇಷ. 2005 ರಲ್ಲಿ ಝಿಂಬಾಬ್ವೆ ತಂಡವನ್ನು 1-0 ಅಂತರದಿಂದ ಮಣಿಸಿ ಬಾಂಗ್ಲಾದೇಶ್ ಚೊಚ್ಚಲ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿತ್ತು.

ಇದಾದ ಬಳಿಕ 2009 ರಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 2-0 ಅಂತರದಿಂದ ಮಣಿಸಿ ಟ್ರೋಫಿ ಎತ್ತಿ ಹಿಡಿಯಿತು. ಇದು ಬಾಂಗ್ಲಾ ತಂಡದ ಮೊದಲ ವಿದೇಶಿ ಟೆಸ್ಟ್ ಸರಣಿ ಗೆಲುವು ಎಂಬುದು ವಿಶೇಷ.

2015 ರಲ್ಲಿ ಝಿಂಬಾಬ್ವೆ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು 3-0 ಅಂತರದಿಂದ ಗೆಲ್ಲುವಲ್ಲಿ ಬಾಂಗ್ಲಾದೇಶ್ ತಂಡ ಯಶಸ್ವಿಯಾಗಿತ್ತು. ಇನ್ನು 2019 ರಲ್ಲೂ ವೆಸ್ಟ್ ಇಂಡೀಸ್ ತಂಡವನ್ನು 2-0 ಅಂತರದಿಂದ ಮಣಿಸಿತ್ತು.

2020 ರಲ್ಲಿ ಝಿಂಬಾಬ್ವೆ ಹಾಗೂ 2021-22 ರಲ್ಲಿ ಝಿಂಬಾಬ್ವೆ ವಿರುದ್ಧ ಹಾಗೂ 2022-23 ರಲ್ಲಿ ಐರ್ಲೆಂಡ್ ಹಾಗೂ ಅಫ್ಘಾನಿಸ್ತಾನ್ ವಿರುದ್ಧ ಬಾಂಗ್ಲಾದೇಶ್ ತಂಡವು ಟೆಸ್ಟ್ ಸರಣಿಗಳನ್ನು ಗೆದ್ದುಕೊಂಡಿದ್ದರು.

ಇದೀಗ ಪಾಕಿಸ್ತಾನ್ ತಂಡವನ್ನು ಪಾಕ್​ನಲ್ಲೇ ಬಗ್ಗು ಬಡಿಯುವ ಮೂಲಕ ಬಾಂಗ್ಲಾದೇಶ್ ತಂಡ ಇತಿಹಾಸ ನಿರ್ಮಿಸಿದೆ. ಈ ಮೂಲಕ ಮೂರನೇ ಬಾರಿಗೆ ಟೆಸ್ಟ್ ಸರಣಿ ಗೆಲ್ಲುವಲ್ಲಿ ಬಾಂಗ್ಲಾ ಪಡೆ ಯಶಸ್ವಿಯಾಗಿದೆ.

ಬಾಂಗ್ಲಾದೇಶ್ ಪ್ಲೇಯಿಂಗ್ 11: ಶಾದ್ಮನ್ ಇಸ್ಲಾಂ , ಝಾಕಿರ್ ಹಸನ್ , ನಜ್ಮುಲ್ ಹುಸೇನ್ ಶಾಂತೊ (ನಾಯಕ) , ಮೊಮಿನುಲ್ ಹಕ್ , ಮುಶ್ಫಿಕರ್ ರಹೀಮ್ , ಲಿಟ್ಟನ್ ದಾಸ್ (ವಿಕೆಟ್ ಕೀಪರ್) , ಶಕಿಬ್ ಅಲ್ ಹಸನ್ , ಮೆಹಿದಿ ಹಸನ್ ಮಿರಾಜ್ , ಹಸನ್ ಮಹಮೂದ್ , ತಸ್ಕಿನ್ ಅಹ್ಮದ್ , ನಹಿದ್ ರಾಣ.

ಇದನ್ನೂ ಓದಿ: 2 ವರ್ಷ ಬೆಂಚ್ ಕಾಯಿಸಿದ RCBಗೆ ಬ್ಯಾಟ್ ಮೂಲಕವೇ ಉತ್ತರ ನೀಡಿದ ಮನೋಜ್ ಭಾಂಡಗೆ

ಪಾಕಿಸ್ತಾನ್ ಪ್ಲೇಯಿಂಗ್ 11: ಅಬ್ದುಲ್ಲಾ ಶಫೀಕ್ , ಸೈಮ್ ಅಯೂಬ್ , ಶಾನ್ ಮಸೂದ್ (ನಾಯಕ) , ಬಾಬರ್ ಆಝಂ, ಸೌದ್ ಶಕೀಲ್ , ಮೊಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್) , ಅಘಾ ಸಲ್ಮಾನ್ , ಖುರ್ರಂ ಶಹಜಾದ್ , ಅಬ್ರಾರ್ ಅಹ್ಮದ್ , ಮೀರ್ ಹಮ್ಜಾ , ಮೊಹಮ್ಮದ್ ಅಲಿ.

 

Published On - 3:02 pm, Tue, 3 September 24